ಕೊಟ್ಟಿಗೆಹಾರ: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಕ್ಷೇತ್ರಗಳಲ್ಲಿ ಈಗಾಗಲೇ ಚಟುವಟಿಕೆಗಳು ಆರಂಭವಾಗಿದೆ. ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಇದೀಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರ್ಟಿಯ ಟಿಕೆಟ್ ಫೈಟ್ ಜಾಸ್ತಿಯಾಗಿದ್ದು, ಟಿಕೆಟ್ ಘೋಷಣೆಗೂ ಮೊದಲೇ ಭಿನ್ನಮತ ಸ್ಫೋಟವಾಗಿದೆ.
ಮೂಡಿಗೆರೆ ಕ್ಷೇತ್ರದ ಕೈ ಟಿಕೆಟ್ ಆಕಾಂಕ್ಷಿಗಳು ಇದೀಗ ಮಾಜಿ ಸಚಿವೆ ಮೋಟಮ್ಮ ಹಾಗೂ ಪುತ್ರಿ ನಯನ ಮೋಟಮ್ಮ ವಿರುದ್ಧ ಬಂಡಾಯ ಎದ್ದಿದ್ದು, ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಐದು ಸಭೆಗಳನ್ನು ನಡೆಸಿದ್ದಾರೆ.
ಇದನ್ನೂ ಓದಿ:ಸಿಂಹಪ್ರಿಯಾ ಮ್ಯಾರೇಜ್ ಸ್ಟೋರಿ: ಪ್ರೇಮ್ ಕಹಾನಿ ಬಿಚ್ಚಿಟ್ಟ ಜೋಡಿ
ಟಿಕೆಟ್ ಆಕಾಂಕ್ಷಿಯಾಗಿರುವ ನಯನ ಮೋಟಮ್ಮ ಅವರು ಡಿ.ಕೆ. ಶಿವಕುಮಾರ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ನಯನ ಮೋಟಮ್ಮಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಸೋಲುತ್ತದೆ, ಮೂಡಿಗೆರೆಯಲ್ಲಿ ಮೋಟಮ್ಮನವರ ಕುಟುಂಬ ರಾಜಕಾರಣ ಕೊನೆಯಾಗಬೇಕು, ವಿಧಾನ ಪರಿಷತ್ ಚುನಾವಣೆಯಲ್ಲಿ ಗಾಯತ್ರಿ ಶಾಂತೇಗೌಡರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಇಡೀ ಕ್ಷೇತ್ರದ ಜನರು ಮೋಟಮ್ಮ ಕುಟುಂಬದ ವಿರುದ್ಧವಿದೆ ಎಂದು ಸಭೆಯಲ್ಲಿ ಕಾರ್ಯಕರ್ತರು ಕಿಡಿಕಾರಿದರು.
ನಯನ ಮೋಟಮ್ಮಗೆ ಟಿಕೆಟ್ ನೀಡದಂತೆ ವರಿಷ್ಠರಲ್ಲಿ ಮನವಿ ಮಾಡಬೇಕೆಂದು ಗೋಣಿಬೀಡು ಹೋಬಳಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಕಾಂಗ್ರೆಸ್ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರು ಭಾಗಿಯಾಗಿದ್ದರು.