ಮಹಾನಗರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಪರೀತ ಮಳೆಯಿಂದ ಹಾನಿಗೊಳಗಾದ ಕೆಲವು ಪ್ರದೇಶಗಳಿಗೆ ಸರಕಾರಿ ಮುಖ್ಯ ಸಚೇತಕ ಐವನ್ ಡಿ’ಸೋಜಾ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಸಂತ್ರಸ್ಥರಿಗೆ ಜಿಲ್ಲಾಡಳಿತ ವತಿಯಿಂದ ಕೂಡಲೇ ನೆರವು ಒದಗಿಸಿ, ನಷ್ಟದ ಬಗ್ಗೆ ಅಂದಾಜು ವೆಚ್ಚ ತಯಾರಿಸಿ ಕೂಡಲೇ
ಪರಿಹಾರ ಒದಗಿಸುವುವಂತೆ ಮತ್ತು ಮೂಡಬಿದಿರೆ ತಾಲೂಕು ಕಚೇರಿಗೆ ಭೇಟಿ ನೀಡಿ ಚರ್ಚಿಸಿ ಜೀವ ಹಾನಿಯಾದ ನೆಲ್ಲಿಕಾರಿನ ನಿವಾಸಿ ಸಾವಿತ್ರಿ ರಾಥೋಡ್ ಅವರಿಗೆ ಕೂಡಲೇ ರೂ. 4 ಲಕ್ಷ ಪರಿಹಾರ ಧನ ಒದಗಿಸುವಂತೆ ಹಾಗೂ ಮನೆಗಳಿಗೆ ಹಾನಿ ಉಂಟಾದ ಪ್ರದೇಶಕ್ಕೆ ತೆರಳಿ ಅಲ್ಲಿನ ಸಂತ್ರಸ್ತರನ್ನು ಸಂತೈಸಿ, ಪರಿಹಾರ ಧನವನ್ನು ಒದಗಿಸಿಕೊಡಬೇಕೆಂದು ಜಿಲ್ಲಾಡಳಿತ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಡಳಿತ ಹಾಗೂ ತಹಶೀಲ್ದಾರರು ಪ್ರಕೃತಿ ವಿಕೋಪಗಳಿಂದ ಉಂಟಾಗಬಹುದಾದ ಯಾವುದೇ ಆಕಸ್ಮಿಕ ಘಟನೆಗಳಿಗೆ ಸಜ್ಜಾಗಿದ್ದು, 24 ಗಂಟೆಗಳ ಕಾಲವೂ ಜನರ ಕರೆಗಳಿಗೆ ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಸಾವಿತ್ರಿ ರಾಥೋಡ್ ಅವರ ಮನೆಯವರಿಗೆ ರೂ. 4 ಲಕ್ಷ ಪರಿಹಾರ ಧನವನ್ನು ಕೂಡಲೇ ಒದಗಿಸುವುದಾಗಿ ಮೂಡಬಿದಿರೆ ತಹಶೀಲ್ದಾರರು ತಿಳಿಸಿದ್ದಾರೆ. ಹಾಗೇಯೇ ವಿಪರೀತ ಮಳೆಯಿಂದ ಉಂಟಾದ ಮನೆ ಹಾಗೂ ಬೆಳೆ ನಾಶಗಳ ಅಂದಾಜು ವರದಿ ತಯಾರಿಸಿ ಪರಿಹಾರಧನವನ್ನು ಕೂಡಲೇ ಒದಗಿಸಿಕೊಡುವುದಾಗಿ ತಹಶೀಲ್ದಾರರು ತಿಳಿಸಿದ್ದಾರೆ.
ನೆಲ್ಲಿಕಾರು ಗ್ರಾ.ಪಂ. ಸದಸ್ಯ ಹರೀಶ್ ಆಚಾರ್ಯ, ಮೂಡಬಿದಿರೆ ಅಕ್ರಮ-ಸಕ್ರಮ ಸಮಿತಿ ಸದಸ್ಯ ಸುಂದರ್ ಪಿ. ಪೂಜಾರಿ, ಮೂಡಬಿದಿರೆ ನಾಮನಿರ್ದೇಶಿತ ಕಾರ್ಪೊರೇಟರ್ ಆಲ್ವಿನ್ ಮಿನೇಜಸ್, ಪ್ರಕಾಶ್ ಪಿ., ವಿಲ್ಫ್ರೆಡ್ ಮೆಂಡೋನ್ಸಾ, ಬಜಪೆ ಗ್ರಾಮ ಪಂಚಾಯತ್ ಸದಸ್ಯ ಸಿರಾಜ್ ಹುಸೇನ್, ಜಾಕೋಬ್, ಅರ್ಮನ್, ಮಾರ್ಟಿನ್, ಮೊಯಿದ್ದೀನ್ ಮೊದಲಾದವರು ಉಪಸ್ಥಿತರಿದ್ದರು.