ನವದೆಹಲಿ: ವೀರ್ಯಾಣು ಮತ್ತು ಅಂಡಾಣುವನ್ನು ಕಸಿ ಮಾಡಿ, ಸಂತಾನವನ್ನು ಪ್ರಯೋಗಾಲಯದಲ್ಲಿ ಬೆಳೆಸುವ ಕ್ಲೋನಿಂಗ್ ತಂತ್ರಜ್ಞಾನ ಈಗ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಆ ತಂತ್ರಜ್ಞಾನದ ಫಲಶ್ರುತಿಯೆಂಬಂತೆ ಆರ್ಕ್ಟಿಕ್ ತೋಳವೊಂದನ್ನು ಚೀನಾದ ಪ್ರಯೋಗಾಲಯದಲ್ಲಿ ಹುಟ್ಟಿಸಿ, ಬೆಳೆಸಲಾಗಿದೆ. ಅದರ ವಿಡಿಯೋ ಕೂಡ ಪ್ರಕಟವಾಗಿದೆ. ಹೀಗೆ ಹುಟ್ಟಿ ಬೆಳೆದ ವಿಶ್ವದ ಮೊದಲ ತೋಳ ಇದು ಎಂಬ ದಾಖಲೆಯೂ ನಿರ್ಮಾಣವಾಗಿದೆ.
ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ಕ್ಷುಝೌನಲ್ಲಿರುವ ಸಿನೊಜೆನ್ ಬಯೋಟೆಕ್ನಾಲಜಿ ಕಂಪನಿ ಇಂಥ ಸಾಧನೆ ಮಾಡಿದೆ. ಆರ್ಕ್ಟಿಕ್ ತೋಳದ ತದ್ರೂಪಿಗೆ “ಮಾಯಾ’ ಎಂದು ಹೆಸರನ್ನೂ ಇಡಲಾಗಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಈ ತಂತ್ರಜ್ಞಾನದ ಮೂಲಕ ಉಳಿಸಬಹುದು ಎಂಬ ವಿಶ್ವಾಸ ಈಗ ಹುಟ್ಟಿಕೊಂಡಿದೆ.
ಹುಟ್ಟಿಸಿದ್ದು ಹೇಗೆ? ಕಾರಣವೇನು?:
ಆರ್ಕ್ಟಿಕ್ ತೋಳಗಳ ಸಂತತಿ ಮರೆಯಾಗುವ ಹಂತಕ್ಕೆ ತಲುಪಿದೆ. ಅದನ್ನು ಜೀವಂತವಾಗುಳಿಸಲು ಚೀನಾ ವಿಜ್ಞಾನಿಗಳು ಈ ಕಷ್ಟಕರವಾದ ಸವಾಲು ತೆಗೆದುಕೊಂಡರು. ಈ ತೋಳವನ್ನು ಹುಟ್ಟಿಸಲು ಬೇಕಾದ ಜೀವಕೋಶವನ್ನು ಕೆನಡಾದಲ್ಲಿನ ಹೆಣ್ಣು ಆರ್ಕ್ಟಿಕ್ ತೋಳವೊಂದರಿಂದ ತೆಗೆದುಕೊಳ್ಳಲಾಗಿದೆ. ಇದಕ್ಕೆ ಬೇಕಾದ ಅಂಡಾಣುವನ್ನು ಒಂದು ಹೆಣ್ಣು ನಾಯಿಯಿಂದ ಪಡೆಯಲಾಗಿದೆ. ಬೀಗಲ್ ತಳಿಯ ನಾಯಿಯ ಗರ್ಭದಲ್ಲಿಟ್ಟು ತೋಳವನ್ನು ಬೆಳೆಸಲಾಗಿದೆ. ಒಟ್ಟಾರೆ 2 ವರ್ಷಗಳ ತೀವ್ರ ಹೆಣಗಾಟದ ನಂತರ ವಿಜ್ಞಾನಿಗಳ ಸಾಹಸಕ್ಕೆ ಯಶಸ್ಸು ಸಿಕ್ಕಿದೆ.
ನಾಯಿಗಳು ಮೂಲತಃ ತೋಳಗಳ ಜಾತಿಗೆ ಸೇರಿವೆ. ಒಂದು ಕಾಲದಲ್ಲಿ ತೋಳಗಳಾಗಿದ್ದ ಪ್ರಾಣಿಗಳೇ ಈಗ ನಾಯಿಗಳಾಗಿ ಬದಲಾಗಿವೆ ಎನ್ನುವುದು ಸ್ಪಷ್ಟ. ಹೀಗಾಗಿ ಕ್ಲೋನಿಂಗ್ ತೋಳವನ್ನು ಹುಟ್ಟಿಸಲು ಹೆಣ್ಣು ನಾಯಿಯನ್ನು ಬಳಸಲಾಗಿದೆ.