ತಿರುವನಂತರಪುರಂ: ನಿಯತ್ತಿಗೆ ಹೆಸರಾಗಿರುವ ಶ್ವಾನಗಳನ್ನು ಕೆಲ ಮನೆಗಳಲ್ಲಿ ಪ್ರೀತಿಯಿಂದ ಸಾಕಿ, ಸಲಹುತ್ತಾರೆ. ಕೆಲ ಮನೆಯಲ್ಲಿ ಅವುಗಳನ್ನು ಮನೆಯ ಸದಸ್ಯರಂತೆಯೇ ಸಾಕುತ್ತಾರೆ.
ಕೇರಳದ ಮತ್ತೂರಿನಲ್ಲಿನ ʼಮೈಕೆಲ್ʼ ಎಂಬ ಒಂದು ವರ್ಷದ ಶ್ವಾನ ಮನೆಯ ಸದಸ್ಯನಂತೆಯೇ ದಿನ ಕಳೆಯುತ್ತಿದೆ. ದಿನ ನಿತ್ಯ ʼಮೈಕೆಲ್ʼ ಈ ಮನೆಗೆ ಮಗನಂತೆಯೇ ಕೆಲಸದಲ್ಲಿ ತೊಡಗಿಕೊಳ್ಳುತ್ತದೆ.
ಜೇಮ್ಸ್ ಎನ್ನುವವರ ಮನೆಯಲ್ಲಿ ಅಮ್ಮು ಮತ್ತು ರಾಣಿ ಎಂಬ ಎರಡು ಹಸುಗಳಿವೆ. ಈ ಹಸುಗಳ ಜತೆಗೆ ಓಡಾಡುತ್ತಲೇ ಬೆಳೆದ ʼಮೈಕೆಲ್ʼಗೆ ಈಗ ಒಂದು ವರ್ಷ. ದನದ ಕೊಟ್ಟಿಗೆಯಿಂದ ನಿತ್ಯ ಬೆಳಗ್ಗೆ ಮನೆ ಒಡೆಯ ಹಸುಗಳನ್ನು ಬಿಟ್ಟರೆ ಸಾಕು, ಹೊಲಕ್ಕೆ ಹೋಗಿ ಹುಲ್ಲು ತಿನ್ನುವಾಗ, ವಾಪಾಸ್ ಮನೆಗೆ ಬರುವಾಗಲೂ ʼಮೈಕೆಲ್ʼ ಈ ಹಸುಗಳ ಜತೆಯೇ ಇರುತ್ತದೆ.
ಬೆಳಗ್ಗೆ ಗದ್ದೆಗಳಿಗೆ ಕರೆದುಕೊಂಡು ಹೋಗುವಾಗ ಹಸುಗಳ ಹಗ್ಗವನ್ನು ಕಚ್ಚಿಕೊಂಡು ʼಮೈಕೆಲ್ʼ ಮುಂದೆ ಹೋಗುತ್ತಾನೆ. ಅದರ ಹಿಂದೆ ಹಸುಗಳು ನಿಧಾನಕ್ಕೆ ಬರುತ್ತದೆ. ಸಂಜೆ ಅದೇ ರೀತಿ ಹಸುಗಳನ್ನು ಅವುಗಳ ಕೊಟ್ಟಿಗೆಗೆ ತಂದು ನಿಲ್ಲಿಸುತ್ತದೆ.
ಹಸುಗಳನ್ನು ಈ ರೀತಿ ಹೊಲಕ್ಕೆ ಕರೆದುಕೊಂಡು ಹೋಗುವುದರಲ್ಲಿ ಮೈಕೆಲ್ ಇದುವರೆಗೆ ಒಂದು ದಿನವೂ ತಪ್ಪಿಲ್ಲ. ಹಸುಗಳನ್ನು ಕಟ್ಟಿ ಹಾಕಿದ್ದರೂ ಅವುಗಳ ಜತೆಯಲ್ಲೇ ಮೈಕೆಲ್ ಇರುತ್ತದೆ ಎಂದು ಜೇಮ್ಸ್ ಪತ್ನಿ ಸಾರಮ್ಮ ಹೇಳುತ್ತಾರೆ.
ಕಣ್ಣು ತೆರೆಯುವ ಮುನ್ನವೇ ಮೈಕೆಲ್ನ್ನು ಮನೆಗೆ ಕರೆ ತರಲಾಗಿತ್ತು. ಅದನ್ನು ಹಸುಗಳ ಕೊಟ್ಟಿಗೆಯ ಪಕ್ಕದಲ್ಲಿ ಸಾಕಲಾಗಿತ್ತು. ಆರಂಭದಲ್ಲಿ ಜೇಮ್ಸ್ ಅವರ ಮಗಳು ಜಯಾ ʼಮೈಕೆಲ್ʼನ್ನು ಹಸುಗಳ ಆರೈಕೆಯನ್ನು ನೋಡಿಕೊಳ್ಳಲು ತರಬೇತಿ ನೀಡುತ್ತಿದ್ದಳು. ಹಸುಗಳ ಜತೆ ಹೇಗೆ ಇರಬೇಕೆಂದು ಪುಟ್ಟ ಮೈಕೆಲ್ಗೆ ಜಯಾ ಹೇಳಿ ಕೊಡುತ್ತಿದ್ದಳು. ಇದರ ಪರಿಣಾಮʼ ರಾಣಿʼ ಎನ್ನುವ ಕರು ಜತೆ ʼಮೈಕೆಲ್ʼ ಆತ್ಮೀಯ ಬಂಧವನ್ನು ಹೊಂದಿದೆ ಎಂದು ಮನೆಮಂದಿ ಹೇಳುತ್ತಾರೆ.
ʼಮೈಕೆಲ್ʼನನ್ನು ಮನೆಯವರು ಮನೆ ಮಗನಂತೆ ಸಾಕುತ್ತಿದ್ದಾರೆ.