Advertisement

ಅಭಿವೃದ್ಧಿ ಕಾರ್ಯ ಚುರುಕಿಗೆ ಸೂಚನೆ

09:40 AM Jun 12, 2020 | Suhan S |

ಹುಬ್ಬಳ್ಳಿ: ಬೆಂಗಳೂರಿನ ವಿಧಾನಸೌಧ 313ನೇ ಕೊಠಡಿಯಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರ ನೇತೃತ್ವದಲ್ಲಿ ಹು-ಧಾ ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಲಯ ನಿಯಮಾವಳಿ ಪರಿಷ್ಕರಣೆ, ಪಿಂಚಣಿ ಅನುದಾನ, ನೀರಿನ ಶುಲ್ಕದ ಬಡ್ಡಿ ಮನ್ನಾ, ಕೈಗಾರಿಕೆಗಳ ಆಸ್ತಿಕರ, ಪೌರ ಕಾರ್ಮಿಕರ ನೇರ ನೇಮಕಾತಿ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಸಭೆ ನಡೆಯಿತು.

Advertisement

ಹು-ಧಾ ನಗರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಈಗಾಗಲೇ ಮಂಜೂರಾದ ವಲಯ ನಿಯಮಾವಳಿಗಳ ಬಗ್ಗೆ ಕ್ರೆಡಾಯ್‌ ಸಂಸ್ಥೆಯಿಂದ ಬಂದ ಪ್ರತಿನಿಧಿಗಳು ಚರ್ಚಿಸಿದರು. ಕೆಲ ನ್ಯೂನತೆ-ಲೋಪದೋಷ ವಿವರಿಸಿ ಕೂಡಲೇ ಸರಿಪಡಿಸಲು ಸಲಹೆ ನೀಡಿದರು. ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಸಚಿವ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಯಿತು.

ನೀರಿನ ಶುಲ್ಕ ಬಾಕಿ ಬಡ್ಡಿ ಮನ್ನಾ: ನೀರಿನ ಶುಲ್ಕದ ಬಾಕಿ ಬಡ್ಡಿ ಮನ್ನಾ ಮಾಡುವ ವಿಷಯವಾಗಿ ಚಾಲ್ತಿ ವರ್ಷದಿಂದ ನೀರಿನ ಶುಲ್ಕ ವಸೂಲಾತಿ ಜತೆ ಚಾಲ್ತಿ ವರ್ಷದಿಂದ ಮೂರು ವರ್ಷಗಳಿಗೆ ಮಾತ್ರ ಬಡ್ಡಿ ವಸೂಲಿ ಮಾಡುವ ಸಂಬಂಧ ಪರಿಶೀಲಿಸಿ ಆರ್ಥಿಕ ಇಲಾಖೆ ಜತೆ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಮಹಾನಗರ ಪಾಲಿಕೆಯ 2,736 ಆಸ್ತಿ ಹಾಗೂ ಸ್ವತ್ತುಗಳ ಭೂ ಬಾಡಿಗೆ ವಿಷಯವಾಗಿ ಚರ್ಚಿಸಲಾಯಿತು. ಗುತ್ತಿಗೆ ಅವಧಿ ಮುಂದುವರಿಸಲು, ಬಾಡಿಗೆ ದರ ನಿಗದಿಪಡಿಸಲು ಮತ್ತು ಸ್ವತ್ತುಗಳನ್ನು ವಿಲೇವಾರಿ ಮಾಡಲು ರಾಜ್ಯಾದ್ಯಂತ ಅನ್ವಯವಾಗುವಂತೆ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಲಾಯಿತು.

ನಗರ ಯೋಜನಾ ಪ್ರಾಧಿಕಾರ: ಮೂಲೆ ನಿವೇಶನ ಹಾಗೂ ಸಿಎ ಸೈಟ್‌ಗಳಿಗೆ ದರ ನಿಗದಿ ಸಂಬಂಧ ರಿಯಾಯತಿ, ನಾಗಶೆಟ್ಟಿಕೊಪ್ಪ ಮತ್ತು ಹಳೆ ಹುಬ್ಬಳ್ಳಿಯಲ್ಲಿ ಈಗಾಗಲೇ ಹಂಚಿಕೆ ಮಾಡಲಾದ ನಿವೇಶನದಾರರಿಗೆ ಹಕ್ಕುಪತ್ರ ಹಂಚಿಕೆ ಕುರಿತು ಕಾನೂನಾತ್ಮಕವಾಗಿ ಪರಿಶೀಲಿಸುವಂತೆ ಸೂಚಿಸಲಾಯಿತು.

ಪಿಂಚಣಿ ಅನುದಾನ: ಸರಕಾರದಿಂದ ಒಟ್ಟು ಪಿಂಚಣಿ ಅನುದಾನ 115 ಕೋಟಿ ರೂ. ನೀಡುವುದು ಬಾಕಿ ಇದೆ. ಈಗಾಗಲೇ 52 ಕೋಟಿ ರೂ. ಬಿಡುಗಡೆಗೆ ಅನುಮೋದನೆಯಾಗಿದ್ದು, ಈ ಪೈಕಿ 26 ಕೋಟಿ ರೂ. ವಿತರಿಸಲಾಗಿದೆ. ಇನ್ನುಳಿದ 26 ಕೋಟಿ ರೂ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ವಾರದೊಳಗೆ ಬಿಡುಗಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಶೆಟ್ಟರ ಸೂಚನೆ ನೀಡಿದರು.

Advertisement

ಕೈಗಾರಿಕೆಗಳಿಗೆ ಆಸ್ತಿ ತೆರಿಗೆ: ರಾಜ್ಯದಲ್ಲಿ ಕೈಗಾರಿಕೆಗಳಿಗೆ ಮಹಾನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ವತಿಯಿಂದ ಆಸ್ತಿಕರ ಪಾವತಿಗೆ ನೋಟಿಸ್‌ ನೀಡಲಾಗುತ್ತಿದೆ. ಈಗಾಗಲೇ ಕೈಗಾರಿಕೆಗಳು ಸಂಕಷ್ಟದ ಪರಿಸ್ಥಿತಿಯಲ್ಲಿವೆ. ಇಂಥ ಸಂದರ್ಭದಲ್ಲಿ ಸೂಕ್ತ ತೆರಿಗೆ ವಿಧಿಸುವ ಕುರಿತು ಕ್ಯಾಬಿನೆಟ್‌ಗೆ ನೋಟ್‌ ನೀಡುವಂತೆ ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು. ಬೆಂಗಳೂರು ಪೀಣ್ಯಾ ಮತ್ತು ಎಲೆಕ್ಟ್ರಾನಿಕ್‌ ಸಿಟಿ ಮಾದರಿಯಲ್ಲಿ ಹು-ಧಾ ವ್ಯಾಪ್ತಿಯಲ್ಲಿ ಕೈಗಾರಿಕಾ ವಸಹಾತುಗಳಿಗೆ ಶೇ.70 ಮತ್ತು 30ರ ಪ್ರಮಾಣದಲ್ಲಿ ನಿರ್ವಹಣೆ ಜವಾಬ್ದಾರಿ ನೀಡಲು ಕಾನೂನಾತ್ಮಕ ಪರಿಶೀಲಿಸಲು ಸೂಚಿಸಲಾಯಿತು.

ಪೌರ ಕಾರ್ಮಿಕರ ನೇರ ನೇಮಕಾತಿ ವಿಷಯವಾಗಿ ಪಾಲಿಕೆಯಲ್ಲಿ ಅವಶ್ಯಕತೆ ಇರುವ ಘನತ್ಯಾಜ್ಯ ನಿರ್ವಹಣೆಗೆ ಲೋಡರ್ಸ್‌, ಕ್ಲೀನರ್ಸ್‌, ಚಾಲಕರು ಮತ್ತು ಸಹಾಯಕರ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂಬಂಧ ಪರಿಶೀಲಿಸಿ ಹು-ಧಾ ಮಹಾನಗರ ಪಾಲಿಕೆ ಆಯುಕ್ತರು ವರದಿ ನೀಡಬೇಕು. ಈ ವರದಿ ಅನುಸರಿಸಿ ಪೌರಾಡಳಿತ ನಿರ್ದೇಶನಾಲಯ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.

ಹುಬ್ಬಳ್ಳಿ ಧಾರವಾಡ ಸಮಗ್ರ ಒಳಚರಂಡಿ ಯೋಜನೆಗೆ ಪಾಲಿಕೆಯ 492.91 ಕೋಟಿ ಅಂದಾಜು ಪಟ್ಟಿಗೆ ಅನುಮೋದನೆ ನೀಡುವಂತೆ ಕಾರ್ಯದರ್ಶಿಗೆ ಸೂಚಿಸಲಾಯಿತು. ಇದಕ್ಕಾಗಿ ಪಾಲಿಕೆಯಿಂದ 73 ಕೋಟಿ ರೂ. ವಂತಿಗೆ ಭರಿಸಲು ಒಪ್ಪಿಗೆ ಪತ್ರ ನೀಡಲು ಕಾರ್ಯದರ್ಶಿಯವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಐಟಿ ಪಾರ್ಕ್‌: ಇಲ್ಲಿನ ಅಮರಗೋಳ ಪ್ರದೇಶದಲ್ಲಿ ಐಟಿ ಪಾರ್ಕ್‌ಗೆ ಮೀಸಲಿಟ್ಟಿದ್ದ 25ಎಕರೆ ಜಾಗದಲ್ಲಿ ಈಗಾಗಲೇ ಹಲವಾರು ಕಂಪನಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ. ಉಳಿದ 10 ಎಕರೆ ಪ್ರದೇಶ ಇದುವರೆಗೂ ಹಂಚಿಕೆಯಾಗಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಶಾಸಕ ಅರವಿಂದ ಬೆಲ್ಲದ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಶಂಕರ, ನಗರ ಯೋಜನಾ ಇಲಾಖೆ ನಿರ್ದೇಶಕ ಶಶಿಕುಮಾರ, ಪೌರಾಡಳಿತ ನಿರ್ದೇಶಕಿ ಬಿ.ಬಿ.ಕಾವೇರಿ, ಕೆಯುಐಡಿಎಫ್‌ಸಿ ಎಂಡಿ ಚಾರುಲತಾ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ್‌ ಇಟ್ನಾಳ, ಹು-ಧಾ ಸ್ಮಾರ್ಟ್‌ಸಿಟಿ ಎಂಡಿ ಶಕೀಲ್‌ ಅಹ್ಮದ್‌ ಇನ್ನಿತರೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next