ನಾರಾಯಣಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಆಲಮಟ್ಟಿ , ನಾರಾಯಣಪುರ ಜಲಾಶಯಗಳ ಕಾಲುವೆ ಜಾಲಗಳು ಸೇರಿದಂತೆ ಇತರೆ ಏತ ನೀರಾವರಿ ಯೋಜನೆಗಳ ವ್ಯಾಪ್ತಿಯ ಪ್ರಸ್ತುತ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ಕುರಿತು ನಿರ್ಣಯ ಕೈಗೊಳ್ಳುವ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆ ಜುಲೈ 17ರಂದು ಆಲಮಟ್ಟಿಯ ಕೆಬಿಜೆಎನ್ನೆಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ ಎಂದು ಅಣೆಕಟ್ಟು ಗೇಟ್ಸ್ ಉಪವಿಭಾಗದ ಎಇಇ ಆರ್.ಎಲ್. ಹಳ್ಳೂರ ತಿಳಿಸಿದ್ದಾರೆ.
ಆಲಮಟ್ಟಿ ಜಲಾಶಯ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆಗಳಿಗೆ ಕಾಲುವೆ ನೀರನ್ನು ನೆಚ್ಚಿಕೊಂಡಿರುವ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬಹು ನಿರೀಕ್ಷೆಯ ನೀರಾವರಿ ಸಲಹಾ ಸಮಿತಿ ಸಭೆ ಆಶಾಭಾವನೆ ಮೂಡಿದೆ. ಮಂಗಳವಾರ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ವಹಿಸಲಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಕಲಬುರಗಿ, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ನೀರಾವರಿ ಸಲಹಾ ಸಮಿತಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಆಲಮಟ್ಟಿ ಲಾಲ ಬಹದ್ದೂರ ಶಾಸ್ತ್ರೀ ಜಲಾಶಯ, ನಾರಾಯಣಪುರ ಬಸವಸಾಗರ ಜಲಾಶಯ ಆಣೆಕಟ್ಟು ವಲಯದಡಿ ಬರುವ ಉನ್ನತಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಉಭಯ ಜಲಾಶಯದಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ.
ಆಲಮಟ್ಟಿ ಜಲಾಶಯ ಭರ್ತಿಯತ್ತ: ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಧಾರಾಕಾರವಾಗಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ಕೃಷ್ಣಾ ನದಿಗೆ ಪ್ರವಾಹ ಉಂಟಾಗಿದ್ದು, ಪ್ರಸ್ತುತ ಆಲಮಟ್ಟಿ ಲಾಲ ಬಹದ್ದೂರ ಶಾಸ್ತ್ರೀ ಜಲಾಶಯಕ್ಕೆ ಒಂದು ಲಕ್ಷ ಕ್ಯೂಸೆಕ್ ನಷ್ಟು ಭಾರೀ ಪ್ರಮಾಣದ ನೀರು (ಒಳಹರಿವು) ಹರಿದು ಬರುತ್ತಿದೆ. ಇದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
ಕೆಬಿಜೆಎನ್ನೆಲ್ ನೀರಾವರಿ ಅಧಿಕಾರಿಗಳ ಮಾಹಿತಿಯಂತೆ ಆಲಮಟ್ಟಿ ಆಣೆಕಟ್ಟು ಭರ್ತಿಗೆ ಕ್ಷಣ ಗಣನೆ ಶುರುವಾಗಿದೆ. ಪ್ರಸ್ತುತ ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.6 ಮೀಟರ್ ಇದ್ದು, ರವಿವಾರ ಬೆಳಗಿನ ಮಾಹಿತಿಯಂತೆ 517.40 ಮೀಟರ್ ತಲುಪಿದೆ. ಜಲಾಶಯ ಭರ್ತಿಗೆ ಕೇವಲ ಎರಡು ಮೀಟರ್ ಬಾಕಿ ಇರುವುದರಿಂದ ಒಳಹರಿವಿನ ಪ್ರಮಾಣ ಹೀಗೆ ನಿರಂತರವಾದರೆ ಜಲಾಶಯ ಗರಿಷ್ಠಮಟ್ಟ ಕಾಯ್ದುಕೊಂಡು ಹೆಚ್ಚುವರಿಯಾಗಿ ಬರುವ ನೀರನ್ನು ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಹರಿಬಿಡಲಿದ್ದಾರೆ. ಪ್ರಸ್ತುತ ಬಸವಸಾಗರ ಜಲಾಶಯದಲ್ಲಿ 492.25 ಮೀಟರ್ ಗರಿಷ್ಠ ಸಂಗ್ರಹವಿದ್ದು, ರವಿವಾರ 488.85 ಮೀಟರ್‌ನಷ್ಟು ನೀರು ಸಂಗ್ರಹವಿದೆ.
ನದಿ ತೀರದ ಜನರಿಗೆ ಎಚ್ಚರಿಕೆ: ಬಸವಸಾಗರ ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ಯಾವುದೇ ಸಂದರ್ಭದಲ್ಲಿಯೂ ಹೆಚ್ಚುವರಿ ನೀರು ಹರಿದುಬರುವ ಸಾಧ್ಯತೆಗಳಿವೆ. ಇದರಿಂದ ನಾರಾಯಣಪುರ ಜಲಾಶಯದಲ್ಲಿ 488.85 ಮೀಟರ್ ನಷ್ಟು ನೀರು ಇದ್ದು, ಯಾವುದೇ ವೇಳೆ ಭರ್ತಿಯಾಗುವ
ಸಾಧ್ಯತೆ ಇರುವುದರಿಂದ ಆಣೆಕಟ್ಟಿಗೆ ಬರುವ ಹೆಚ್ಚುವರಿ ನೀರನ್ನು ಕೃಷ್ಣಾ ನದಿ ತೀರಕ್ಕೆ ಹರಿಬಿಡುವ ಸಾಧ್ಯತೆಗಳಿವೆ.
ನದಿ ಪಾತ್ರದಲ್ಲಿ ಬರುವ ಗ್ರಾಮಗಳ ಜನ-ಜಾನುವಾರುಗಳು ಸೇರಿದಂತೆ ಮೀನುಗಾರರು ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ನದಿ ತೀರದಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.