Advertisement

ಪೂಜೆ ಸ್ತ್ರೀ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ: ಹರಿಭಟ್‌

05:01 PM Aug 26, 2018 | Team Udayavani |

ಮುಂಬಯಿ: ಕೂಡು ಕುಟುಂಬವನ್ನು ಒಗ್ಗೂಡಿಸುವ ವಿಶೇಷತೆ ಶ್ರಾವಣ ಮಾಸದಲ್ಲಿದೆ. ಬಂಧುತ್ವ ಬೆಳೆಸುವ, ಮಾತೃತ್ವ ಪ್ರೇಮ ಉಳಿಸುವ, ಆಧ್ಯಾತ್ಮಿಕ ಚಿಂತನೆಗಳ ಹಬ್ಬಗಳು ಬದುಕನ್ನು ನಿರೂಪಿಸುತ್ತದೆ. ತನು, ಮನ, ಮನೆಗಳನ್ನು ಶುದ್ಧಿಗೊಳಿಸುವುದಕ್ಕೆ ವರಮಹಾಲಕ್ಷ್ಮೀ  ಪೂಜೆಯ ಹಿನ್ನೆಲೆಯಾಗಿದೆ. ಮಹಿಳೆಯರು ಒಟ್ಟಾಗಿ, ಸಮಾನ ಮನಸ್ಕರಾಗಿ ಆಚರಿಸುವ ವರಮಹಾಲಕ್ಷ್ಮೀ  ಪೂಜೆ ಸ್ತ್ರೀ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪಲಿಮಾರು ಮಠದ ವಿದ್ವಾನ್‌ ಹರಿಭಟ್‌ ಅವರು ನುಡಿದರು.

Advertisement

ಆ. 24 ರಂದು ಸಂಜೆ ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ವರಮಹಾಲಕ್ಷ್ಮೀ  ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಆರಾಧನೆಗಳು ನಿರ್ಮಲ ಮನಸ್ಸಿನಿಂದ ಕೂಡಿರಬೇಕು. ನಮ್ಮ ಸಂಸ್ಕೃತಿ ಪದ್ಧತಿಗಳನ್ನು ಉಳಿಸಿಕೊಂಡು ಮುನ್ನಡೆಯಬೇಕು. ಅನ್ಯರ ಕಷ್ಟ, ಕಾರ್ಪಣ್ಯಗಳಲ್ಲಿ ಸಹಭಾಗಿತ್ವ ವಹಿಸಿ ಶ್ರೀ ವರಮಹಾಲಕ್ಷ್ಮೀ  ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರ ರಾಗೋಣ ಎಂದು ನುಡಿದು ಶುಭಹಾರೈಸಿದರು.

ಪವಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಟ್ರಸ್ಟಿ ಹಾಗೂ ಪ್ರಬಂಧಕ ವಿದ್ವಾನ್‌ ರಾಧಾಕೃಷ್ಣ ಭಟ್‌ ಇವರು, ಶ್ರಾವಣ ಮಾಸದಲ್ಲಿ ಆಚರಿಸಲ್ಪಡುವ ನಾಗಾರಾಧನೆ ದೇವತರಾಧನೆಗಳ ಬಗ್ಗೆ ವಿವರಿಸಿದರು. 
ಪಾಶ್ಚಿಮಾತ್ಯ ಜೀವನ ನಮ್ಮನ್ನು ಅವರಿಸಿದರೂ ನಮ್ಮ ಪೂರ್ವ ಪರಂಪರೆಯನ್ನು ಇನ್ನೂ ಉಳಿಸಿಕೊಂಡು ಬಂದಿದ್ದೇವೆ ಎಂದು  ವರಮಹಾಲಕ್ಷ್ಮೀ ಪೂಜೆಯ ಆಚರಣೆಯಲ್ಲಿ ಉಪಸ್ಥಿತರಿದ್ದ ಅಪಾರ ಸಂಖ್ಯೆಯ ಮಹಿಳೆಯರೇ ಸ್ಪಷ್ಟಡಿಸಿದ್ದಾರೆ. ತಮಗೆಲ್ಲ ಆರೋಗ್ಯ, ಆಯಸ್ಸು, ಸಂಪತ್ತುನ್ನು ಜಗನ್ಮಾತೆ ನೀಡಲೆಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಮಹಿಳೆಯರು ದೇವಿಯ ಮೂರ್ತಿಗೆ ಅರಸಿನ ಕುಂಕುಮ, ಹೂವು, ಅಕ್ಷತೆಯಿಂದ ಪೂಜೆ ಸಲ್ಲಿಸಿದ ಬಳಿಕ 9 ಸುತ್ತಿನ ದಾರವನ್ನು ಕಂಕಣದಂತೆ ಕೈಗೆಕಟ್ಟಿಕೊಂಡು ಆಶೀರ್ವಾದ ಪಡೆದರು. ಗಂಧಾಕ್ಷತೆ, ತುಳಸಿದಳ ದೇವಿಯ ಸಹಸ್ರ ನಾಮಾವಳಿಯ ಮೂಲಕ ವಿವಿಧ ಪೂಜಾ ಕೈಂಕರ್ಯಗಳಿಂದ ಪೂಜಿಸಿದರು. ಜಯರಾಮ ಭಟ್‌, ಯತಿರಾಜ ಉಪಾಧ್ಯಾಯ, ಗಣೇಶ್‌ ಭಟ್‌, ಟ್ರಸ್ಟಿ ಸಚ್ಚಿದಾನಂದ ರಾವ್‌ ಸಹಕರಿಸಿದರು. ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. 
ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next