ಜಗತ್ತಿನ ಬಹುತೇಕ ದೇಶಗಳಲ್ಲಿ ರಾಜಪ್ರಭುತ್ವ ಕೊನೆಗೊಂಡಿದ್ದರು ಕೂಡಾ, ಕೆಲವು ದೇಶಗಳಲ್ಲಿ ಆ ಸಂಪ್ರದಾಯ ಮುಂದುವರಿದಿದೆ. ಮಲೇಷ್ಯಾ ಮತ್ತು ದಕ್ಷಿಣ ಚೀನಾ ಸಮುದ್ರದಿಂದ ಸುತ್ತುವರಿದಿರುವ ಬೊರ್ನಿಯೊ ದ್ವೀಪದ ಪುಟ್ಟ ದೇಶ ಬ್ರೂನಿ(Brunei). ಈ ದೇಶದ ಜನಸಂಖ್ಯೆ 4.60 ಲಕ್ಷ. ಈ ಪುಟ್ಟ ದೇಶದ ಆಗರ್ಭ ಶ್ರೀಮಂತ ದೊರೆಯ ಹೆಸರು ಹಸ್ಸಾನಲ್ ಬೊಲ್ಕಿಯಾ (77ವರ್ಷ). ಈ ದೊರೆಯ ಪೂರ್ಣ ಹೆಸರು ಹಸ್ಸಾನಲ್ ಬೊಲ್ಕಿಯಾ ಇಬ್ನಿ ಓಮರ್ ಅಲಿ ಸೈಫುದ್ದೀನ್ III.
ಬ್ರೂನಿ ದೇಶದ 29ನೇ ದೊರೆ(ಸುಲ್ತಾನ್). ಈ ದೇಶದ ಪ್ರಧಾನಿಯೂ ಹೌದು. 1984ರಲ್ಲಿ ಬ್ರಿಟಿಷ್ ಆಡಳಿತದಿಂದ ಸ್ವತಂತ್ರಗೊಂಡ ನಂತರವೂ ಹಸ್ಸಾನಲ್ ದೊರೆಯಾಗಿದ್ದು, ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ II ನಂತರ ಜಗತ್ತಿನಲ್ಲಿಯೇ ಅತೀ ದೀರ್ಘಾವಧಿ ಆಳ್ವಿಕೆ ನಡೆಸಿದ ಕೀರ್ತಿ ಇವರದ್ದಾಗಿದೆ.
ಬ್ರೂನಿ ಎಂಬ ಪುಟ್ಟ ದೇಶದ ಅತೀ ಪ್ರಭಾವಿ ಸುಲ್ತಾನ್ ಆಗಿರುವ ಹಸ್ಸಾನಲ್ ಆಗರ್ಭ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ, 2008ರಲ್ಲಿ ಹಸ್ಸಾನಲ್ ಬೊಲ್ಕಿಯಾ ಸಂಪತ್ತಿನ ಒಟ್ಟು ಮೌಲ್ಯ 20 ಬಿಲಿಯನ್ ಡಾಲರ್ (ಅಂದಾಜು 1.4 ಲಕ್ಷ ಕೋಟಿ). ದಿ ಟೈಮ್ಸ್ ಯುಕೆ ವರದಿಯಂತೆ ಈಗಲೂ ಬೊಲ್ಕಿಯಾ ತಮ್ಮ ಒಂದು ಬಾರಿಯ ಹೇರ್ ಕಟ್ ಗೆ ವ್ಯಯಿಸುವ ಹಣ ಬರೋಬ್ಬರಿ 15 ಲಕ್ಷ ರೂಪಾಯಿಯಂತೆ!
1967ರ ಅಕ್ಟೋಬರ್ 4ರಂದು ಬೊಲ್ಕಿಯಾ ತಂದೆ ದೊರೆಯ ಸ್ಥಾನವನ್ನು ತ್ಯಜಿಸಿದ್ದು, 1968ರ ಆಗಸ್ಟ್ 1ರಂದು ಯುವರಾಜ ಹಸ್ಸನಾಲ್ ಬೊಲ್ಕಿಯಾ ಅವರನ್ನು ಬ್ರೂನಿಯ ದೊರೆಯನ್ನಾಗಿ ನೇಮಕ ಮಾಡಲಾಗಿತ್ತು.
ಚಿನ್ನ ಲೇಪಿತ ಖಾಸಗಿ ವಿಮಾನ, 7,000 ಐಶಾರಾಮಿ ಕಾರುಗಳ ಒಡೆಯ!
ದಿ ಡೈಲಿ ಮೇಲ್ ವರದಿಯಂತೆ, ಸುಲ್ತಾನ್ ಬೊಲ್ಕಿಯಾ 747 ಬೋಯಿಂಗ್ ವಿಮಾನ ಖರೀದಿಸಿದ್ದು (2,800 ಕೋಟಿ ರೂಪಾಯಿ), ಅದಕ್ಕೆ ಚಿನ್ನದ ವಾಶ್ ಬೇಸಿನ್, ಚಿನ್ನ ಲೇಪಿಸಲು 120 ಮಿಲಿಯನ್ ಡಾಲರ್ ನಷ್ಟು ಹೆಚ್ಚುವರಿಯಾಗಿ ಹಣ ವ್ಯಯಿಸಲಾಗಿತ್ತು.
ಹಸ್ಸಾನಲ್ ಬೊಲ್ಕಿಯಾ 7,000 ಐಶಾರಾಮಿ ಕಾರುಗಳನ್ನು ಹೊಂದಿದ್ದು, ಇದರ ಅಂದಾಜು ಮೌಲ್ಯ 341 ಬಿಲಿಯನ್. ಇದರಲ್ಲಿ 600 ರಾಲ್ಸ್ ರಾಯ್ಸ್, 300 ಫೆರಾರಿ, 360 Bentleys, 185 ಬಿಎಂಡಬ್ಲ್ಯು, 175 ಜಾಗ್ವಾರ್, 20 ಲ್ಯಾಂಬೋರ್ಗಿನಿಸ್, 160 Porsches, 75 Aston ಮಾರ್ಟಿನ್ಸ್, 4 ಬುಗಾಟಿಸ್ ಹಾಗೂ ನೂರಾರು ಬೈಕ್ ಗಳು ಸೇರಿವೆ.
ಅತೀ ದೊಡ್ಡ ಅರಮನೆ:
ಬೊಲ್ಕಿಯಾ ಜಗತ್ತಿನ ಅತೀ ದೊಡ್ಡ ಅರಮನೆಯಲ್ಲಿ ವಾಸವಾಗಿದ್ದು, ಇದು 2,15,278 ಚದರ ಅಡಿ ವಿಸ್ತಾರ ಹೊಂದಿದ್ದು, ಅಂದಾಜು ಮೊತ್ತ 1.4 ಬಿಲಿಯನ್ ಡಾಲರ್. ರಂಜಾನ್ ಹಬ್ಬದ ಸಂದರ್ಭದಲ್ಲಿ ಮಾತ್ರ ಮೂರು ದಿನಗಳ ಕಾಲ ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ಅವಕಾಶ ಇದ್ದು, ಇನ್ನುಳಿದ ದಿನಗಳಲ್ಲಿ ಪ್ರವೇಶ ನಿರ್ಬಂಧ.
ಬ್ರಿಟಿಷ್ ಆಡಳಿತದಿಂದ ಸ್ವತಂತ್ರಗೊಂಡ (1984) ಸ್ಮರಣಾರ್ಥ ನಿರ್ಮಿಸಲಾದ Istana ನೂರುಲ್ ಇಮಾಮ್ ಅರಮನೆ. ಜಗತ್ತಿನ ಅತೀ ದೊಡ್ಡ ಅರಮನೆ ಎಂದು ಗಿನ್ನಿಸ್ ದಾಖಲೆಗೆ ಸೇರಿದೆ. ಅರಮನೆಯ ಎತ್ತರದ ಗೊಮ್ಮಟ 22 ಕ್ಯಾರೆಟ್ ಚಿನ್ನದ್ದಾಗಿದ್ದು, ಬೊಲ್ಕಿಯಾ ಅರಮನೆಯ ಮೌಲ್ಯ 2,550 ಕೋಟಿಗಿಂತಲೂ ಅಧಿಕ. ಈ ಅರಮನೆಯಲ್ಲಿ 1,700ಕ್ಕೂ ಅಧಿಕ ಕೋಣೆಗಳಿವೆ. 257 ಬಾತ್ ರೂಮ್ ಗಳು, ಐದು ಈಜುಕೊಳ, ಇದರ ಹೊರತಾಗಿಯೂ 110 ಗ್ಯಾರೇಜ್ ಗಳು, 200 ಕುದುರೆಗಳಿಗೆ ಹವಾನಿಯಂತ್ರಿತ ಕುದುರೆ ಲಾಯಗಳಿವೆ.
ಖಾಸಗಿ ಮೃಗಾಲಯ:
ಜಗತ್ತಿನ ಐಶಾರಾಮಿ ದೊರೆಯಾಗಿರುವ ಹಸ್ಸಾನಲ್ ಬೊಲ್ಕಿಯಾ ಖಾಸಗಿ ಮೃಗಾಲಯವನ್ನು ಹೊಂದಿದ್ದು, 30 ಬೆಂಗಾಲ್ ಹುಲಿಗಳಿವೆ. ಫಾಲ್ಕನ್ಸ್ ಹಕ್ಕಿಗಳು, ಫ್ಲೇಮಿಂಗೊ ಹಾಗೂ ವಿವಿಧ ಜಾತಿಯ ಪ್ರಾಣಿಗಳಿರುವುದಾಗಿ ವರದಿ ತಿಳಿಸಿದೆ.
ದೊರೆ ಬೊಲ್ಕಿಯಾ ಸಂಪತ್ತಿನ ಮೂಲ ಯಾವುದು?
ಆಗ್ನೇಯ ಏಷ್ಯಾದಲ್ಲಿ ಬ್ರೂನಿ ದೇಶ 5ನೇ ಅತೀ ದೊಡ್ಡ ತೈಲ ಉತ್ಪಾದನಾ ರಾಷ್ಟ್ರವಾಗಿದೆ. ಇಂಡೋನೇಷ್ಯಾ, ಮಲೇಷ್ಯಾ, ವಿಯೆಟ್ನಾಂ ಮತ್ತು ಥಾಯ್ಲೆಂಡ್ ನಂತರ ಬ್ರೂನಿ ತೈಲ ಮಾರಾಟದ ಅತೀ ದೊಡ್ಡ ದೇಶವಾಗಿದೆ. ಹಸ್ಸನಾಲ್ ಬೊಲ್ಕಿಯಾ ಕಚ್ಛಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ರಫ್ತು ಮಾಡುವ ಮೂಲಕ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ದೊರೆ ಬೊಲ್ಕಿಯಾ ಅವರು 1965ರ ಜುಲೈ 28ರಂದು ಯುವರಾಣಿ ಪೆಂಗಿರಾನ್ ಅನಾಕ್ ಸಲೇಹಾ ಅವರನ್ನು ಮೊದಲು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳು. 1982ರಲ್ಲಿ ಮಾರಿಯಮ್ ಅಬ್ದುಲ್ ಅಝೀಜ್ ಎಂಬಾಕೆಯನ್ನು ವಿವಾಹವಾಗಿದ್ದು, ದಂಪತಿಗೆ ನಾಲ್ವರು ಮಕ್ಕಳು. 2003ರಲ್ಲಿ ಬೊಲ್ಕಿಯಾ ಮತ್ತು ಮಾರಿಯಮ್ ವಿಚ್ಛೇದನ ಪಡೆದಿದ್ದು, 2005ರಲ್ಲಿ ಮಲೇಷ್ಯಾ ಮಾಜಿ ಪತ್ರಕರ್ತೆ ಅಝ್ರಿನಾಝ್ ಮಝರ್ ಎಂಬಾಕೆಯನ್ನು ಬೊಲ್ಕಿಯಾ ವಿವಾಹವಾಗಿದ್ದು, 2010ರಲ್ಲಿ ವಿಚ್ಛೇದನದಿಂದ ಮಝರ್ ದೂರವಾಗಿದ್ದಳು.
ಬ್ರೂನಿಯಲ್ಲಿ ಆಸ್ಪತ್ರೆಗಳು ಮತ್ತು ಶಾಲೆಗಳಲ್ಲಿ ವಿದ್ಯಾಭ್ಯಾಸ ಉಚಿತ. ತೆರಿಗೆ ವಾಸ್ತವಿಕವಾಗಿ ಅಸ್ತಿತ್ವದಲ್ಲಿ ಇಲ್ಲ. ಅಲ್ಲದೇ ಬಾಡಿಗೆ ಮನೆಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಆದರೂ ಬ್ರೂನಿ ದೇಶದ ಜನಸಂಖ್ಯೆಯ ಶೇ.20ರಷ್ಟು ಜನರು ಬಡತನ ರೇಖೆಯಡಿ ಜೀವನ ಸಾಗಿಸುತ್ತಿದ್ದಾರೆ. ಬ್ರೂನಿಯಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದು, ಶೇ.13ರಷ್ಟು ಬೌದ್ಧರು ಹಾಗೂ ಶೇ.10ರಷ್ಟು ಕ್ರಿಶ್ಚಿಯನ್ ಸಮುದಾಯದ ಜನರಿದ್ದಾರೆ.