Advertisement

ಸಿಎಂ ಭೇಟಿ: ಜಿಲ್ಲೆಯಲ್ಲಿ ಗರಿಗೆದರಿದ ನಿರೀಕ್ಷೆ

03:52 PM Jul 16, 2018 | |

ರಾಮನಗರ: ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಇಂದು (ಜು.16) ನಗರಕ್ಕೆ ಭೇಟಿ ನೀಡಲಿದ್ದು, ಜಿಲ್ಲೆಯ ನಾಗರಿಕರಲ್ಲಿ ಭರವಸೆಗಳ ಗರಿಗೆದರಿದೆ.

Advertisement

ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಿಸುವ ಭರವಸೆ ಇರಿಸಿಕೊಂಡಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿತ್ತು. ಇದೀಗ ಸಿಎಂ ಖುದ್ದು ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಜನತೆಯಲ್ಲಿ ಮತ್ತೆ ಭರವಸೆ ಗರಿಗೆದರಿದೆ.

ಸ್ವತ್ಛತಾ ಕಾರ್ಯ: ಮುಖ್ಯಮಂತ್ರಿಗಳು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಡೀಸಿ ಕಚೇರಿ, ಜಿಪಂ ಭವನಗಳಲ್ಲಿ ಸಿಬ್ಬಂದಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾನುವಾರವೂ ಕೆಲವು ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ಕೊನೆ ಹಂತದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದು ಕಂಡು ಬಂತು.

ರಾಜೀವ್‌ಗಾಂಧಿ ವಿವಿ ಕಟ್ಟಡ ನಿರ್ಮಾಣ ಕುರಿತು ಚರ್ಚೆ: ಸೋಮವಾರ ಬೆಳಗ್ಗೆ 9 ಗಂಟೆಗೆ ನಗರಕ್ಕೆ ರಸ್ತೆಯ ಮೂಲಕ ಆಗಮಿಸುವ ಸಿಎಂ, ಮೊದಲು ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣ (ಡೀಸಿ ಕಚೇರಿ)ಗೆ ಆಗಮಿಸುವರು. ಜಿಲ್ಲಾ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸುವರು. ಇದೇ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸುವರು. ಉಪಹಾರ ಸೇವನೆಯ ನಂತರ ಅರ್ಚಕರಹಳ್ಳಿಯಲ್ಲಿ ಉದ್ದೇಶಿಸಿರುವ ರಾಜೀವ್‌ ಗಾಂಧಿ ವಿವಿ ಕಟ್ಟಡ ನಿರ್ಮಾಣ ಕುರಿತು ಅಧಿಕಾರಿಗಳ ಜತೆ ಚರ್ಚಿಸುವರು.

ಜನತಾದರ್ಶನ, ಅಹವಾಲು ಸ್ವೀಕಾರ: ನಂತರ 10 ಗಂಟೆ ವೇಳೆಗೆ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆಯುವ ಕುಂದುಕೊರತೆ ಸಭೆಯಲ್ಲಿ ಜಿಲ್ಲೆಯ ಜನತೆಯ ಅಹವಾಲು ಸ್ವೀಕರಿಸುವರು. ನಂತರ ಸಾರ್ವಜನಿಕ ಸಂಪರ್ಕ ಸಭೆಯಲ್ಲಿಯೂ ಭಾಗವಹಿ ಸುವರು. ಮಧ್ಯಾಹ್ನ 3 ಗಂಟೆಗೆ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಭಿವೃದ್ಧಿ ಪರಿಶೀಲನೆ ನಡೆಸುವರು. ಸಂಜೆ 6 ಗಂಟೆಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬೆಂಗಳೂರಿಗೆ ತೆರಳುವರು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ. 

Advertisement

ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ರಾಮನಗರ ಭೇಟಿ ವೇಳೆ ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ ವಿವಿಧ ಯೋಜನೆಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿವಿಧ ಕಾಲೇಜುಗಳ ಹೆಚ್ಚುವರಿ ತರಗತಿ ಕೊಠಡಿಗಳು, ಗ್ರಂಥಾಲಯ ಕೊಠಡಿ, ಪ್ರಯೋಗಾಲಯ (220 ಲಕ್ಷ ರೂ. ಅಂದಾಜು ವೆಚ್ಚ), ಡಿಎಚ್‌ಒ ಕಚೇರಿ ಕಟ್ಟಡ ನಿರ್ಮಾಣ (92 ಲಕ್ಷ ರೂ. ಅಂದಾಜು ವೆಚ್ಚ), ಪಶುಪಾಲನ ಮತ್ತು ಪಶು ವೈದ್ಯಕಿಯ ಇಲಾಖೆಯ ಜಿಲ್ಲಾ ಪಾಲಿಕ್ಲಿನಿಕ್‌ ಕಟ್ಟಡ (205 ಲಕ್ಷ ರೂ. ಅಂದಾಜು ವೆಚ್ಚ), ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ಮಹಿಳಾ ವಿದ್ಯಾರ್ಥಿ ನಿಲಯ (200 ಲಕ್ಷ ರೂ. ಅಂದಾಜು ವೆಚ್ಚ), ನಗರೋತ್ಥಾನ 3ನೇ ಹಂತದಲ್ಲಿ ನಗರದ ಸಿರೇಹಳ್ಳದ ತಡೆಗೋಡೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿ, ರಸ್ತೆ, ಚರಂಡಿ ಮುಂತಾದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು
ಶಂಕುಸ್ಥಾಪನೆ ನೆರವೇರಿಸುವರು. 

ಭರವಸೆ ಈಡೇರುವುದೇ? 
ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೆ ತಮ್ಮ ರಾಜಕೀಯ ಕರ್ಮ ಭೂಮಿಯಿಂದ ಸ್ಪರ್ಧಿಸಿ ಗೆದ್ದು ಮತ್ತೆ ಎರಡನೇ ಬಾರಿ ಮುಖ್ಯಮಂತ್ರಿ ಆಗಿ ದ್ದಾರೆ. ಇತ್ತೀಚೆಗೆ ಅವರು ಮಂಡಿಸಿದ ಸಮ್ಮಿಶ್ರ ಸರ್ಕಾರದ ಪ್ರಥಮ ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಕನಸ ಕಂಡಿದ್ದ ಜಿಲ್ಲೆಯ ಜನತೆಗೆ ನಿರಾಸೆಯಾಗಿದೆ. 

ಇದೀಗ ಅಧಿಕೃತ ಭೇಟಿ ಕೊಡುತ್ತಿರುವ ವೇಳೆಯಲ್ಲಾದರು ವಿಶೇಷ ಯೋಜನೆಗಳನ್ನು ಘೋಷಿಸುವರು ಎಂಬ ನಿರೀಕ್ಷೆಯನ್ನು ಜನತೆ ಇರಿಸಿ ಕೊಂಡಿದ್ದಾರೆ. ಜಿಲ್ಲೆಯಲ್ಲಿ ಉಲ್ಬಣಿಸಿರುವ ಕಸ ವಿಲೇವಾರಿ ಸಮಸ್ಯೆ, ರಾಮಗನರ ಪಟ್ಟಣದಲ್ಲಿ 1ರಿಂದ 10ನೇ ವಾರ್ಡಿನ ಕುಡಿಯುವ ನೀರಿನ ಸಮಸ್ಯೆ, ನಗರ ವ್ಯಾಪ್ತಿಯ ನಿವೇಶನ ರಹಿತರಿಗೆ ಉಚಿತ ನಿವೇಶನ ಕೊಡುವ ಬಗ್ಗೆ, ಜಿಲ್ಲಾ ಕೇಂದ್ರದಲ್ಲಿ ವಿಶಾಲವಾದ ಬಸ್‌ ನಿಲ್ದಾಣ ನಿರ್ಮಾಣ, ಸುಸಜ್ಜಿತ ಮಾರುಕಟ್ಟೆ, ಹದಗೆಟ್ಟಿರುವ ರಸ್ತೆಗಳು, ನಗರಸಭೆಗೆ ವಿಶೇಷ ಪ್ಯಾಕೇಜ್‌ ಬಿಡುಗಡೆ ವಿಚಾರದಲ್ಲಿ ನಾಗರಿಕರು ಭರವಸೆ ಇರಿಸಿಕೊಂಡಿದ್ದಾರೆ. 

ಕಾಮಗಾರಿಗಳ ಉದ್ಘಾಟನೆ  ಇದೇ ವೇಳೆ ರಾಮನಗರದಲ್ಲಿ ಮುಖ್ಯ ಮಂತ್ರಿಗಳು ವಿವಿಧ ಕಾಮಗಾರಿಗಳನ್ನು ಉದಾಟಿಸಲಿದ್ದಾರೆ. 245 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಸ್ಕಾಂ ಉಪ ವಿಭಾಗ ಕಚೇರಿ ಕಟ್ಟಡ, ತಾಲೂಕಿನ ಬನ್ನಿಕುಪ್ಪೆ ಮತ್ತು ಕೈಲಾಂಚ ಗ್ರಾಮಗಳಲ್ಲಿ
ತಲಾ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶಾಖಾ ಕಚೇರಿ ಕಟ್ಟಡಗಳು, ನಗರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 1613.37 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮುಸ್ಲಿಂ ಸರ್ಕಾರಿ ವಸತಿ ಶಾಲೆ, ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಬಾಲಕಿಯರ ವಸತಿ ಪೂರ್ವ ಕಾಲೇಜುಗಳ ಉದ್ಘಾಟನೆಯನ್ನು ಸಿಎಂ ನೆರವೇರಿಸುವರು. ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಿದ್ಧಪಡಿಸಿರುವ ಇಲಾಖಾ ವೆಬ್‌ಸೈಟ್‌ (www.dicramanagara.com )ಗೆ ಸಿಎಂ ಚಾಲನೆ ನೀಡುವರು. 

Advertisement

Udayavani is now on Telegram. Click here to join our channel and stay updated with the latest news.

Next