ನವದೆಹಲಿ: ಕರೆಂಟ್ ಇಲ್ಲದೆ ಜೀವನ ನಡೆಸಲು ಸಾಧ್ಯವೇ? ಆದರೆ, ಪರಿಸರಪ್ರೇಮಿ ಸೌಮ್ಯಾ ಪ್ರಸಾದ್‌ಗೆ ಈ ಮಾದರಿಯ ಜೀವನ 3 ವರ್ಷಗಳಿಂದ ಸಾಧ್ಯವಾಗಿದೆ. ಜೆಎನ್‌ಯು ಮಾಜಿ ಪ್ರೊಫೆಸರ್ ಆಗಿರುವ ಇವರಿಗೆ ಕಳೆದ 3 ವರ್ಷಗಳಲ್ಲಿ ಕರೆಂಟ್ ಬಿಲ್, ನೀರಿನ ಬಿಲ್ ಕಟ್ಟುವ ಸಂದರ್ಭ ಒದಗಿಬಂದಿಲ್ಲ.
ಡೆಹ್ರಾಡೂನ್‌ನಲ್ಲಿ ವಾಸವಿರುವ ಸೌಮ್ಯಾ ಸನ್ಯಾಸಿಯಾಗಿಯೋ ಅಥವಾ ಪಂಜರದಲ್ಲೋ ಜೀವಿಸುತ್ತಿಲ್ಲ. ಎಲ್ಲರಂತೆ ಸಾಮಾಜಿಕ ಬದುಕು ಕಟ್ಟಿಕೊಂಡು, ಚೆಂದದ ಕಾರು ಓಡಿಸಿಕೊಂಡು, ಆಧುನಿಕ ಸೌಲಭ್ಯಗಳಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.
ಹೇಗೆ ಇದು ಸಾಧ್ಯ?: ಸೌಮ್ಯಾ ತಮ್ಮ ಪತಿಯೊಂದಿಗೆ 2015ರಿಂದ ಡೆಹ್ರಾಡೂನ್‌ನ ಸಾಮಾನ್ಯ ಹಳ್ಳಿಯಲ್ಲಿ ವಾಸವಿದ್ದಾರೆ. ಮನೆಗೆ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಮಳೆ ನೀರು ಕೊಯ್ಲು ಮೂಲಕ ನೀರಿನ ಸೌಲಭ್ಯ ಪಡೆದಿದ್ದಾರೆ. ಈ ಕಾರಣಕ್ಕಾಗಿ ಇವರಿಗೆ 3 ವರ್ಷಗಳಿಂದ ಕರೆಂಟ್- ನೀರಿನ ಶುಲ್ಕ ಕಟ್ಟುವ ಪ್ರಮೇಯ ಒದಗಿಬಂದಿಲ್ಲ.
ಬಿದಿರಿನ ಮನೆ!: ಭಗ್ನಾವಶೇಷಗಳ ಬುನಾದಿ ಮೇಲೆ ಮನೆ ಕಟ್ಟಿದ್ದಾರೆ. ಬಿದಿರು- ಇನ್ನಿತರ ಮರಗಳಿಂದ ಗೋಡೆ- ಛಾವಣಿ ನಿರ್ಮಿಸಿದ್ದಾರೆ. “ಝೀರೋ ವೇಸ್ಟೇಜ್’ ಪರಿಕಲ್ಪನೆ, ಮನೆಯ ಮತ್ತೂಂದು ವಿಶೇಷ.
ಪರಿಸರಸ್ನೇಹಿ ಕಾರು!: 2015ರಿಂದ ಇವರು ಓಡಾಡುತ್ತಿರುವ ಕಾರು ಕೂಡ ಇಂಗಾಲ ಡೈ ಆಕ್ಸೆ„ಡ್ ಉಗುಳುತ್ತಿಲ್ಲ! ಕಾರಣ, ಇದು ಮಹೀಂದ್ರಾ ಇ-20 ಕಾರು! ವಿದ್ಯುತ್ ಬ್ಯಾಟರಿ ಆಧರಿಸಿ ಇದು ಓಡುತ್ತಿದೆ.