Advertisement

ರಾಜ್ಯದ ಹಿತ ಕಾಪಾಡಲು 15 ದಿನಕ್ಕೊಮ್ಮೆ ಸಭೆ: ಜೋಶಿ

11:02 PM Jun 01, 2019 | Team Udayavani |

ಬೆಂಗಳೂರು: ಕರ್ನಾಟಕದ ನಾಲ್ಕು ಸಚಿವರು ಪ್ರತಿ ಹದಿನೈದು ದಿನಕ್ಕೊಮ್ಮೆ ದೆಹಲಿಯಲ್ಲಿ ಸಭೆ ಸೇರಿ, ರಾಜ್ಯದ ಹಿತಾಸಕ್ತಿ ಕಾಪಾಡುವ ಕೆಲಸ ಮಾಡಲಿದ್ದೇವೆ ಎಂದು ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

Advertisement

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕದಿಂದ ಡಿ.ವಿ.ಸದಾನಂದ ಗೌಡ, ನಿರ್ಮಲಾ ಸೀತಾರಾಮನ್‌ ಹಾಗೂ ಸುರೇಶ್‌ ಅಂಗಡಿ ಸೇರಿ ನಾಲ್ವರು ಸಚಿವರಿದ್ದೇವೆ. ನಾವು ನಾಲ್ವರೂ ಪ್ರತಿ 15 ದಿನಕ್ಕೊಮ್ಮೆ ದೆಹಲಿಯಲ್ಲಿ ಸಭೆ ಸೇರಲಿದ್ದೇವೆ.

ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೇ ಚರ್ಚೆ ನಡೆಸಲಿದ್ದೇವೆ. ಕೇಂದ್ರದಿಂದ ಕರ್ನಾಟಕಕ್ಕೆ ಆಗಬೇಕಿರುವ ಕಾರ್ಯಗಳು, ಯೋಜನೆಯ ಅನುಷ್ಠಾನ ಮತ್ತು ಈ ಹಿಂದೆ ಆಗಿರುವ ಕಾರ್ಯಗಳ ಫಾಲೋಅಪ್‌ ಇತ್ಯಾದಿ ಮಾಡಲಿದ್ದೇವೆ ಎಂದು ಹೇಳಿದರು.

ಮಹದಾಯಿ ಬಗ್ಗೆ ನಾವು ಸ್ಪಷ್ಟವಿದ್ದೇವೆ. ಮಹದಾಯಿ ಕುರಿತಂತೆ ಗೋವಾ ಮತ್ತು ಕರ್ನಾಟಕ ಸರ್ಕಾರದಿಂದ ಸ್ಪಷ್ಟನೆ ಕೇಳಲಾಗಿದೆ. ಪ್ರಕರಣವು ಮಹದಾಯಿ ನ್ಯಾಯಾಧೀಕರಣದ ಮುಂದಿದೆ. ಹೀಗಾಗಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕಾನೂನು ತಜ್ಞರಿಂದ ಮಾಹಿತಿ ಪಡೆದು, ಸರ್ವಪಕ್ಷದ ಸಭೆ ಕರೆದರೆ ನಾವು ಅದರಲ್ಲಿ ಭಾಗವಹಿಸಲಿದ್ದೇವೆ.

ಕಾನೂನಿನ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಏನು ಮಾಡಬೇಕು ಎಂಬುದನ್ನು ಕಾನೂನು ತಜ್ಞರ ಮೂಲಕವೇ ರಾಜ್ಯ ಸರ್ಕಾರ ಹೇಳಿಸಲಿ ಎಂದರು.

Advertisement

ಮಹದಾಯಿ ಸಮಸ್ಯೆ ಆರಂಭವಾಗಿದ್ದು ಮೋದಿ ಪ್ರಧಾನಿಯಾದ ನಂತರವಲ್ಲ ಅಥವಾ ಜೋಶಿ ಸಚಿವನಾದ ನಂತರವೂ ಅಲ್ಲ. ಇದಕ್ಕೆ ರಾಜಕೀಯ ಪರಿಹಾರಕ್ಕಿಂತ ನ್ಯಾಯಾಲಯದಿಂದ ಸ್ಪಷ್ಟ ಆದೇಶ ಬರಬೇಕು. ಇದು ಭಾವನಾತ್ಮಕ ವಿಚಾರ ಎಂಬುದು ನಮಗೂ ತಿಳಿದಿದೆ ಎಂದು ಹೇಳಿದರು.

ಜುಲೈ 5ಕ್ಕೆ ಕೇಂದ್ರ ಬಜೆಟ್‌: ಜೂನ್‌ 17ರಿಂದ 17ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. 17 ಮತ್ತು 18ರಂದು ಸದಸ್ಯರಿಗೆ ಪ್ರಮಾಣ ವಚನ ಬೋಧನೆ, 19ಕ್ಕೆ ಸ್ಪೀಕರ್‌ ಚುನಾವಣೆ, 20ಕ್ಕೆ ರಾಷ್ಟ್ರಪತಿಗಳ ಭಾಷಣ, ಇದಾದ ಮೂರು ದಿನಗಳ ನಂತರ ವಂದನಾ ನಿರ್ಣಯದ ಮೇಲೆ ಚರ್ಚೆ. 23ರಿಂದ ಸುಗ್ರಿವಾಜ್ಞೆ ಮೂಲಕ ಆಗಬೇಕಿರುವ ಮಸೂದೆಗಳ ಮಂಡನೆ ನಡೆಯಲಿದೆ.

ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಯ ಮಂಡನೆಯೂ ಆಗಲಿದೆ. ಜುಲೈ 4ಕ್ಕೆ ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತದೆ. ಜು.5ಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದ್ದಾರೆ. ಜುಲೈ 26ರ ವರೆಗೂ ಅಧಿವೇಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಯಾವುದೇ ವಿಷಯದ ಚರ್ಚೆಗೆ ಸಿದ್ಧವಿದೆ. ಲೋಕಸಭೆಯಲ್ಲಿ ಚರ್ಚೆ ಆಗಬೇಕು. ಅಡ್ಡಿ ಇರಬಾರದು. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಒಂದಾಗಿ ಕೆಲಸ ಮಾಡಬೇಕು ಎಂಬುದನ್ನು ಎಲ್ಲ ವಿರೋಧ ಪಕ್ಷಕ್ಕೂ ಮನವಿ ಮಾಡಿದ್ದೇವೆ. ಇದಕ್ಕೆ ಸಂಬಂಧಿಸಿದ ಸಭೆ ಕರೆದು, ಸಹಕಾರ ಕೋರಲಿದ್ದೇವೆ.
-ಪ್ರಹ್ಲಾದ್‌ ಜೋಶಿ, ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next