Advertisement

ರೈತರ ಸಮೃದ್ಧಿಗಾಗಿ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳ ಚರ್ಚೆಗೆ ಸಭೆ

11:46 AM Jun 16, 2017 | |

ಸಾಂಗ್ಲಿ: ಕೃಷ್ಯುತ್ಪನ್ನಗಳಿಗೆ ಯೋಗ್ಯ ದರ ಸಿಗಬೇಕು. ಇದಕ್ಕಾಗಿ ಸ್ವಾಮಿನಾಥನ್‌ ಆಯೋಗದ ವರದಿ ಮತ್ತು ಅದು ಮಾಡಿರುವ ಶಿಫಾರ ಸುಗಳನ್ನು  ದೇಶವ್ಯಾಪಿ ಚರ್ಚಿಸಲು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ವತಿಯಿಂದ ಜೂ.16ರಂದು ದಿಲ್ಲಿಯ ಗಾಂಧಿ ಭವನದಲ್ಲಿ ಸಭೆ ಜರಗಲಿದ್ದು ಸಭೆಯಲ್ಲಿ ದೇಶದಲ್ಲಿನ ರೈತ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಹಾಗೂ ಸಂಸದ ರಾಜು ಶೆಟ್ಟಿ ಮಾಹಿತಿ ನೀಡಿದ್ದಾರೆ.

Advertisement

ಕೃಷಿ ಬೆಳೆಗಳ ಉತ್ಪಾದನೆ ಖರ್ಚಿನ ಮೇಲೆ ಶೇ.50 ರಷ್ಟು ಲಾಭ ದೊರೆತರೆ ಮಾತ್ರ ಕೃಷಿ   ಶಾಶ್ವತವಾಗಿ ಉಳಿಯುತ್ತದೆ ಎಂಬುದನ್ನು ಸ್ವಾಮಿನಾಥನ್‌ ಆಯೋಗದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ರೈತರ ಸಾಲ ಮನ್ನಾ ಇದು ತಾತೂ³ರ್ತಿಕ ಚಿಕಿತ್ಸೆ ಆಗಿದ್ದು ಕಾಯಂ ಸ್ವರೂಪದ ಉಪಾಯೋಜನೆ ಮಾಡಬೇಕಾದರೆ ಕೃಷ್ಯುತ್ಪನ್ನಗಳಿಗೆ ಯೋಗ್ಯ ದರ ದೊರೆಯುವುದು ಅವಶ್ಯಕವಾಗಿದೆ. ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದ್ದು ಇದಕ್ಕಾಗಿ ಮುಖ್ಯಮಂತ್ರಿ ನೇತೃತ್ವದ ನಿಯೋಗವೊಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೆಟಿ ಮಾಡಲಿದೆ. ಈ ನಿಯೋಗದಲ್ಲಿ ಸಚಿವರು, ಸಕಾಣು ಸಮಿತಿಯ ಸದಸ್ಯರು ಇರಲಿದ್ದಾರೆ ಎಂದು ಶೆಟ್ಟಿ ಈ ವೇಳೆ ಹೇಳಿದರು.

ದೇಶದ ಎಲ್ಲ ರಾಜ್ಯಗಳಲ್ಲಿ ಕೃಷಿ ಅಡಚಣೆಯಲ್ಲಿದೆ. ಸರಕಾರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆಸಿದ ರೈತರ ಬೃಹತ್‌ ಪ್ರತಿಭಟನೆಯ ಪ್ರಭಾವ ದೇಶದ ಇತರ ರಾಜ್ಯಗಳ ಮೇಲೂ ಆಗಿದೆ. ಮಧ್ಯ ಪ್ರದೇಶ, ರಾಜಸ್ಥಾನ್‌, ಪಂಜಾಬ್‌, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಣಾ ಈ ರಾಜ್ಯಗಳಲ್ಲಿ ರೈತರು ತಮ್ಮ ಸಾಲ ಮನ್ನಾಕ್ಕಾಗಿ ಸರಕಾರದ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ ಎಂದರು.

ರೈತರನ್ನು ಸಮೃದ್ಧಗೊಳಿಸುವ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳು
1. ಕೃಷಿ ಉತ್ಪಾದನೆ ಖರ್ಚು ಹೊರತುಪಡಿಸಿ ಕೃಷ್ಯುತ್ಪನ್ನಗಳಿಗೆ ಶೇ.50 ರಷ್ಟು ಬೆಂಬಲ ಬೆಲೆ ನೀಡಬೇಕು.
2. ಕೃಷ್ಯುತ್ಪನ್ನಗಳಿಗೆ ಮೂಲಭೂತ ದರ ನೀಡುವ ಪದ್ಧತಿಯಲ್ಲಿ ಸುಧಾರಣೆ ತಂದು ಗೋಧಿ ಮತ್ತು ಇತರೆ ಆಹಾರ ಧಾನ್ಯಗಳನ್ನು ಹೊರತುಪಡಿಸಿ ಬೆಳೆಗಳಿಗೆ ಮೂಲಭೂತ ದರ ಸಿಗುವ ವ್ಯವಸ್ಥೆ ಮಾಡಬೇಕು.
3. ಮಾರುಕಟ್ಟೆಯಲ್ಲಾಗುವ ಕೃಷ್ಯುತ್ಪನ್ನಗಳ ದರದ ಏರಿಳಿತದಿಂದ ರೈತರಿಗೆ ರಕ್ಷಣೆ ನೀಡಲು ಕೃಷಿ ಮೌಲ್ಯ ಸ್ಥಿರತಾ ನಿಧಿ ಸ್ಥಾಪಿಸಬೇಕು.
4. ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಪರಿಣಾಮದಿಂದ ರೈತರನ್ನು ರಕ್ಷಿಸಲು ಹೊರ ದೇಶಗಳಿಂದ ಬರುವ ಕೃಷ್ಯುತ್ಪನ್ನಗಳಿಗೆ ಅಮದು ತೆರಿಗೆ ವಿಧಿಸಬೇಕು.
5. ಬರ ಮತ್ತು ಇತರ ವಿಪತ್ತುಗಳಿಂದ ರಕ್ಷಣೆಗಾಗಿ ಕೃಷಿ ತುರ್ತು ನಿಧಿ ಸ್ಥಾಪಿಸಬೇಕು.
6. ಬೆಳೆ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬೇಕು.
7. ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ಯಥಾ ಸ್ಥಿತಿಗೆ ಬರುವ ತನಕ ರೈತರ ಎಲ್ಲ ಬಗೆಯ ಸಾಲಗಳ ವಸೂಲಿಯನ್ನು ಸ್ಥಗಿತಗೊಳಿಸಿ ಅವುಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು.
8.ದೇಶದಲ್ಲಿನ ಎಲ್ಲ ತರಹದ ಬೆಳೆಗಳಿಗೆ ಅತ್ಯಂತ ಕಡಿಮೆ ಕಂತಿನಲ್ಲಿ ವಿಮೆ ಸಂರಕ್ಷಣೆ ಸಿಗುವ ಹಾಗೆ ಬೆಳೆ ವಿಮೆ ಯೋಜನೆಯ ವಿಸ್ತಾರ ಮಾಡಬೇಕು ಮತ್ತು ಗ್ರಾಮೀಣ ವಿಮೆ ವಿಕಾಸ ನಿಧಿ ಸ್ಥಾಪಿಸಬೇಕು.
9. ಸಾಮಾಜಿಕ ಸುರಕ್ಷೆಯ ಜಾಲ ನಿರ್ಮಿಸಿ ಅದರಡಿ ರೈತರಿಗಾಗಿ ವೃದ್ಧಾವಸ್ಥೆಯಲ್ಲಿ ಆರೋಗ್ಯ ವಿಮೆ ಮಂಜೂರಿ ಮಾಡಬೇಕು.
10. ರೈತರಿಗೆ ಕೈಗೆಟಕುವ ದರದಲ್ಲಿ ಬೀಜ ಮತ್ತು ಕೃಷಿ ಯಂತ್ರಗಳನ್ನು ಒದಗಿಸಬೇಕು.
11.ಸಂಪೂರ್ಣ ದೇಶದಲ್ಲಿ ಕೃಷಿ ಅಭಿವೃದ್ಧಿ ಕೇಂದ್ರ ಮತ್ತು ಮಣ್ಣು ಪರೀಕ್ಷೆ ಪ್ರಯೋಗ ಶಾಲೆಗಳನ್ನು ಸ್ಥಾಪಿಸಬೇಕು.
12. ಕಾಯಂ ಸ್ವರೂಪದ ಕೃಷಿ ನೀರಾವರಿ ಮತ್ತು ಕೃಷಿ ವಿದ್ಯುತ್‌ ಪೂರೈಕೆ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು ಇತ್ಯಾದಿ. 

Advertisement

Udayavani is now on Telegram. Click here to join our channel and stay updated with the latest news.

Next