ಕೆಲವರಿಗೆ ಜನರಿಗೆ ತಾನು ಏನಾದರೂ ಮಾಡುವ ಉಮೇದು ಯಾವುದೋ ಒಂದು ಘಟನೆಯಿಂದಲೂ ಅಥವಾ ವ್ಯಕ್ತಿಗಳಿಂದಲೂ ಬರುತ್ತದೆ. ಬಾಲಿವುಡ್ ನಲ್ಲಿ ಇತ್ತೀಚೆಗೆ ಸತ್ಯಕಥೆಯನ್ನು ತೆರೆಯ ಮೇಲೆ ತಂದು, ಜನರಲ್ಲಿ ಜಾಗೃತಿಯ ಮನೋಭಾವವನ್ನು ಮೂಡಿಸುತ್ತಿರುವವರಲ್ಲಿ ಒಬ್ಬರು ನಟ ಅಕ್ಷಯ್ ಕುಮಾರ್. ಅವರ ಅಭಿನಯದ ‘ಪ್ಯಾಡ್ ಮ್ಯಾನ್’ ಎನ್ನುವ ಚಿತ್ರವನ್ನು ನೀವು ನೋಡಿರಬಹುದು. ಅದು ತೆರೆಯ ಮೇಲೆ ಗ್ರಾಮೀಣ ಭಾಗದ ಮಹಿಳೆಯರ ಸಮಸ್ಯೆಗಳನ್ನು ನೇರವಾಗಿ ಹೇಳಿದಂಥ ಸಿನಿಮಾ. ಸಿನಿಮಾವಾದ್ರೂ ಕೂಡ ವಾಸ್ತವವನ್ನು ಹೇಳಿದಂಥಹ ಕಥೆಯದು.
ಸಿನಿಮಾವನ್ನೇ ನೋಡಿ ಸ್ಪೂರ್ತಿಗೊಂಡ ನಮಗೆ ನಿಜ ಜೀವನದಲ್ಲಿ ಅಂಥದ್ದೇ ಕಾರ್ಯವನ್ನು ಮಾಡುತ್ತಿರುವ ವ್ಯಕ್ತಿಯನ್ನು ನೋಡಿದರೆ ಖುಷಿಯಾಗದೇ, ಸ್ಪೂರ್ತಿಗೊಳ್ಳದೇ ಇರುತ್ತದೆಯೋ ? ಅಂಥ ನಿಜ ಜೀವನದ ಹೀರೋ ಒಬ್ಬನ ಕೆಲಸದ ಒಂದು ನೋಟ ಇಲ್ಲಿದೆ. ರಾಜಸ್ಥಾನದ ಹರಾಸೌರು ಜಿಲ್ಲೆಯ ನಾಗೌರು ಗ್ರಾಮದ ಸಾಮಾನ್ಯ ಕುಟುಂಬದ ಹುಡುಗ ಮಹಿಂದ್ರ ರಾಥೋಡ್. ಚಿಕ್ಕ ವಯಸ್ಸಿನಿಂದಲೇ ಸಮಾಜಕ್ಕಾಗಿ ಏನಾದರೂ ಮಾಡುತ್ತಿದ್ದ ಅವರ ಅಮ್ಮನ ಮಹಿಳಾ ಆರೋಗ್ಯದ ಪ್ರೇಮವನ್ನು ನೋಡಿ ಬೆಳೆದ ಹುಡುಗ. ಶಿಕ್ಷಣಕ್ಕಾಗಿ ಜಿಲ್ಲೆ,ರಾಜ್ಯ, ಕೊನೆಗೆ ಉನ್ನತ ಶಿಕ್ಷಣಕ್ಕಾಗಿ ಕಜಕಿಸ್ತಾನದ ಕಾಲೇಜು ಮೆಟ್ಟಿಲು ಹತ್ತಿದವ.
ಅದೊಂದು ದಿನ ಮಹಿಂದ್ರ ಅವರ ತಾಯಿ, ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪುತ್ತಾರೆ. ಇದೇ ನೋವಿನಲ್ಲಿ ಕಾಲೇಜಿನ ವಿದ್ಯಾಭ್ಯಾಸ ಮಾಡುತ್ತಿದ್ದ ಮಹಿಂದ್ರ, ವರ್ಷದ ಹಿಂದಿನ ಲಾಕ್ ಡೌನ್ ನಲ್ಲಿ ತನ್ನ ಊರಿಗೆ ಮರಳುತ್ತಾರೆ. ಊರಿನ ಸ್ಥಿತಿಗತಿಗಳನ್ನು ಅರಿತಿದ್ದ ಮಹೀಂದ್ರ, ಗ್ರಾಮದಲ್ಲಿ ಮಹಿಳೆಯರು ಪಡುತ್ತಿದ್ದ ಪಾಡಿನ ಬಗ್ಗೆಯೂ ಅರಿತಿದ್ದ.
ತಾನು ತನ್ನ ಅಮ್ಮ ಮಹಿಳೆಯರಿಗಾಗಿ ಮಾಡುತ್ತಿದ್ದ ಸೇವೆಗೆ ಗೌರವ ಸಲ್ಲಿಸುವುದ್ದಕ್ಕಾಗಿ ಈ ಭಾಗದ ಮಹಿಳೆಯರಿಗಾಗಿ ಏನಾದರೂ ಮಾಡಬೇಕೆನ್ನುವ ಯೋಚನೆಯೊಂದಿಗೆ ಮಹಿಂದ್ರ ಮೊದಲು, ಗ್ರಾಮದ ಮಹಿಳೆಯರ ಮೂಲಭೂತ ಸಮಸ್ಯೆಗಳಲ್ಲಿ ಒಂದಾಗಿರುವ ಶುಚಿತ್ವದ ಕುರಿತಾಗಿ ತಿಳಿದುಕೊಳ್ಳುತ್ತಾರೆ. ಗ್ರಾಮದಲ್ಲಿ ಮಹಿಳೆಯರು ಮುಟ್ಟಿನ ವೇಳೆ ಬಳಸುತ್ತಿದ್ದ ಬಟ್ಟೆಯಿಂದ ಆಗುತ್ತಿದ್ದ ಆರೋಗ್ಯ ಸಮಸ್ಯೆಯನ್ನು ಅವರಿಗೆ ಹೇಳಿ, ಅದರಿಂದ ಪಾರಾಗಲು ಏನಾದರೂ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ಮಹಿಂದ್ರ ಹೊಸ ಸಾಹಸವೊಂದಕ್ಕೆ ಮುಂದಾಗುತ್ತಾರೆ.
ಸೈಕಲ್ ನಲ್ಲಿ ಸವಾರಿ ; ಜಾಗೃತಿಯನ್ನು ಹೊತ್ತ ಅಂಬಾರಿ ! :
ಅದೊಂದು ದಿನ ಮಹಿಂದ್ರ ಸಮಸ್ಯೆಯ ಮೂಲವನ್ನು ಮನಗಂಡು, ಮಹಿಳೆಯರಿಗಾಗಿ ಸ್ಯಾನಿಟರಿ ಪ್ಯಾಡ್ ನ್ನು ಹಿಡಿದುಕೊಂಡು ಗ್ರಾಮಕ್ಕೆ ತೆರಳಿ, ಮಹಿಳೆಯರಲ್ಲಿ, ಅದರ ಬಳಕೆ ಮತ್ತು ಆರೋಗ್ಯ, ಶುಚಿತ್ವದ ಕುರಿತು ಮಾತಿಗಿಳಿಯುತ್ತಾನೆ. ಮಹಿಳೆಯರು ಈತನ ವರ್ತನೆ ನೋಡಿ ಮೊದ ಮೊದಲು ಭೀತಿಗೊಂಡು ಈತನಿಂದ ದೂರ ಉಳಿಯುತ್ತಾರೆ. ಆದರೆ ಮಹಿಂದ್ರರ ಈ ಸೇವೆ ಹಿಂದಿನ ಒಳಿತನ ಉದ್ದೇಶವನ್ನು ಅರಿತ ಗ್ರಾಮದ ಮಹಿಳೆಯರು, ಆತನ ಶುಚಿತ್ವದ ಪಾಠವನ್ನು ಅನುಸರಿಸುತ್ತಾರೆ.
ಲಾಕ್ ಡೌನ್ ಅವಧಿಯಲ್ಲಿ ಮಹಿಂದ್ರ ಅಗತ್ಯವಿರುವ ಜನರಿಗೆ ಔಷಧಿ ಹಾಗೂ ಆಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ. ‘ಮದರ್ಸ್ ಹ್ಯಾಂಡ್’ ಎನ್ನುವ ಎನ್ ಜಿ. ಓ ಶುರು ಮಾಡಿ, ಅದರ ಮೂಲಕ ಮುಟ್ಟಿನ ಶುಚಿತ್ವದ ಕುರಿತು ಗ್ರಾಮ ಗ್ರಾಮದಲ್ಲೂ ಜಾಗೃತಿಯನ್ನು ಮೂಡಿಸುತ್ತಾರೆ.23 ವರ್ಷದ ಮಹಿಂದ್ರ , ತನ್ನ ಉದ್ದೇಶಕ್ಕೆ ಹಣವನ್ನು ಹೊಂದಿಸಿಕೊಳ್ಳುವುದೇ ಒಂದು ಸವಾಲು. ಇದಕ್ಕಾಗಿ ಆತ ಅಕ್ಕಪಕ್ಕದ ಊರಿನಲ್ಲಿ ದೊಡ್ಡ ವ್ಯಕ್ತಿಗಳಿಂದ ಹಣ ಕೇಳುವ ಬದಲು ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ನೀಡಿ, ಅದನ್ನು ಗ್ರಾಮದ ಮಹಿಳೆಯರಿಗೆ ನೀಡುತ್ತೇನೆ ಎಂದು ಕೇಳಿ ಸಫಲರಾಗುತ್ತಾರೆ. ತನ್ನ ಸ್ನೇಹಿತರಿಗೂ ಇದನ್ಮೇ ಹೇಳಿ ಅವರಿಂದಲೂ ನ್ಯಾಪ್‌ಕಿನ್ ಪಡೆಯಲು ಹಣ ಪಡೆದು, ವಿತರಿಸುತ್ತಾರೆ..
ಎಲ್ಲವೂ ಅಂದುಕೊಂಡಂತೆ ಆಗಿಲ್ಲ. ಅದೊಂದು ದಿನ ಸ್ಯಾನಿಟರಿ ಪ್ಯಾಡ್ ಗಳನ್ನು ಕಪ್ಪು ಕವರ್ ನಲ್ಲಿ ವಿತರಿಸಿ, ಶುಚಿತ್ವದ ಕುರಿತು ಮಾಹಿತಿ ನೀಡಲು ಹೋದಾಗ ಸುಮಾರು 300 ಕ್ಕೂ ಹೆಚ್ಚು ಮಹಿಳೆಯರು ಅನುಮಾನದ ದೃಷ್ಟಿಯಲ್ಲಿ ನೋಡಿ ಸುತ್ತುವರೆದಿದ್ದರಂತೆ. ಕೊನೆ ಕೊನೆಗೆ ಮಹಿಂದ್ರರ ಮನೋಭಾವನೆ ಅರಿತ ಮಹಿಳೆಯರು ಅವರ ಸೇವೆಯನ್ನು ಶ್ಲಾಘಿಸಿದರು. ಮಹಿಂದ್ರ ಮೊದಲು ಮಹಿಳೆಯರಿಗೆ ತನ್ನ ಉದ್ದೇಶವನ್ನು ತಿಳಿಸಲು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದ್ದರಂತೆ. ಅಮ್ಮನಿಂದ ಆರೋಗ್ಯದ ಆರೈಕೆ ಬಗ್ಗೆ ತಿಳಿದುಕೊಂಡಿದ್ದ ಮಹಿಂದ್ರ ಕಳೆದ 18 ತಿಂಗಳಿನಿಂದ ಸುಮಾರು 15 ಸಾವಿರಕ್ಕೂ ಹೆಚ್ಚಿನ ಸ್ಯಾನಿಟರಿ ಪ್ಯಾಡ್ ಗಳನ್ನು ಗ್ರಾಮೀಣ ಭಾಗದ ಮಹಿಳೆಯರಿಗೆ ವಿತರಿಸಿದ್ದಾರೆ.
– ಸುಹಾನ್ ಶೇಕ್