Advertisement

25 ದಂಪತಿ ಒಂದುಗೂಡಿಸಿದ ಅದಾಲತ್‌!

01:13 PM Dec 19, 2021 | Team Udayavani |

ಮೈಸೂರು: ಅವರು ದಾಂಪತ್ಯ ಜೀವನದಿಂದ ಪರಸ್ಪರ ದೂರವಾಗಿದ್ದರು. ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಇಂತಹ 25 ದಂಪತಿಗಳನ್ನು ಮತ್ತೆ ಒಂದು ಮಾಡಿದ್ದುಶನಿವಾರ ಇಲ್ಲಿ ನಡೆದ ಮೆಗಾ ಲೋಕ ಅದಾಲತ್‌.

Advertisement

ಮೈಸೂರಿನಲ್ಲಿ ಶನಿವಾರ ಮಳಲವಾಡಿಯಲ್ಲಿರುವ ನ್ಯಾಯಾಲಯದ ಕಟ್ಟಡದಲ್ಲಿ ಮೆಗಾ ಲೋಕ ಅದಾಲತ್‌ ನಡೆಯಿತು. ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದ 25 ದಂಪತಿಗಳು ಮತ್ತೆ ಒಗ್ಗೂಡಿದರು. ಈ ದಂಪತಿಗಳನ್ನು ರಾಜಿ ಮಾಡಿಸಿ ಮತ್ತೆ ಒಗ್ಗೂಡಿಸಲಾಯಿತು. ಒಟ್ಟು 128 ಪ್ರಕರಣಗಳಲ್ಲಿ 25 ದಂಪತಿಗಳು ತಿಳಿ ಹೇಳಿದಾಗ ಮತ್ತೆ ಒಗ್ಗೂಡಿದ್ದಾರೆ.

ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರಾದ ಎಂ.ಎಲ್‌.ರಘುನಾಥ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕೌಟುಂಬಿಕ ನ್ಯಾಯಾಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಇದು ಸಿವಿಲ್‌ ಪ್ರಕರಣಗಳಿಗಿಂತ ಹೆಚ್ಚಾಗುತ್ತಿದೆ. ಇದೇ ವೇಳೆ ರಾಜಿ ಪ್ರಕರಣಗಳೂ ಹೆಚ್ಚಾಗುತ್ತಿದೆ. ಸಣ್ಣಪುಟ್ಟ ಕಾರಣಕ್ಕೂ ಡಿವೋರ್ಸ್‌ಗಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿರುವ ಪ್ರಕರಣಗಳೂ ಇವೆ. ರಾಜಿ ಪ್ರಕರಣದಲ್ಲಿ ಡಿವೋರ್ಸ್‌ ಹೇಗೆ ಮಾನಸಿಕವಾಗಿ ಇಬ್ಬರ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಮಕ್ಕಳ ಮೇಲೆ ಹೇಗೆ ದುಷ್ಪರಿಣಾಮ ಉಂಟು ಮಾಡುತ್ತದೆಎಂದು ವಿವರಿಸಿದಾಗ ಅನೇಕರು ತಿದ್ದಿಕೊಂಡಿದ್ದಾರೆ ಎಂದು ನ್ಯಾಯಾಧೀಶರಾದ ರಘುನಾಥ್‌ ತಿಳಿಸಿದರು.

ಹೊಸ ಜೀವನ: ಮತ್ತೆ ಒಗ್ಗೂಡಿದ ದಂಪತಿಗಳಿಗೆ ನ್ಯಾಯಾಧೀಶರು ತಿಳಿ ಹೇಳಿದರು. ಹಿಂದಿನ ಕಹಿ ಘಟನೆಗಳನ್ನು ಮರೆಯಬೇಕು. ಹೊಸ ಜೀವನ ಆರಂಭಿಸಬೇಕು ಎಂದು ಹಿತವಚನನುಡಿದರು. ಅನ್ಯೋನ್ಯ ದಾಂಪತ್ಯ ಹೇಗೆ? ಎಂಬ ಪುಸ್ತಕವನ್ನು ದಂಪತಿಗಳಿಗೆ ನೀಡಿದರು. ಡಾ.ಸಿ.ಆರ್‌.ಚಂದ್ರಶೇಖರ್‌ ಅವರು ಈ ಪುಸ್ತಕ ರಚಿಸಿದ್ದಾರೆ. ನ್ಯಾಯಾಧೀಶರುನೀಡಿದ ಸಿಹಿಯನ್ನು ದಂಪತಿಗಳು ಪರಸ್ಪರ ಒಬ್ಬರಿಗೊಬ್ಬರು ತಿನ್ನಿಸಿ ಸಂತಸಪಟ್ಟರು.

Advertisement

ಸಾವಿರ ಡಿವೋರ್ಸ್‌ ಕೇಸ್‌: ಮೈಸೂರು ನಗರ ಹಾಗೂ ಮೈಸೂರು ತಾಲೂಕು ವ್ಯಾಪ್ತಿಯಲ್ಲಿ ಒಂದು ವರ್ಷಕ್ಕೆ ಸುಮಾರು ಒಂದು ಸಾವಿರ ಡಿವೋರ್ಸ್‌ ಪ್ರಕರಣಗಳು ದಾಖಲಾಗುತ್ತಿವೆ. ಡಿವೋರ್ಸ್‌ ದಾವೆಗಳಲ್ಲಿ ಪರಸ್ಪರ ದಂಪತಿಗಳು ಒಪ್ಪಿಗೆಯಿಂದಲೇ ದಾವೆ ಹೂಡಿರುವ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಮದುವೆಯಾಗಿ ಮರುದಿನ ಬೆಳಗ್ಗೆಯೇ ಬಂದು ಡಿವೋರ್ಸ್‌ಗಾಗಿ ದಾವೆ ಹೂಡಿರುವ ಪ್ರಕರಣಗಳೂ ಇವೆ ಎಂದು ನ್ಯಾಯಾಧೀಶರಾದ ರಘುನಾಥ್‌ ತಿಳಿಸಿದರು.

ಮದುವೆಗೆ ಮುನ್ನವೂ ಕಾನೂನು ಸೇವೆಗಳ ಪ್ರಾಧಿಕಾರದಿಂದ ವರ ಮತ್ತು ವಧುವಿಗೆ ಕಾನೂನಿನ ಅಂಶಗಳ ಕುರಿತು ಕೌನ್ಸೆಲಿಂಗ್‌ ನಡೆಸುವ ಅವಕಾಶವೂ ಇದೆ.ಕೆಲವರು ಹೀಗೆ ಬಂದು ಉಚಿತವಾಗಿ ಕೌನ್ಸೆಲಿಂಗ್‌ ಪಡೆಯುತ್ತಾರೆ. ಇಲ್ಲಿ ಮದುವೆ ನಂತರ ಉದ್ಬವಿಸುವ ಕಾನೂನಿನ ಅಂಶಗಳು, ಈ ಕುರಿತು ವರ ಹಾಗೂ ವಧು ಮತ್ತು ಅವರ ಕಡೆಯವರಿಗೆ ಕಾನೂನಿನ ವಿಚಾರದಲ್ಲಿಇರುವ ಪ್ರಶ್ನೆಗಳಿಗೆ ಮಾಹಿತಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಕೌಟುಂಬಿಕ ನ್ಯಾಯಾಲಯ ಹಾಗೂ ಒಂದನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾದ ವೇಲಾ ಖೊಡೆ, 2ನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾದ ಎಚ್‌.ಎಂ.ವಿರೂಪಾಕ್ಷಯ್ಯ, 3ನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾದ ಕೆ.ಗಿರೀಶ್‌ ಭಟ್‌, 4ನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾದ ಸುಧಾ ಸೇತುರಾಮ್‌ ಓಂಕಾರ, ಹಿರಿಯ ಸಿವಿಲ್‌ ನ್ಯಾಯಾಧೀಶರಾದ ದೇವರಾಜ ಭೂತೆ,ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್‌ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next