Advertisement

ಪರೀಕ್ಷಾ ಭೀತಿ ನಿವಾರಣೆಗೆ ಧ್ಯಾನದ ಮದ್ದು

10:40 PM Feb 04, 2020 | mahesh |

ಇದು ಪರೀಕ್ಷೆ ಪರ್ವ ಕಾಲ. ಪರೀಕ್ಷೆ ಮುಗಿದರೂ ಓದಿ ಮುಗಿಯುವುದಿಲ್ಲ ಎಂಬುದು ಇಂದಿನ ವಿದ್ಯಾರ್ಥಿಗಳ ವಾದ. ಪರೀಕ್ಷೆ ಸಮೀಪವಾಗುತ್ತಿದ್ದಂತೆ ಮಕ್ಕಳಿಂದ ಹಿಡಿದು ಪೋಷಕರು, ಶಿಕ್ಷಕರಿಗೂ ಒಂದಲ್ಲ ಒಂದು ರೀತಿಯ ಆತಂಕವಿರುತ್ತದೆ. ಜತೆಗೆ ಈ ಸಮಯದಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ವಿದ್ಯಾರ್ಥಿಗಳು ಭಯಭೀತರಾಗುತ್ತಾರೆ. ಇಂತಹ ಸಮಸ್ಯೆಗಳಿಂದ ಒತ್ತಡ ಹೆಚ್ಚಾಗಿ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಮಾಡಲಾಗುವುದಿಲ್ಲ. ಹಾಗಾಗಿ ಈ ತೊಂದರೆಗಳಿಂದ ಮುಕ್ತಿ ಹೊಂದಲು ಧ್ಯಾನ ಉಪಯುಕ್ತವಾಗಲಿದ್ದು, ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಲು ಸಹಾಯ ಮಾಡುತ್ತದೆ.

Advertisement

ಒತ್ತಡದಿಂದ ಮುಕ್ತಿ
ಧ್ಯಾನದಿಂದ ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಣ್ಣಪುಟ್ಟ ವಿಚಾರಗಳಿಗೂ ಉದ್ವೇಗಕ್ಕೆ ಒಳಗಾಗುತ್ತಾರೆ. ಒಂದೆಡೆ ಎಲ್ಲ ಪಠ್ಯ ವಿಷಯಗಳನ್ನು ಓದಿ ಆಗಿಲ್ಲ ಎಂಬ ಭಯ ಇದ್ದರೆ ಮತ್ತೂಂದೆಡೆ ಯಾವ ಪ್ರಶ್ನೆಗಳು ಬರಬಹುದು ಎಂಬ ಆತಂಕವೂ ಇರುತ್ತದೆ. ಇದರಿಂದ ಮನಸ್ಸು ವಿಚಲಿತಗೊಂಡು ಓದಲಾಗುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ದಿನಂಪ್ರತಿ ಒಂದು ಗಂಟೆಯಾದರೂ ಧ್ಯಾನಕ್ಕೆ ಸಮಯ ನಿಗದಿ ಮಾಡಿದರೆ ಉತ್ತಮ.

ನಿದ್ರಾ ಸಮಸ್ಯೆಗೆ ಮದ್ದು
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕಾಡುವ ಮುಖ್ಯ ತೊಂದರೆ ಎಂದರೆ ನಿದ್ರಾ ಸಮಸ್ಯೆ. ಅದರಲ್ಲೂ ಪರೀಕ್ಷೆ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ನಿದ್ರೆ ಬರುವುದು, ಓದಲು ಕೂತರೆ ಆಕಳಿಕೆ ಶುರುವಾಗುತ್ತದೆ. ಇಂತಹ ಸಮಸ್ಯೆಗಳಿಗೆ ಧ್ಯಾನ ಮದ್ದಾಗಲಿದ್ದು, ಬೆಳಗ್ಗೆ ಎದ್ದ ಕೂಡಲೇ ನಿತ್ಯಕರ್ಮಗಳನ್ನು ಮುಗಿಸಿ ಒಂದು ಗಂಟೆ ಧ್ಯಾನ ಮಾಡಿದರೆ ದಿನಪೂರ್ತಿ ಆರಾಮವಾಗಿರ ಬಹುದಾಗಿದ್ದು, ನಿದ್ರೆಯ ರೋಗದಿಂದಲೂ ದೂರವಿರ ಬಹುದು.

ನೆನಪಿನ ಶಕ್ತಿ ಹೆಚ್ಚಾಗುತ್ತದೆ
ಪರೀಕ್ಷಾ ಸಮಯದಲ್ಲಿ ಧ್ಯಾನ ಮಾಡುವುದರಿಂದ ಮೆದುಳಿನ ಎಡಭಾಗ ಮತ್ತು ಬಲಭಾಗ ಚುರುಕುಗೊಳ್ಳುವುದು. ಶರೀರ, ಮನಸ್ಸು ಮತ್ತು ಬುದ್ಧಿಗಳ ಶುದ್ಧೀಕರಣ ಆಗುವುದರೊಂದಿಗೆ ಮೆದುಳಿನ ಎರಡು ಭಾಗಗಳು ಕ್ರಿಯಾಶೀಲ ಆಗುವುದರಿಂದ ಅಧಿಕ ಸ್ಮರಣಶಕ್ತಿ ಪಡೆದುಕೊಳ್ಳುವುದು. ಇದರಿಂದ ನಕಾರಾತ್ಮಕ ವಿಚಾರಗಳು ಕಡಿಮೆಯಾಗಿ ಮೆದುಳಿನ ಕಾರ್ಯಕ್ಷಮತೆ ಹೆಚ್ಚುವುದು. ಹಾಗೆ ಓದಿದ್ದನ್ನು ಹೆಚ್ಚಿನ ಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗುವುದು.

ಏಕಾಗ್ರತೆಯನ್ನು ವೃದ್ಧಿಸುತ್ತದೆ
ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಿ ಸ್ಥಿಮಿತದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಜತೆಗೆ ಭಾವನೆಗಳ ಮೇಲೆ ನಿಯಂತ್ರಣ ಮಾಡುವುದರೊಂದಿಗೆ ಚಿಂತೆ, ಭಯ, ಆತಂಕ ನಿವಾರಣೆ ಮಾಡುತ್ತದೆ. ಪರಿಣಾಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿ ಏಕಾಗ್ರತೆ ಅಧಿಕವಾಗುತ್ತದೆ.

Advertisement

- ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next