Advertisement

ದಿಂಗಾಲೇಶ್ವರ ಶ್ರೀ ಬೆಂಬಲಿಸಿ ಭಕ್ತರ ಸಭೆ

11:24 AM Mar 02, 2020 | Team Udayavani |

ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿಯನ್ನಾಗಿ ಬಾಲೆಹೊಸೂರ ದಿಂಗಾಲೇಶ್ವರ ಸ್ವಾಮೀಜಿ ಮಾಡುವ ಕುರಿತು ರವಿವಾರ ಘಂಟಿಕೇರಿ ಬಸವೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭಕ್ತರ ಸಭೆ ನಡೆಸಿ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು.

Advertisement

ಕಳಸಾ-ಬಂಡೂರಿ ಹೋರಾಟ ಸಮಿತಿಯ ವೀರೇಶ ಸೊಬರದಮಠ ಮಾತನಾಡಿ, ಈ ಹಿಂದೆ ಉತ್ತರಾಧಿಕಾರಿ ನೇಮಕದ ವಿಷಯ ಕುರಿತು ಸಹಿ ಹಾಕಿದ 51 ಜನರನ್ನು ಭೇಟಿ ಮಾಡಿ ಅವರೆಲ್ಲರನ್ನು ಒಂದುಗೂಡಿಸುವ ಕೆಲಸ ಮಾಡೋಣ. ಅವರು ಬರದೇ ಇದ್ದಲ್ಲಿ ಅವರ ಮನೆ ಮುಂದೆ ಕುಳಿತು ಈ ಕುರಿತು ಸ್ಪಷ್ಟ ನಿರ್ಧಾರ ತಿಳಿಸಲು ಒತ್ತಾಯಿಸೋಣ ಎಂದ ಅವರು ಈ ಮೂಲಕ ಭಕ್ತರಲ್ಲಿರುವ ಗೊಂದಲ ನಿವಾರಿಸಬೇಕು ಎಂದರು.

ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ ಮಾತನಾಡಿ, ಮೂರುಸಾವಿರಮಠ ಹಿತಾಭಿವೃದ್ಧಿ ವೇದಿಕೆ ಸ್ಥಾಪಿಸುವ ಮೂಲಕ ಒಂದು ಸಂಘಟನೆ ಮಾಡಬೇಕು. ಅದರಲ್ಲಿ ಶೇ.75 ಯುವಕರೇ ಇರಲಿ, ಇನ್ನುಳಿದವರು ಹಿರಿಯರಿರಲಿ ಎಂದು ಸಲಹೆ ನೀಡಿದರು. ಕೆಲವರ ಒತ್ತಡದಿಂದ ಮೂರುಸಾವಿರಮಠದ ಸ್ವಾಮೀಜಿಯವರು ಬಾಯಿ ಬಿಡುತ್ತಿಲ್ಲ. ದಿಂಗಾಲೇಶ್ವರ ಸ್ವಾಮೀಜಿ ಕುರಿತು ಅವರಿಗೂ ಒಳ್ಳೆಯ ಅಭಿಪ್ರಾಯವಿದೆ. ಮಠದ ಕಾರ್ಯಗಳು ಸಂಪೂರ್ಣ ನಿಷ್ಕ್ರಿಯವಾಗಿದ್ದು, ಮಠದ ಅಭಿವೃದ್ಧಿಗೆ ದಿಂಗಾಲೇಶ್ವರ ಸ್ವಾಮೀಜಿ ಸೂಕ್ತ ಎಂದರು.

ಈ ಭೂಮಿಯ ಮೇಲಿರುವ ಪ್ರತಿಯೊಬ್ಬರ ಮೇಲೆ ಅಪವಾದಗಳೂ ಇದ್ದೇ ಇವೆ. ಆ ಅಪವಾದಗಳಿಗೆ ನಾಂದಿ ಹಾಡಬೇಕಿದೆ ಎಂದು ಹೇಳಿದರು. ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮಾತನಾಡಿ, ಹಿತಾಭಿವೃದ್ಧಿ ವೇದಿಕೆ ಮಾಡುವ ಮೂಲಕ ಎಲ್ಲರನ್ನೂ ಒಗ್ಗೂಡಿಸಬೇಕು. ಕೇವಲ ಒಂದೇ ಭಾಗದಲ್ಲಿ ಸಭೆ ನಡೆಸದೆ, ಎಲ್ಲೆಡೆ ಸಭೆ ನಡೆಯುವಂತಾಗಬೇಕು. ಇದರಿಂದ ಎಲ್ಲರೂ ಎಚ್ಚರಗೊಂಡಂತಾಗುತ್ತದೆ ಎಂದರಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದು, ಈ ರೀತಿ ಆಗದಂತೆ ಎಚ್ಚರ ವಹಿಸಬೇಕೆಂದರು.

ಪ್ರಕಾಶ ಬೆಂಡಿಗೇರಿ ಮಾತನಾಡಿ, ಬಾಲೆಹೊಸೂರ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಮೂರುಸಾವಿರಮಠದ ಉತ್ತರಾಧಿಕಾರಿ ನೇಮಕ ಮಾಡುವ ಕುರಿತು ಫೇಸ್‌ಬುಕ್‌ನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಸುಮಾರು 62 ಸಾವಿರ ಲೈಕ್‌ಗಳು ಬಂದಿವೆ. ಉತ್ತಮ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ ಎಂದರು.

Advertisement

ಉತ್ತರಾಧಿಕಾರಿ ವಿಚಾರದಲ್ಲಿ ಬೇಕು-ಬೇಡ ಎನ್ನುವ ವಿಚಾರವನ್ನು ಫೆ.23ರ ರಾತ್ರಿವರೆಗೆ ಅವಕಾಶ ನೀಡಲಾಗಿತ್ತು. ಆದರೆ ಅಲ್ಲಿಂದ ಯಾವುದೇ ಸ್ಪಂದನೆ ಸಿಗದೇ ಇದ್ದು, ಇನ್ನು ಉತ್ತರಾಧಿಕಾರಿಯೇ ಅಂತಿಮ ಎಂದರು. ಇನ್ನು ಎಲ್ಲೆಡೆ ಸಭೆ ಮಾಡುವ ಕುರಿತು ತೀರ್ಮಾನಿಸಲಾಗುವುದು. ಜತೆಗೆ ಒಂದು ಬಾರಿ ಕೇವಲ ಮಹಿಳಾ ಸಭೆ, ಒಂದು ಬಾರಿ ಸಂತರ-ಶರಣರ ಸಭೆ, ಒಂದು ಬಾರಿ ಜನಪ್ರತಿನಿಧಿಗಳ ಸಭೆ ಮಾಡಲಾಗುವುದು ಎಂದರು.  ಮಂಟೂರು ಶ್ರೀ ಅಡವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಹಾದೇವ ಹುಡೇದ, ಎಂ.ಎಂ. ಗೌಡರ, ಬಸವರಾಜ ತೇರದಾಳ ಇನ್ನಿತರರು ಮಾತನಾಡಿದರು. ಬಸವರಾಜ ಚನ್ನೋಜಿ, ಚನ್ನಪ್ಪ ಜಾಬಿನ್‌, ಬಿ.ಸಿ. ಪಾಟೀಲ, ಜಗದೀಶ ಸೊಂಡೂರ, ಎ.ಎಲ್‌. ಹಿರೇಮಠ, ಮಹಾಂತೇಶ ಗಿರಿಮಠ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next