Advertisement
ಶಿಗ್ಗಾವಿ ಪಟ್ಟಣದಲ್ಲಿ ರವಿವಾರ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಅನಾವರಣ ಹಾಗೂ ಪಂಚಮಸಾಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ಕ್ಷೇತ್ರದ ಜನರ ಪ್ರೀತಿ, ವಿಶ್ವಾಸವನ್ನು ನೆನೆಯುತ್ತ ಕೆಲ ಕ್ಷಣ ಭಾವುಕರಾದರು. ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವೇ ಇಲ್ಲ. ನಿಮ್ಮ ಪ್ರೀತಿ, ವಿಶ್ವಾಸದ ಮುಂದೆ ಯಾವ ಅಧಿಕಾರವೂ ಮಹತ್ವದ್ದಲ್ಲ. ಇದರ ಅರಿವು ಪ್ರತಿ ಕÒಣದಲ್ಲೂ ನಮಗಿರಬೇಕು.
ಭಾವನಾತ್ಮಕವಾಗಿ ಮಾತನಾಡಬಾರದು ಎಂದು ಪ್ರಯತ್ನಿಸಿದ್ದೇನೆ. ಆದರೆ, ನಿಮ್ಮನ್ನೆಲ್ಲ ನೋಡಿದಾಗ ಭಾವನೆಗಳು ಬರುತ್ತವೆ. ಮೊದಲಿನಂತೆ ಪದೇ ಪದೆ ಕ್ಷೇತ್ರಕ್ಕೆ ಬಂದು ನಿಮ್ಮನ್ನು ನೋಡಲು ಆಗುತ್ತಿಲ್ಲ. ಮುಖ್ಯಮಂತ್ರಿಯಾಗಿ ದೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಸಮಗ್ರ ರಾಜ್ಯದ ಚಿಂತನೆ, ಅಭಿವೃದ್ಧಿ ಮಾಡುವುದು, ಎಲ್ಲ ಸಮುದಾಯಗಳ ಭಾವನೆಗಳಿಗೆ ಸ್ಪಂದಿಸುವ ಜವಾಬ್ದಾರಿಯಿದೆ. ಇಂದಿನ ಕಾಲದಲ್ಲಿ ಜನರ ಆಶೋತ್ತರಗಳು ಹೆಚ್ಚಿವೆ. ಸರ್ಕಾರಕ್ಕೆ ಹಲವು ಸವಾಲುಗಳಿವೆ. ಅವುಗಳನ್ನು ಎದುರಿಸಿ ಯಶಸ್ವಿಯಾಗುವುದು ನನ್ನ ಗುರಿ ಎಂದರು.
Related Articles
Advertisement
ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ವಿಸ್ತರಣೆಗೆ ಹೋರಾಟ ಮಾಡಲಿಲ್ಲ. ರಾಜ್ಯದ ಜನರ ರಕ್ಷಣೆಗೆ, ಸ್ವಾಭಿಮಾನಕ್ಕಾಗಿ ಹೋರಾಡಿದಳು. ಪ್ರತಿಯೊಬ್ಬ ಕಿತ್ತೂರು ನಾಗರಿಕ ಯೋಧರಾಗಿ ಪರಿವರ್ತನೆ ಆದರು. ಇಂದು ಈ ರಾಜ್ಯ, ಸಮುದಾಯ ತನ್ನ ಅಸ್ಮಿತೆ, ಸ್ವಾಭಿಮಾನಕ್ಕಾಗಿ ಯೋಧರಾಗಿ ಹೋರಾಟ ಮಾಡೋ ಅಗತ್ಯವಿದೆ.
ಇತಿಹಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು. ಒಂದು ಸಮುದಾಯ ಬಹಳ ಮುಂದೆ ಹೋಗಿ ಇನ್ನೊಂದು ಸಮುದಾಯ ಹಿಂದುಳಿದರೆ ಮುಂದೆ ಹೋದ ಸಮುದಾಯಕ್ಕೂ ಒಳ್ಳೆಯದಾಗುವುದಿಲ್ಲ. ಆದ್ದರಿಂದ ಎಲ್ಲರ ಭಾವನೆಗಳಿಗೂ ಸ್ಪಂದಿಸುವ ಕೆಲಸ ಮಾಡುತ್ತೇನೆ. ಪ್ರತಿಯೊಂದು ಸಮಾಜಕ್ಕೂ ತಮ್ಮದೇ ಭಾವನೆಯಿದ್ದು, ಸ್ವಲ್ಪ ಸಮಾಯಾವಕಾಶ ನೀಡಿದರೆ ಎಲ್ಲವನ್ನೂ ಈಡೇರಿಸಲು ಪ್ರಯತ್ನಿಸುತ್ತೇನೆ. ನಾಡಿನ ಬಹುತೇಕ ಜನರಿಗೆ, ವಿಶೇಷವಾಗಿ ಧ್ವನಿಯಿಲ್ಲದವರು, ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧವಾಗಿ ಒಳ್ಳೆಯ ನಿರ್ಧಾರ ಕೈಗೊಳ್ಳೋಣ. ಅದಕ್ಕಾಗಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಹಕಾರ ನೀಡಬೇಕು. ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಲು ನಮ್ಮ ಸರ್ಕಾರ ಸಿದ್ಧ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಚಿವ ಮುರುಗೇಶ ನಿರಾಣಿ, ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ಬಸವನಗೌಡ ಪಾಟೀಲ ಯತ್ನಾಳ, ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಪಂಚಮಸಾಲಿ ಸಮಾಜದ ಪ್ರಮುಖರು ಇದ್ದರು.