Advertisement

ಮಹಿಳಾ-ಮಕ್ಕಳ ಅಭಿವೃದ್ಧಿ ಸಮಿತಿ ಸಭೆ

07:15 AM Jul 23, 2017 | |

ಮಡಿಕೇರಿ: ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಸರಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇವುಗಳನ್ನು ತಲುಪಿಸುವಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎನ್‌.ಎ. ಹ್ಯಾರೀಸ್‌ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.  
 
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಗುರುವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

Advertisement

ಜಿಲ್ಲೆಯಲ್ಲಿನ ಅಪೌಷ್ಟಿಕ ಮಕ್ಕಳು ಸೇರಿದಂತೆ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ತಲುಪಿಸಬೇಕು. ಅಪೌಷ್ಟಿಕ ಮಕ್ಕಳು ಸಾಮಾನ್ಯ ಮಕ್ಕಳಂತೆ ಆಗಲು ವಿಶೇಷ ಗಮನಹರಿಸಬೇಕು. ಭವಿಷ್ಯದ ಯುವ ಜನರನ್ನು ರಕ್ಷಿಸಬೇಕು ಎಂದು ಅವರು ಸೂಚನೆ ನೀಡಿದರು. 
 
ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಗಿರಿಜನ ಗರ್ಭಿಣಿ ಮತ್ತು ಬಾಣಂತಿಯರಿಗೆ ಸಹಾಯಧನ ಕಲ್ಪಿಸಲು ಸರಕಾರ 21 ಲಕ್ಷ ರೂ.ಬಿಡುಗಡೆ ಮಾಡಿದ್ದು, ಈ ಹಣ ಖರ್ಚು ಮಾಡದಿರುವುದಕ್ಕೆ ಸಮಿತಿ ಅಧ್ಯಕ್ಷರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
 
ಸರಕಾರ ಹಣ ಬಿಡುಗಡೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ ಸಮಿತಿ ಅಧ್ಯಕ್ಷರು, ಅರ್ಹರಿಂದ ಜಾತಿ ಪ್ರಮಾಣಪತ್ರ ಇಲ್ಲದಿದ್ದಲ್ಲಿ ಕಂದಾಯ ಇಲಾಖೆ ಗಮನಕ್ಕೆ ತಂದು ಜಾತಿ ಪ್ರಮಾಣಪತ್ರ ಪಡೆಯಲು ಅನುವು ಮಾಡಬೇಕು. ಅದನ್ನು ಬಿಟ್ಟು ಹಣ ಖರ್ಚು ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಜಾತಿ ಪ್ರಮಾಣ ಪತ್ರ ಒದಗಿಸಲು ಕಾಲಮಿತಿ ಯಿದ್ದು, ಅದರಂತೆ ಕಂದಾಯ ಇಲಾಖೆ ಅಧಿಕಾರಿಗಳು ಗಮನಹರಿಸುವಂತೆ ಸಮಿತಿ ಅಧ್ಯಕ್ಷರು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಸ್ತ್ರೀಶಕ್ತಿ ಗುಂಪುಗಳ ಸಂಖ್ಯೆ ಕಡಿಮೆ ಇದ್ದು, ಸ್ತ್ರೀಶಕ್ತಿ ಗುಂಪುಗಳನ್ನು ಹೆಚ್ಚಿಸಿ ಸರಕಾರದ ಸೌಲಭ್ಯಗಳನ್ನು  ಕಲ್ಪಿಸುವಂತಾಗಲು ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಸಿಬಂದಿಗಳ ಕೊರತೆ ಇದೆ ಎಂದು ಸಬೂಬು ಹೇಳುವುದು ಸರಿಯಲ್ಲ. ಸಿಬಂದಿಗಳ ಕೊರತೆ ನಡುವೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಅಧ್ಯಕ್ಷರು ಹೇಳಿದರು.

ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಮತ್ತು ಉಪ ನಿರ್ದೇಶಕರು ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ಮರೆಯಬಾರದು ಎಂದು ಅವರು ನಿರ್ದೇಶನ ನೀಡಿದರು. 

ಜಿಲ್ಲೆಯಲ್ಲಿ ಎಷ್ಟು ಅಂಗನವಾಡಿಗಳಿವೆ, ಅಂಗನ ವಾಡಿಗಳಲ್ಲಿ ಎಷ್ಟು ಮಕ್ಕಳಿದ್ದಾರೆ, ಮತ್ತಿತರ ಮಾಹಿತಿ ಪಡೆದ ಸಮಿತಿ ಅಧ್ಯಕ್ಷರು 19 ಸಾವಿರ ಅಂಗನವಾಡಿ ಮಕ್ಕಳ ಅಂಕಿ ಅಂಶ ಸಂಬಂಧ ನಿಖರ ಮಾಹಿತಿ ಒದಗಿಸುವಂತೆ ಸಮಿತಿ ಹ್ಯಾರೀಸ್‌ ಸೂಚನೆ ನೀಡಿದರು. 
  
ಜಿಲ್ಲೆಯಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅಧ್ಯಕ್ಷರು ಮಾಹಿತಿ ಪಡೆದರು. 
 
ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವಂತಾಗಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಹಾಗೂ ಕಾರ್ಮಿಕ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಕೂಲಿ ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕಿದೆ ಎಂದರು.

Advertisement

ಜಿಲ್ಲೆಯ ಅಂಗನವಾಡಿಗಳಿಗೆ ಬಡ ಮಕ್ಕಳು ತೆರಳುತ್ತಿದ್ದಾರೆ. ಈ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ವೆಟರ್‌ ನೀಡಬೇಕು. ಚಳಿ, ಮಳೆ, ಗಾಳಿ ಹೆಚ್ಚಿರುವುದರಿಂದ ಅಂಗನವಾಡಿ ಮಕ್ಕಳಿಗೆ ಈ ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು. 
 
ಇದಕ್ಕೆ ಧ್ವನಿಗೂಡಿಸಿದ ಎನ್‌.ಎ.ಹ್ಯಾರೀಸ್‌ ಅವರು ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡದರು. ಸಮಿತಿ ಸದಸ್ಯರಾದ ಸುಧಾಕರ್‌ ಲಾಲ್‌ ಅವರು ಮಾತನಾಡಿ ದಿಡ್ಡಳ್ಳಿಯ ಗಿರಿಜನರಿಗೆ ಪುನರ್‌ ವಸತಿ ಒದಗಿಸಲಾಗಿರುವ ಬಸವನಹಳ್ಳಿ, ಬ್ಯಾಡಗೊಟ್ಟ ಪುನರ್‌ ವಸತಿ ಕೇಂದ್ರದಲ್ಲಿ ಅಂಗನವಾಡಿ ತೆರೆಯಲು ಮುಂದಾಗುವಂತೆ ಅವರು ಸಲಹೆ ನೀಡಿದರು. ಸಮಿತಿ ಸದಸ್ಯರಾದ ಅಪ್ಪಾಜಿಗೌಡ, ಜಯಮ್ಮ, ಲೆಹರ್‌ ಸಿಂಗ್‌, ಸರೋಜಾ, ಎಂ.ಎಂ. ಆಶಾ ಅವರು ಹಲವು ವಿಚಾರ ಪ್ರಸ್ತಾಪಿಸಿ, ಮಾಹಿತಿ ಪಡೆದರು.  
  
ಸಮಿತಿ ಉಪ ಕಾರ್ಯದರ್ಶಿ ಆಜಾದ್‌ ಅಹಮ್ಮದ್‌ಖಾನ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ದೀಪಾ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next