ಹೊಸದಿಲ್ಲಿ : ತನ್ನ ಮದುವೆ ಬಳಿಕ ಭಾರತದಲ್ಲಿ ವಾಸವಾಗಿರುವ ಪಾಕ್ ಮೂಲದ ಮಹಿಳೆ ಕಮರ್ ಮೊಹಿಸಿನ್ ಶೇಖ್ ಅವರು ಕಳೆದ 23 ವರ್ಷಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖೀ ಕಟ್ಟುತ್ತಲೇ ಬಂದಿದ್ದಾರೆ.
”ನಾನು ಮದುವೆಯಾಗಿ ಭಾರತಕ್ಕೆ ಬಂದಂದಿನಿಂದಲೂ ವರ್ಷಂಪ್ರತಿ ಸಹೋದರ ಮೋದಿಗೆ ತಾನು ರಾಖೀ ಕಟ್ಟುತ್ತಲೇ ಬಂದಿದ್ದೇನೆ” ಎಂದಾಕೆ ಸಂಭ್ರಮದಿಂದ ಹೇಳುತ್ತಾರೆ.
“ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಡುವೇ ಇರಲಿಕ್ಕಿಲ್ಲವೆಂದು ನಾನು ಭಾವಿಸಿದ್ದೆ. ಆದರೆ ಎರಡು ದಿನಗಳ ಹಿಂದೆ ಮೋದಿ ಅವರೇ ನನಗೆ ಫೋನ್ ಮಾಡಿ ರಾಖೀ ಬಂಧನವನ್ನು ನೆನಪಿಸಿಕೊಟ್ಟರು. ಇದೀಗ ನಾನು ಸಹೋದರ ಮೋದಿ ಅವರಿಗೆ ರಾಖೀ ಕಟ್ಟುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಶೇಖ್ ಹೇಳಿರುವುದನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಮದುವೆಯಾಗಿ ಭಾರತಕ್ಕೆ ಬಂದ ಮೊದಲಲ್ಲಿ ನಾನು ನರೇಂದ್ರ ಭಾಯಿಗೆ ರಾಖೀ ಕಟ್ಟಿದಾಗ ಅತ ಕಾರ್ಯಕರ್ತನಾಗಿದ್ದರು. ತನ್ನ ಕಠಿನ ಪರಿಶ್ರಮ, ಶಿಸ್ತು ಮತ್ತು ಶ್ರದ್ಧೆಯ ಫಲವಾಗಿ ಅವರಿಂದು ದೇಶದ ಪ್ರಧಾನಿಯಾಗಿದ್ದಾರೆ’ ಎಂದು ಶೇಖ್ ಹೆಮ್ಮೆ ಮತ್ತು ಸಂಭ್ರಮದಿಂದ ಹೇಳಿದರು.
ಈ ನಡುವೆ ಪ್ರಧಾನಿ ಮೋದಿ ಅವರಿಂದು ಟ್ವಿಟರ್ ಮೂಲಕ ದೇಶದ ಜನತೆಗೆ ರಕ್ಷಾ ಬಂಧನದ ಶುಭಕಾಮನೆಗಳನ್ನು ಹೇಳಿದ್ದಾರೆ.