Advertisement

ನೀರಾವರಿ ಯೋಜನೆ ಚರ್ಚೆಗೆ ಡಿ.6ರಂದು ಸಭೆ

06:00 AM Nov 18, 2018 | Team Udayavani |

ಬೆಂಗಳೂರು:ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಕುರಿತು ಸೂಕ್ತ ನಿಲುವು ತೆಳೆಯುವ ನಿಟ್ಟಿನಲ್ಲಿ ಚರ್ಚಿಸಲು ಡಿಸೆಂಬರ್‌ 6 ರಂದು ಮಾಜಿ ಮುಖ್ಯಮಂತ್ರಿಗಳು, ಹಾಗೂ ಮಾಜಿ ನೀರಾವರಿ ಸಚಿವರ ಸಭೆ ಕರೆಯಲು ತೀರ್ಮಾನಿಸಲಾಗಿದೆ.

Advertisement

ಮಹದಾಯಿ ನ್ಯಾಯಾಧೀಕರಣದ ಇತ್ತೀಚಿನ ಬೆಳವಣಿಗೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶನಿವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ  ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಹದಾಯಿ ನ್ಯಾಯಾಧೀಕರಣ ನೀರು ಹಂಚಿಕೆ ತೀರ್ಪು ನೀಡಿದ ನಂತರ ಸರ್ಕಾರ ಕೈಗೊಂಡಿರುವ ಕ್ರಮ, ರಾಜ್ಯದ ರೈತರ ಹಿತದೃಷ್ಟಿಯಿಂದ ನೀರಿನ ಬಳಕೆಗೆ ಕಾಮಗಾರಿ ಪ್ರಾರಂಭಿಸಲು ಸರ್ಕಾರ ತಯಾರಿ ನಡೆಸಲು ಅನುವಾಗುವಂತೆ  ನೀರು ಹಂಚಿಕೆಗೆ ಗೆಜೆಟ್‌ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರ,  ನಿಯಮ 5 (3)ರಡಿ ಸ್ಪಷ್ಟೀಕರಣಕ್ಕೆ ಮನವಿ ಸಲ್ಲಿಸಿರುವುದು, ಹೆಚ್ಚುವರಿ ನೀರು ಪಡೆಯುವ ನಿಟ್ಟಿನಲ್ಲಿ  ವಿಶೇಷ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿರುವುದನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.ನ್ಯಾಯಾಧೀಕರಣ ಮುಂದೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಬದಲಾವಣೆ ಮಾಡುವುದು.ರಾಜ್ಯದ ಪಾಲಿನ ನೀರಿನ ಹಕ್ಕಿನ ಪ್ರಮಾಣ  ಹೆಚ್ಚಿಸಿಕೊಳ್ಳುವುದು.

ಯೋಜನೆಗೆ ಕೇಂದ್ರ ಸರ್ಕಾರ ಈ ಹಿಂದೆ ನೀಡಿದ ಅನುಮತಿಯನ್ನು ನ್ಯಾಯಾಧೀಕರಣದ ಮುಂದೆ ಪ್ರಸ್ತಾಪಿಸುವುದು.  ಯೋಜನೆಗೆ ಪರಿಸರ  ಇಲಾಖೆಯ ಅನುಮತಿ ಅಗತ್ಯ ಇಲ್ಲ ಎಂಬುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು.ನಂತರ ಮಹದಾಯಿ ಸೇರಿದಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಿ.6 ರಂದು ಮತ್ತೂಮ್ಮೆ ಸಭೆ ಸೇರಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.

ಡಿಸೆಂಬರ್‌ 6 ಕ್ಕೆ ಸಭೆ
ಸಭೆಯ ನಂತರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ , ಮಹದಾಯಿ ತೀರ್ಪಿನ ಕುರಿತು ಎಲ್ಲ ಪಕ್ಷಗಳ ನಾಯಕರ ಜತೆ ಚರ್ಚಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಡಿಸೆಂಬರ್‌  6 ರಂದು  ಮಾಜಿ ಮುಖ್ಯಮಂತ್ರಿಗಳು ಹಾಗೂ  ಮಾಜಿ ಜಲಸಂಪನ್ಮೂಲ ಸಚಿವರು, ತಜ್ಞರ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಒಂದು ಕಡೆ ಮಹದಾಯಿ ನೀರು ಬಳಕೆಗೆ ಕಾಮಗಾರಿ ಆರಂಭಿಸಬೇಕಾಗಿದೆ. ಅದಕ್ಕೆ ಕೇಂದ್ರ ಸರ್ಕಾರ ಗೆಜೆಟ್‌ಅಧಿಸೂಚನೆ ಹೊರಡಿಸಬೇಕಾಗಿದೆ.  ಈ ವಿಷಯದಲ್ಲಿ ರಾಜಕೀಯ ಮಾಡಲ್ಲ. ಎಲ್ಲರೂ ಪಕ್ಷಬೇಧ ಮರೆತು ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮಹದಾಯಿ ವಿಷಯದಲ್ಲಿ ಕಾನೂನು ಕ್ರಮಗಳ ಬಗ್ಗೆ ಚರ್ಚೆ ಆಯ್ತು. ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಹಾಗೂ ನ್ಯಾಯಾಧಿಕರಣದ ಮುಂದೆ ವಿಶೇಷ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿರುವ ಬಗ್ಗೆ ವಿವರ ನೀಡಿದರು.

ಆದರೆ, ಸರ್ವಪಕ್ಷ  ಸಭೆ ಕರೆದಿದ್ದು ವಿಳಂಬ ಆಯ್ತು. ಜತೆಗೆ ಮಹದಾಯಿ ಆದೇಶವನ್ನು ಗೆಜೆಟ್‌ ನೋಟಿಫಿಕೇಷನ್‌ ಮಾಡುವಂತೆ ಕೇಂದ್ರ ಸಚಿವರಿಗೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಆದರೆ, ವಿಶೇಷ ಪುನರ್‌ ಪರಿಶೀಲನಾ ಅರ್ಜಿ ಇರುವುದರಿಂದ ಗೆಜೆಟ್‌ ನೋಟಿಫಿಕೇಷನ್‌ ಆಗಲ್ಲ. ಹೀಗಾಗಿ, ನಾಲ್ಕೈದು ತಿಂಗಳ ಒಳಗೆ ಕೇಸ್‌ ಬಗೆಹರಿಸಿಕೊಳ್ಳಬೇಕು, ಕಾಮಗಾರಿಗೆ ಡಿಪಿಆರ್‌ ಸಿದ್ಧಪಡಿಸಿಕೊಳ್ಳಬೇಕು. ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಇರುವ ತಡೆಯಾಜ್ಞೆ  ತೆರವುಗೊಳಿಸುವಂತೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.

ಸಚವರಾದ ಆರ್‌.ವಿ.ದೇಶಪಾಂಡೆ, ಕೃಷ್ಣ ಬೈರೇಗೌಡ, ಮಾಜಿ ಶಾಸಕ ಕೋನರೆಡ್ಡಿ, ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಸೇರಿ ಹಲವರು ಉಪಸ್ಥಿತರಿದ್ದರು.

ಬಿಎಸ್‌ವೈ ಗೆರು
ಸರ್ವಪಕ್ಷ ಸಭೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಪೂರ್ವನಿಗದಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು. ಬಿಜೆಪಿ ಪರವಾಗಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next