Advertisement

45 ನಿಮಿಷಗಳ ಪ್ರಯಾಣ ಕುತೂಹಲ…ತೆರೆಮರೆಯ ಹೀರೋ ಅನಾವರಣ; ಅಂದು ಇಂಗ್ಲಿಷ್ ಲೆಕ್ಚರ್ ಇಂದು…

02:59 PM Mar 29, 2022 | Team Udayavani |

ನಮ್ಮ ಸುತ್ತ ಮುತ್ತ ಅದೆಷ್ಟೋ ಮಂದಿ ತೆರೆಮರೆಯ ಹೀರೋಗಳಿರುತ್ತಾರೆ. ಆದರೆ ಅವರ ನಿಜವಾದ ಪ್ರತಿಭೆ, ಎಲೆಮರೆಯ ಕಾಯಿಗಳು ಜಗಜ್ಜಾಹೀರಾಗುವುದರ ಹಿಂದೆ ರೋಚಕ ಕಥಾನಕ ಇರುತ್ತದೆ. ಇದೀಗ ಅಂತಹ ಅಪರೂಪದ ವ್ಯಕ್ತಿಯೊಬ್ಬರ ಜೀವನಗಾಥೆಯನ್ನು ಬೆಂಗಳೂರು ಮೂಲದ ನಿಖಿತಾ ಅಯ್ಯರ್ ತಮ್ಮ ಲಿಂಕ್ಡ್ ಇನ್ ಪೋಸ್ಟ್ ಮೂಲಕ ಅನಾವರಣಗೊಳಿಸಿದ್ದಾರೆ.

Advertisement

ಆಟೋ ಪ್ರಯಾಣದ ಆ 45 ನಿಮಿಷಗಳ ಕುತೂಹಲ!

ನಿಖಿತಾ ಅಯ್ಯರ್ ಕೆಲಸದ ನಿಮಿತ್ತ ಹೊರಟಾಗ ಆಟೋ ರಿಕ್ಷಾವೊಂದನ್ನು ಹತ್ತಿದ್ದರು. ಈ ಸಂದರ್ಭದಲ್ಲಿ ಆಟೋ ಚಾಲಕ ನಿರರ್ಗಗಳವಾಗಿ, ದೋಷರಹಿತವಾಗಿ ಇಂಗ್ಲಿಷ್ ಮಾತನಾಡುತ್ತಿರುವುದನ್ನು ಕೇಳಿ ಆಶ್ಚರ್ಯ ಚಿಕಿತರಾಗಿದ್ದರು. ಅರೇ  ಇದರಲ್ಲೇನು ವಿಶೇಷವಿದೆ ಅಂತ ಹುಬ್ಬೇರಿಸಬೇಡಿ…

ಕುತೂಹಲ ತಡೆಯಲಾರದ ನಿಖಿತಾ ಅಯ್ಯರ್, ನೀವು ಇಷ್ಟೊಂದು ನಿರರ್ಗಳವಾಗಿ ಇಂಗ್ಲಿಷ್ ಹೇಗೆ ಕಲಿತಿರಿ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಯ ನಂತರವೇ ಆಟೋ ಚಾಲಕ ತನ್ನ ಜೀವನದ ಹಿಂದಿನ ಘಟನೆಯನ್ನು ವಿವರಿಸಿದ್ದು. ಹೀಗೆ ನಿಖಿತಾ ಮತ್ತು 74 ವರ್ಷದ ಆಟೋ ಚಾಲಕನ ನಡುವೆ ನಡೆದ 45 ನಿಮಿಷಗಳ ಮಾತುಕತೆಯ ಸಾರಾಂಶ ಇಲ್ಲಿದೆ…

ಸೋಮವಾರ (ಮಾರ್ಚ್ 28) ಬೆಳಗ್ಗೆ ನಾನು ಕೆಲಸಕ್ಕೆ ಹೋಗುತ್ತಿದ್ದಾಗ ರಸ್ತೆಯ ಮಧ್ಯದಲ್ಲಿ ನಿಂತಿದ್ದ ಉಬರ್ ಆಟೋ ಚಾಲಕ ನನ್ನ ಚಿಂತೆಯ ಮುಖಭಾವವನ್ನು ಗಮನಿಸಿ, ಮೇಡಂ ನೀವು ಎಲ್ಲಿಗೆ ಹೋಗಬೇಕೆಂದು ವಿಚಾರಿಸಿದ್ದರು.

Advertisement

ಆಗ ನಾನು ಕಚೇರಿಗೆ ಹೋಗಿ ತಲುಪಬೇಕಾಗಿದೆ. ಆದರೆ ಈಗಾಗಲೇ ತಡವಾಗಿದ್ದರಿಂದ ವೇಗವಾಗಿ ನಡೆದುಕೊಂಡು ಹೋಗುತ್ತಿದ್ದೇನೆ ಎಂದು ಚಾಲಕನಿಗೆ ತಿಳಿಸಿದೆ. ಆಗ ಡ್ರೈವರ್ ಇಂಗ್ಲಿಷ್ ನಲ್ಲಿ ಪ್ರತಿಕ್ರಿಯೆ ನೀಡಿದ್ದನ್ನು ಕಂಡು ಅಚ್ಚರಿಗೊಂಡೆ ಎಂದು ನಿಖಿತಾ ತಮ್ಮ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ದಯವಿಟ್ಟು ಬನ್ನಿ ಮೇಡಂ, ನಿಮಗೆ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಕರೆದೊಯ್ಯುತ್ತೇನೆ. ಬಾಡಿಗೆ ಕೂಡಾ ಅಷ್ಟೇ ಎಷ್ಟಾಗುತ್ತದೋ ಅಷ್ಟೇ ಕೊಡಿ ಎಂದು ಆಟೋ ಡ್ರೈವರ್ ಇಂಗ್ಲಿಷ್ ನಲ್ಲಿ ಪ್ರತ್ಯುತ್ತರ ನೀಡಿದ್ದರು. ಹೀಗೆ ರಿಕ್ಷಾ ಹತ್ತಿ ಕುಳಿತ ನಂತರ ನಾನು ಅವರಿಗೆ ಕೇಳಿದ ಮೊದಲನೇ ಪ್ರಶ್ನೆಯೇ ಅವರ ನಿರರ್ಗಳ ಇಂಗ್ಲಿಷ್ ಭಾಷೆಯ ಕುರಿತಾಗಿತ್ತು.

ಅಂದು ಇಂಗ್ಲಿಷ್ ಲೆಕ್ಚರರ್ ಇಂದು ಆಟೋ ಡ್ರೈವರ್:

ಪಟ್ಟಾಬಿ ರಾಮನ್ ಎಂಬ 74ರ ಹರೆಯದ ಆಟೋ ಡ್ರೈವರ್ ಮುಂಬೈನ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಇವರು ಎಂ,ಎ ಮತ್ತು ಎಂಎಡ್ ಪದವೀಧರ. ಕಾಲೇಜು ಉಪನ್ಯಾಸಕ ವೃತ್ತಿಯಿಂದ ನಿವೃತ್ತನಾದ ನಂತರ ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಂದು ಕರ್ನಾಟಕದಲ್ಲಿ ನನಗೆ ಯಾವುದೇ ಉದ್ಯೋಗ ಸಿಗದ ಕಾರಣ ನಾನು ಮುಂಬೈಗೆ ತೆರಳಿದ್ದೆ, ಅಲ್ಲಿ ನಾನು ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದೆ.

ಮುಂಬೈಯ ಪ್ರತಿಷ್ಠಿತ ಕಾಲೇಜಿನಲ್ಲಿ 20 ವರ್ಷಗಳ ಕಾಲ ಲೆಕ್ಚರರ್ ಆಗಿ ಕಾರ್ಯನಿರ್ವಹಿಸಿದ್ದು, 60ನೇ ವಯಸ್ಸಿಗೆ ನಿವೃತ್ತಿ ಹೊಂದಿದ್ದೆ. ನಂತರ ಮತ್ತೆ ನಾನು ಬೆಂಗಳೂರಿಗೆ ವಾಪಸ್ ಆಗಿದ್ದೆ. ನಿಮಗೆ ಗೊತ್ತೇ ಇದೆ ಶಿಕ್ಷಕರಿಗೆ ಹೆಚ್ಚು ಸಂಬಳ ಇಲ್ಲ. ನೀವು ಹೆಚ್ಚೆಂದರೆ 10ರಿಂದ 15 ಸಾವಿರ ರೂಪಾಯಿ (ಅಂದು) ಸಂಬಳ ಪಡೆಯಬಹುದು. ನಾನು ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದೆ. ನನಗೆ ನಿವೃತ್ತಿ ವೇತನದ ಸೌಲಭ್ಯವೂ ಇಲ್ಲ. ಹೀಗಾಗಿ ಆಟೋ ಚಾಲಕ ವೃತ್ತಿಯಿಂದ ನನಗೆ ದಿನಂಪ್ರತಿ ಕನಿಷ್ಠ ಪಕ್ಷ 700-1,500 ರೂಪಾಯಿವರೆಗೆ ದುಡಿಯುತ್ತೇನೆ. ಇದು ನನಗೂ, ನನ್ನ ಗರ್ಲ್ ಫ್ರೆಂಡ್ ಗೂ ಸಾಕಾಗುತ್ತದೆ ಎಂದು ಅಯ್ಯರ್ ಉತ್ತರ ನೀಡಿ ರಾಮನ್ ನಕ್ಕುಬಿಟ್ಟರು.

ಗರ್ಲ್ ಫ್ರೆಂಡ್ ಎಂದು ಹೇಳಿದಾಗ ರಿಕ್ಷಾದಲ್ಲಿದ್ದ ನಿಖಿತಾ ಸೇರಿದಂತೆ ಇತರ ಪ್ರಯಾಣಿಕರು ಕೂಡಾ ನಕ್ಕುಬಿಟ್ಟಿದ್ದರು. ಅದಕ್ಕೆ ರಾಮನ್ ವಿವರಣೆ ನೀಡುತ್ತಾ, ನಾನು ನನ್ನ ಹೆಂಡತಿಯನ್ನು ಗೆಳತಿ ಎಂದೇ ಕರೆಯುತ್ತೇನೆ. ಯಾಕೆಂದರೆ ನೀವು ಯಾವಾಗಲೂ ಹೆಂಡತಿಯನ್ನು ಗೆಳತಿ ರೀತಿಯಲ್ಲೇ ನೋಡಬೇಕು. ಒಂದೇ ಕ್ಷಣದಲ್ಲಿ ಹೆಂಡತಿ ಎಂದು ಹೇಳಬಹುದು. ಹೆಂಡತಿಯಾದವಳು ಗಂಡನ ಸೇವೆ ಮಾಡುವ ಗುಲಾಮಳು ಎಂದೇ ಭಾವಿಸುತ್ತೀರಿ. ಆದರೆ ಆಕೆ ನನಗಿಂತ ಯಾವುದೇ ವಿಧದಲ್ಲೂ ಕೆಳದರ್ಜೆಯವಳಲ್ಲ. ನಿಜ ಹೇಳಬೇಕೆಂದರೆ ಕೆಲವೊಮ್ಮೆ ಆಕೆ ನನಗಿಂತ ಶ್ರೇಷ್ಠಳಾಗಿರುತ್ತಾಳೆ ಎಂಬುದು ರಾಮನ್ ವಿವರಣೆಯಾಗಿತ್ತು.

ಹೀಗೆ 45 ನಿಮಿಷಗಳ ಮಾತುಕತೆಯಿಂದ ನಿಗೂಢ ಹೀರೋವಿನಿಂದಾಗಿ ಬಹಳಷ್ಟು ಪಾಠವನ್ನು ಕಲಿತೆ ಎಂದು ಪಟ್ಟಾಬಿ ರಾಮನ್ ಅವರ ವ್ಯಕ್ತಿತ್ವವನ್ನು ಹೊಗಳಿ ನಿಖಿತಾ ಅಯ್ಯರ್ ಬರೆದ ಲಿಂಕ್ಡ್ ಇನ್ ಸ್ಟೋರಿಗೆ ನೂರಾರು ಮಂದಿ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next