ಹುಣಸೂರು: ರಾಗಿ ಬೆಳೆಯಲ್ಲಿ ಎಲೆ ತಿನ್ನುವ ಹುಳುಗಳು ಕಂಡು ಬಂದಿರುವ ಹನಗೋಡು ಹೋಬಳಿಯ ಹೊಲಗಳಿಗೆ ಮಂಡ್ಯದ ವಿ.ಸಿ.ಫಾರಂನ ಕೃಷಿ ವಿಜ್ಞಾನಿ ಡಾ.ಪ್ರಕಾಶ್ ಹಾಗೂ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಹನಗೋಡು ಹೋಬಳಿಯ ಕಾಮಗೌಡನಹಳ್ಳಿ ಗ್ರಾಮದ ರೈತರಾದ ಮಹದೇವಪ್ಪ, ಲಿಂಗರಾಜಪ್ಪ, ಸಿದ್ದಲಿಂಗನಾಯಕ ಪ್ರಕಾಶ, ನಂದಿಬಸಪ್ಪ, ಸೋಮಪ್ಪರವರು ತಮ್ಮ ರಾಗಿ ಹೊಲಗಳಲ್ಲಿ ಹುಳುಗಳ ಕಾಟದಿಂದ ಆಗುತ್ತಿರುವ ಹಾನಿ ಬಗ್ಗೆ ವಿವರಿಸಿದರು.
ವಿಜ್ಞಾನಿ ಹಾಗೂ ಕೃಷಿ ಅಧಿಕಾರಿಗಳು ರಾಗಿ ಹೊಲದಲ್ಲಿ ಅಡ್ಡಾಡಿ ರಾಗಿ ಸಸ್ಯದ ಎಲೆ ಭಾಗಗಳನ್ನು ತಿಂದು ಬೆಳೆಯನ್ನು ನಾಶಮಾಡುತ್ತಿರುವ ಹಸಿರು ಹುಳುವಿಗೆ ಸೆಮಿಲೂಪರ್ ಹುಳುಗಳೆಂದು ಕರೆಯಲಾಗುವುದು. ಈ ಹುಳುಗಳು ಒಂದು ಜಮೀನುನಿಂದ ಮತ್ತೂಂದು ಜಮೀನಿಗೆ ವಲಸೆ ಹೋಗಿ ಬೆಳೆಯನ್ನು ನಾಶ ಮಾಡುವುದರಿಂದ ಈ ಭಾಗದ ರೈತರು ತಪ್ಪದೇ ಹತೋಟಿಗೆ ಇಲಾಖೆ ಸೂಚಿಸುವ ಕ್ರಮ ಅನುಸರಿಸಬೇಕು ಎಂದು ಕೃಷಿ ವಿಜ್ಞಾನಿ ಡಾ.ಪ್ರಕಾಶ್ ಎಚ್ಚರಿಸಿದರು.
ಹುಳುಬಾಧೆ ನಿಯಂತ್ರಣಕ್ಕೆ ಕ್ರಮ: ಸಹಾಯಕ ಕೃಷಿ ನಿರ್ದೇಶಕ ಜೆ.ವೆಂಕಟೇಶ್ ಮಾಹಿತಿ ನೀಡಿ, ರಾಗಿ ಹೊಲಗಳಲ್ಲಿ ಕಾಣಿಸಿಕೊಳ್ಳುವ ಹುಳುಗಳ ನಿಯಂತ್ರಣಕ್ಕಾಗಿ ಕವಲು ಇರುವಂತಹ ಕಡ್ಡಿಗಳನ್ನು ಬೆಳೆಗಿಂತ ಒಂದು ಅಡಿ ಎತ್ತರದಲ್ಲಿ ಅಲ್ಲಲ್ಲಿ ನೆಟ್ಟು, ಆಕರ್ಷಕ ಪದಾರ್ಥಗಳನ್ನು ಕಟ್ಟಬೇಕು. ಆ ಮೂಲಕವೂ ಪಕ್ಷಿಗಳನ್ನು ಆಕರ್ಷಿಸಿ ಹುಳುಗಳನ್ನು ನಿಯಂತ್ರಣ ಮಾಡಬಹುದು.
ಜಮೀನಿನಲ್ಲಿ ಅನ್ನ ಅಥವಾ ಪುರಿ ಚೆಲ್ಲಿ ಪಕ್ಷಿಗಳನ್ನು ಆಕರ್ಷಿಸಿದಾಗ ಬರುವ ಪಕ್ಷಿಗಳು ಹುಳುವನ್ನು ತಿನ್ನಲಿವೆ. ಜೊತೆಗೆ ಹೆಚ್ಚಿನ ಹಾನಿ ಕಂಡು ಬಂದಲ್ಲಿ ಇಂಡಾಕ್ಸಿಕಾರ್ಬ್ ಕ್ರಿಮಿನಾಶಕವನ್ನು 10 ಲೀ. ನೀರಿಗೆ 6 ಗ್ರಾಂ ನಂತೆ ಬೆರೆಸಿ ಸಿಂಪರಣೆ ಮಾಡಬೇಕು. ಈಗಾಗಲೇ ಹಸಿರು ಹುಳು ಕಂಡುಬಂದ ಅಕ್ಕಪಕ್ಕದ ರೈತರು ಕೂಡಾ ಮುಂಜಾಗ್ರತವಾಗಿ ಕ್ರೋರೋಫೆ ರಿಪಾಸ್‌ನ್ನು ಸಿಂಪರಣೆ ಮಾಡುವುದರಿಂದ ಹತೋಟಿ ಮಾಡಬಹುದಾಗಿದೆ.
ಎಲೆ ತಿನ್ನುವ ಹುಳು ಅಥವಾ ಹಸಿರುಹುಳು ತಾಲೂಕಿನ ಯಾವುದೇ ಗ್ರಾಮದಲ್ಲಿ ಕಂಡು ಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಹತೋಟಿ ಕ್ರಮಕೈಗೊಳ್ಳಲು ರೈತರಿಗೆ ಸೂಚಿಸಿದರು. ಆತ್ಮ ಉಪಯೋಜನಾ ನಿರ್ದೇಶಕ ರವೀಂದ್ರ, ಕೃಷಿ ಅಧಿಕಾರಿಗಳಾದ ಹರೀಶ್, ವೆಂಕಟಾಚಲಪತಿ ಸಹಾಯಕ ಕೃಷಿ ಅಧಿಕಾರಿ, ಪುಟ್ಟರಾಜೇಗೌಡ ತಂಡದಲ್ಲಿದ್ದರು.