ಬೆಂಗಳೂರು: ಎರಡನೇ ದಿನಕ್ಕೆ ಕಾಲಿಟ್ಟ ಬೆಂಗಳೂರು ಕೃಷಿ ಮೇಳಕ್ಕೆ ಒಟ್ಟಾರೆ ಮೂರೂವರೆ ಲಕ್ಷ ಜನ ಭೇಟಿ ನೀಡಿದ್ದು, ಎರಡೂವರೆ ಕೋಟಿ ರೂ. ವಹಿವಾಟು ನಡೆದಿದೆ. ಮೊದಲ ದಿನ ಮೇಳಕ್ಕೆ ಭೇಟಿ ನೀಡಿದವರ ಸಂಖ್ಯೆ ಕೇವಲ 1.10 ಲಕ್ಷ ಇತ್ತು. ಆದರೆ, ಶುಕ್ರವಾರ ಈ ಸಂಖ್ಯೆ ದುಪ್ಪಟ್ಟು ಅಂದರೆ 2.5 ಲಕ್ಷ ರೈತರು ಹರಿದುಬಂದರು.
ಅದೇ ರೀತಿ, ವಹಿವಾಟು ಕೂಡ ಹೆಚ್ಚಳವಾಗಿದ್ದು, ಗುರುವಾರ 97 ಲಕ್ಷ ಇದ್ದದ್ದು ಎರಡನೇ ದಿನದ ಸಂಜೆವರೆಗೆ 1.6 ಕೋಟಿ ರೂ. ತಲುಪಿತ್ತು. ಮುಂದಿನ ಎರಡು ದಿನಗಳು ಇದು ಮೂರುಪಟ್ಟು ಆಗುವ ನಿರೀಕ್ಷೆ ಇದೆ ಎಂದು ಕೃಷಿ ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
ನಿರೀಕ್ಷೆಗೂ ಮೀರಿದ ಸ್ಪಂದನೆಯು ಕೃಷಿಯ ಬಗ್ಗೆ ಜನರಲ್ಲಿ ಇರುವ ಆಸಕ್ತಿಗೆ ಸಾಕ್ಷಿಯಾಯಿತು. ನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೆ ಮೂಲೆ-ಮೂಲೆಗಳಿಂದ ಲಕ್ಷಾಂತರ ರೈತರು ಮೇಳಕ್ಕೆ ಬರುತ್ತಿದ್ದಾರೆ. ನಗರದ ನಿವಾಸಿಗಳು ಕೂಡ ಇದರಲ್ಲಿ ಹೆಚ್ಚಿನ ಸಂಖ್ಯೆಲ್ಲಿದ್ದರು. ಶನಿವಾರ ಐಟಿ-ಬಿಟಿ ಕಂಪನಿಗಳಿಗೆ ರಜೆ ಇರುತ್ತದೆ.
ಅಲ್ಲದೆ, ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ನಗರದ ಉತ್ತರ ಹಾಗೂ ದಕ್ಷಿಣ ಭಾಗದ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೇಳಕ್ಕೆ ಆಗಮಿಸಲಿದ್ದಾರೆ. ಕಳೆದ ವರ್ಷದ ಮೇಳದಲ್ಲಿ ಶನಿವಾರ ನಾಲ್ಕು ಲಕ್ಷ ಜನ ಭೇಟಿ ನೀಡಿದ್ದರು. ಈ ಬಾರಿ ಕೂಡ ಇಷ್ಟೇ ಜನರನ್ನು ನಿರೀಕ್ಷಿಸಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಶಿವರಾಂ ತಿಳಿಸಿದರು.
ಭೇಟಿ ನೀಡಿದವರಲ್ಲಿ ಬಹುತೇಕರು ಯಂತ್ರೋಪಕರಣಗಳು, ಸ್ವ-ಸಹಾಯ ಸಂಘಗಳಲ್ಲಿನ ಉತ್ಪನ್ನಗಳ ವೀಕ್ಷಣೆ ಮತ್ತು ಖರೀದಿಗೆ ಮುಗಿಬಿದ್ದದ್ದು ಕಂಡುಬಂತು. ಅಷ್ಟೇ ಅಲ್ಲ, ಸಾವಿರಾರು ಜನ ಯಂತ್ರೋಪಕರಣಗಳ ಖರೀದಿಸಲು ಮುಂಗಡ ಹಣ ಪಾವತಿಸಿ, ವಿಳಾಸ ದಾಖಲಿಸಿದ್ದಾರೆ. ಸ್ಟಾರ್ಟ್‌ಅಪ್‌ಗ್ಳು, ಲೇಸರ್ ನೀರಾವರಿ, ನಗರ ಕೃಷಿ ಯಂತ್ರೋಪಕರಣಗಳು ಹೆಚ್ಚು ಜನರನ್ನು ಆಕರ್ಷಿಸಿದವು.