ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಮತ್ತು ಅದರ ಎಂಟು ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲಾವಧಿಗೆ ನಿಷೇಧಿಸಿದ ಬೆನ್ನಲ್ಲೇ ಪಿಎಫ್ ಐಗೆ ಸೇರಿದ ಅಧಿಕೃತ ಟ್ವಿಟರ್ ಹಾಗೂ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಗುರುವಾರ (ಸೆಪ್ಟೆಂಬರ್ 29) ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ನಿಷೇಧದ ಬಳಿಕವೂ ಕಾರ್ಯಾಚರಣೆ; ಪಿಎಫ್ಐ, ಎಸ್ ಡಿಪಿಐ ಕಚೇರಿ ಮೇಲೆ ಪೊಲೀಸ್ ದಾಳಿ
ಕಾನೂನು ಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆಯನ್ವಯ ಪಿಎಫ್ ಐ ಮತ್ತು ಅದರ ಎಂಟು ಸಹ ಸಂಘಟನೆಗಳನ್ನು ನಿಷೇಧಿಸಿದ ನಂತರವೂ ತಮ್ಮ ಚಟುವಟಿಕೆಗಳ ಕುರಿತು ಪ್ರಚಾರ ಕಾರ್ಯ ನಡೆಸದಂತೆ ಮುಂಜಾಗ್ರತಾ ಕ್ರಮವಾಗಿ ಪಿಎಫ್ ಐ ಹಾಗೂ ಅದರ ಸಹ ಸಂಘಟನೆಗಳ ವೆಬ್ ಸೈಟ್ಸ್ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶದಲ್ಲಿ ವಿವರಿಸಿದೆ.
ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಜಾಗತಿಕ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಕೇಂದ್ರ ಗೃಹ ಸಚಿವಾಲಯ ಬುಧವಾರ ಪಿಎಫ್ ಐ ಮತ್ತು ಸಹವರ್ತಿ ಸಂಘಟನೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೂ ಮೊದಲು ದೇಶಾದ್ಯಂತ ಎನ್ ಐಎ ಮತ್ತು ಜಾರಿ ನಿರ್ದೇಶನಾಲಯ ಪಿಎಫ್ ಐ ಕಚೇರಿ, ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿತ್ತು.
ಎನ್ ಐಎ ಮತ್ತು ಜಾರಿ ನಿರ್ದೇಶನಾಲಯ ಹಲವು ರಾಜ್ಯಗಳಲ್ಲಿ ಎರಡು ಬಾರಿ ದಾಳಿ ನಡೆಸುವ ಮೂಲಕ ಸುಮಾರು 250ಕ್ಕೂ ಅಧಿಕ ಪಿಎಫ್ ಐ ಕಾರ್ಯಕರ್ತರು, ಸದಸ್ಯರನ್ನು ಬಂಧಿಸಿದ್ದು, ಈ ಸಂದರ್ಭದಲ್ಲಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.