ಶಿರಸಿ: ಸರ್ಕಾರದ ಸಂಸ್ಥೆ ಸರ್ಕಾರದ್ದೇ ಯೋಜನೆ ಬಗ್ಗೆ ಪರಿಸರ ವರದಿ ತಯಾರಿಸುವುದು ಎಂದರೆ ಅದು ಏಕಪಕ್ಷೀಯ. ಕೈಗಾ 5-6ನೇ ಘಟಕ ಯೋಜನೆಯ ಮೆಕಾನ್ ಪರಿಸರ ವರದಿ ರದ್ದು ಮಾಡಬೇಕು. ಸರ್ಕಾರ ನಡೆಸುವ ಅಹವಾಲು ಸಭೆಯಲ್ಲಿ ಪಾಲ್ಗೊಂಡು ವೈಜ್ಞಾನಿಕವಾಗಿ ವಿರೋಧಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾದೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಅವರು ಸೋಂದಾ ಸ್ವರ್ಣವಲ್ಲೀ ಸುಧರ್ಮಾ ಸಭಾಂಗಣದಲ್ಲಿ ನಡೆದ ಪರಿಸರ ಸಂಘಟನೆಗಳ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕ್ಯಾನ್ಸರ್ ಬಂದಿಲ್ಲ ಎಂದು ಸರ್ಕಾರ ತನಗೆ ಬೇಕಾದಂತೆ ವರದಿ ನೀಡಬಹುದು. ಯಲ್ಲಾಪುರ ಮುಕ್ತ ಚರ್ಚೆಯಲ್ಲಿ ಕೈಗಾದವರ ತಂತ್ರಗಾರಿಕೆ ನೋಡಿದ್ದೇವೆ. ಜಿಲ್ಲೆಯ ಜನತೆ ಆಲೋಚನೆ ಮಾಡಬೇಕು. ಹೊರತೂ ಆಮಿಷಗಳಿಗೆ ಒಳಗಾಗಬಾರದು ಎಂದರು.
ಕೈಗಾ ಕಿಸೆಯಲ್ಲಿನ ಬೆಂಕಿ ಕೆಂಡ. ಮನುಷ್ಯನ ಮೇಲೆ ಮಾಡುವ ಅಣುವಿಕಿರಣ ದುಷ್ಪರಿಣಾಮಗಳು ಅಪಾರ, ಗಂಭೀರ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಜೊತೆಗೆ ಕೃಷಿ, ತೋಟಗಾರಿಕೆ, ಅರಣ್ಯ-ಜಲ ವನ್ಯಜೀವಿ, ಜಾನುವಾರು ಮೇಲೆ ಸಹಾ ಅಷ್ಟೇ ಭಾರೀ ಮಾರಕ ಪರಿಣಾಮ ಬೀರುತ್ತವೆ, ಅದಕ್ಕಾಗೇ ಕೈಗಾದವರ ಜೊತೆ 2 ಬಾರಿ ಮುಕ್ತ ಸಂವಾದ ನಡೆಸಿದ್ದೇವೆ. ಕೈಗಾ ಕಣಿವೆಗೆ, ಸ್ಥಳ ಭೇಟಿ ಮಾಡಿದ್ದೇವೆ. ವಜ್ರಳ್ಳಿಯಲ್ಲಿ 2012 ರಲ್ಲಿ ಸಮಾವೇಶ ನಡೆಸಿದ್ದೇವೆ. ಆರೋಗ್ಯ ಸಮೀಕ್ಷೆಗೆ ಆಗ್ರಹ ಮಾಡಿದ್ದೇವೆ. ಜಿಲ್ಲೆಯ ಜನರು ಕ್ಯಾನ್ಸರ್‌ನಂಥ ಗಂಭೀರ ಕಾಯಿಲೆಗಳಿಗೆ ತುತ್ತಾಗುವುದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ಇದೀಗ ಕೈಗಾ ಬಗ್ಗೆ ಸರ್ಕಾರದವರು ಡಿ.15 ರಂದು 5-6ನೇ ಘಟಕ ಸ್ಥಾಪನೆ ಬಗ್ಗೆ ಅಹವಾಲು ಸಭೆ ಕರೆದಿದ್ದಾರೆ. ಪರಿಸರ ವರದಿ ಪ್ರಕಟಿಸಿದ್ದಾರೆ. ಇದೆಲ್ಲ ಹೆಸರಿಗೆ ಮಾತ್ರ. ಕೈಗಾ ಪರಿಸರ ವರದಿ ಸುಳ್ಳಿನಿಂದ, ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ತಜ್ಞರು ಹೇಳಿದ್ದಾರೆ. ಈ ವರದಿ ರದ್ದು ಮಾಡಬೇಕು ಎಂದು ಹೇಳಿದ್ದಾರೆ. ಸರ್ಕಾರದ ಡಿ.15 ರಂದು ಕೈಗಾದಲ್ಲಿ ನಡೆಸುವ ಅಹವಾಲು ಸಭೆಗೆ ಜಿಲ್ಲೆಯ ಜನತೆ, ಸಂಘ-ಸಂಸ್ಥೆಗಳು ಹಾಜರಾಗಿ ತಮ್ಮ ಲಿಖಿತ ಅಭಿಪ್ರಾಯ ನೀಡಬೇಕು. ಕೈಗಾ 5-6 ನೇ ಘಟಕ ನಿರ್ಮಾಣ ಬೇಡ ಎಂದು ಏಕ/ದ್ವನಿಯಿಂದ ತಜ್ಞರು, ಜನ ಪ್ರತಿನಿಧಿಗಳು, ಸಂಸ್ಥೆಗಳು, ರೈತರು, ಮಹಿಳೆಯರು ಪ್ರಜ್ಞಾವಂತ ನಾಗರಿಕರು ಒತ್ತಾಯ ಮಾಡಬೇಕು ಎಂದರು.
ಇಂಧನ ತಜ್ಞ ಡಾ| ಶಂಕರ ಶರ್ಮಾ, ದೇಬಾಯ್ ಗುಪ್ತಾ, ಪರಿಸರ ಕಾನೂನು ಅಧ್ಯಯನ ಕೇಂದ್ರದ ಡಾ| ಮಹಾಬಲೇಶ್ವರ್, ಗುರುದತ್ತ ಫಾಯದೆ, ಅನಂತ ಹೆಗಡೆ ಅಶೀಸರ, ಶಾಂತಾರಾಂ ಸಿದ್ದಿ, ಉಮೇಶ ಭಾಗ್ವತ್, ಶಿವಾನಂದ ದೀಕ್ಷಿತ, ಶೈಲಜಾ ಗೊರ್ನಮನೆ, ಈಶಣ್ಣ ನೀರ್ನಳ್ಳಿ, ಸಾಗರದ ವೆಂಕಟೇಶ, ಕಳಸದ ಗಜೇಂದ್ರ, ದೊಂಡು ಪಾಟೀಲ, ಟಿ.ಆರ್. ಹೆಗಡೆ, ನಾರಾಯಣ ಗಡಿಕೆ ಇತರರು ಇದ್ದರು.