ತಿ.ನರಸೀಪುರ: ತಾಲೂಕು ಮೂಗೂರು ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಸಾರ್ವಜನಿಕರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿನ ಅವ್ಯವಸ್ಥೆ ಕುರಿತು ನಿಲಯಕ್ಕೆ ಮೈಸೂರು ಜಿಪಂ ಕಾರ್ಯ ನಿರ್ವಾಹಣಾಧಿಕಾರಿ ಶಿವಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾಸ್ಟೆಲ್‌ಗೆ ಭೇಟಿ ನೀಡಿದ ವೇಳೆ ಹಾಸ್ಟೆಲ್ ಕಟ್ಟಡದ ದುಸ್ಥಿತಿಯನ್ನು ವೀಕ್ಷಣೆ ಮಾಡಿದರು. ಅವ್ಯವಸ್ಥೆ ಕುರಿತಂತೆ ನಿಲಯ ಪಾಲಕ ರಾಮಚಂದ್ರು ಜೊತೆ ಮಾತುಕತೆ ನಡೆಸಿ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ಕಲೆ ಹಾಕಿದರು. ದಾಸ್ತಾನು, ಕಟ್ಟಡದ ಶೌಚಾಲಯ, ಪರಿಶೀಲಿಸಿದರು. ಜಿಪಂ ಜೆಡಿ ಬಿಂದ್ಯಾ ಹಾಸ್ಟೆಲ್ ವಿದ್ಯಾರ್ಥಿಗಳ ಬಳಿ ಊಟೋಪಚಾರದ ಕುರಿತು ವಿಚಾರಿಸಿದರು.
ತಾಪಂ ಸದಸ್ಯ ಎಂ.ಚಂದ್ರಶೇಖರ್ ಮಾತನಾಡಿ, ಕಳೆದ 2-3 ಬಾರಿ ತಾ.ಪಂ ಸಾಮಾನ್ಯ ಸಭೆಯಲ್ಲಿ ನಮ್ಮ ಹಾಸ್ಟೆಲ್ ಅವ್ಯವಸ್ಥೆ ಕುರಿತು ಪ್ರಸ್ತಾಪಿಸಿ ವಾರ್ಡ್‌ನ ಬದಲಾವಣೆ ಮಾಡಲು ತಿರ್ಮಾನಿಸಿದರೂ ಕೂಡ ವಾರ್ಡ್‌ನ ಬದಲಾವಣೆ ಆಗಿಲ್ಲ. 15 ವರ್ಷಗಳಿಂದ ಇಲ್ಲೇ ಕರ್ತವ್ಯ ನಿರ್ವಸುತ್ತಿರುವ ಈತ ಮಕ್ಕಳಿಗೆ ನಿಲಯದಲ್ಲಿ ಸೌಲಭ್ಯ ನೀಡದೇ ವಂಚಿಸಿದ್ದಾನೆ ಎಂದು ಆರೋಪಿಸಿ ಈತನನ್ನು ಬೇರೆಡೆ ವರ್ಗಾಯಿಸುವಂತೆ ಒತ್ತಾಯಿಸಿದರು.
ಗ್ರಾಪಂ ಸದಸ್ಯ ಎಂ.ಆರ್.ಸುಂದರ್ ಮಾತನಾಡಿ, ಅಡುಗೆ ಸಿಬ್ಬಂದಿಗೆ ಮೇಲ್ವಿಚಾರಕ ರಾಮಚಂದ್ರು ಇನ್ನಿಲ್ಲದ ಕಿರುಕುಳ ನೀಡುವುದಲ್ಲೇ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನೆಂದು ದೂರಿದರು. ಜತೆಗೆ ವಾರ್ಡ್‌ನ ರಾಮಚಂದ್ರ ರಾಜಕೀಯ ಪ್ರಭಾವ ಬಳಸುತ್ತಾನೆಂದು ಗಂಭೀರ ಆರೋಪ ಮಾಡಿದರು.
ಜೆಡಿ ಬಿಂದ್ಯಾ ಮಾತನಾಡಿ, ವಾರ್ಡ್‌ನವರ ವಿರುದ್ಧ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಜೊತೆಗೆ ವರ್ಗಾವಣೆ ಮಾಡಲು ಕ್ರಮವಹಿಸುವುದಾಗಿ ಭರವಸೆ ನೀಡಿದರು. ಜಿಪಂ ಕೈಯಂಬಳ್ಳಿ ನಟರಾಜು ಮಾತನಾಡಿ, ಕರ್ತವ್ಯ ಲೋಪ ಎಸಗಿ ಮೇಲ್ವಿಚಾರಕನ ಮೇಲೆ ಕಾನೂನು ಕ್ರಮ ಜರುಗಿಸಿ ನಿಲಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿವಾಕರ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಕೋಮಲಾ, ಮೂಗೂರು ಸಿದ್ದರಾಜು, ಜೆಡಿಎಸ್ ಎಸ್ಟಿ ಘಟಕದ ಅಧ್ಯಕ್ಷ ಮೂಗೂರು ಕುಮಾರ್, ಪಿಡಿಒ ನಾಗೇಂದ್ರ, ಎಂ.ಎಂ.ಜಗದೀಶ್, ಎಂ.ಡಿ.ಮಹದೇವಸ್ವಾಮಿ, ಜಿ.ಪಿ.ಪುಟ್ಟಮಾದಯ್ಯ, ಶಶಿಕುಮಾರ್, ಕೆ.ಶೇಷಣ್ಣ, ನಾಗೇಂದ್ರ ಇತರರಿದ್ದರು.