ಆರೋಗ್ಯ ಇದ್ದವನು ಎಲ್ಲವನ್ನೂ ಗೆಲ್ಲಬಲ್ಲ ಎಂಬ ಮಾತಿದೆ. ಆದರೆ ಇಂದು ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ. ಜನರನ್ನು ಅತೀ ಹೆಚ್ಚು ಕಾಡುವುದು ತಲೆನೋವು. ಅದರಲ್ಲಿಯೂ ಈಗಿನ ಕೆಲಸದ ಒತ್ತಡ, ಬಿಟ್ಟು ಬಿಡದೆ ಕಾಡುವ ಚಿಂತೆಗಳು.. ಹೀಗೆ ಸಮಸ್ಯೆಗಳು ಸಾವಿರವಾದಾಗ ತಲೆನೋವು ಅಂಟುರೋಗವಾಗಿ ಬಿಡುತ್ತದೆ.
ಇಂದಿನ ಜನತೆ ಔಷಧಗಳೊಂದಿಗೆ ತಮ್ಮ ಜೀವನ ಶೈಲಿಯನ್ನು ರೂಢಿಸಿ ಕೊಂಡಿದೆ. ಈ ಕೆಲವೊಂದು ಸಲಹೆಗಳನ್ನು ಜನರು ತಮ್ಮ ದೈನಂದಿನ ಜೀವನದಲ್ಲಿ ಪಾಲಿಸಿದಲ್ಲಿ ಮೈಗ್ರೇನ್ ಅನ್ನು ಕಡಿಮೆ ಮಾಡಿಕೊಳ್ಳಬಹುದು. ಯಾವುದೇ ಯೋಚನೆಯಿಲ್ಲದೆ ಮುಂಜಾವಿನ ಹೊತ್ತಲ್ಲಿ ನಿಮಗೆ ಆರಾಮದಾಯಕ ಮತ್ತು ಪ್ರಶಾಂತವಾದ ಜಾಗದಲ್ಲಿ ಕುಳಿತು ಎದೆ ಬಾಗದಂತೆ ಕೈಗಳನ್ನು ನೀಳವಾಗಿ ಮುಂದಕ್ಕೆ ಚಾಚಿ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ನಿಮ್ಮ ಗಮನ ಉಸಿರಾಟದ ಮೇಲಿರಲಿ. ನಿಧಾನವಾಗಿ ಉಸಿರು ತೆಗೆದುಕೊಂಡು ಅಷ್ಟೇ ನಿಧಾನವಾಗಿ ಹೊರಬಿಡಿ. ಹೀಗೆ ಸುಮಾರು 30 ನಿಮಿಷಗಳ ಕಾಲ ಇದನ್ನು ಪುನರಾವರ್ತಿಸಿ. ಬಳಿಕ 15 ನಿಮಿಷಗಳ ಕಾಲ ಗಾಳಿ, ಬೆಳಕು ಇರುವ ಪ್ರಶಾಂತ ಸ್ಥಳದಲ್ಲಿ ಮೌನವಾಗಿ ಓಡಾಡಿ. ಆಗಲೂ ನಿಮಗೆ ಉಸಿರಾಟದ ಬಗ್ಗೆ ಮಾತ್ರ ಗಮನವಿರಬೇಕು. ಸಾಧ್ಯವಾದಲ್ಲಿ ಸ್ಟ್ರೆಚಿಂಗ್ ಮತ್ತು ಯೋಗ ಮಾಡಿ. ಇದರಿಂದ ಮೈಗ್ರೇನ್ ಅನ್ನು ದೂರವಾಗಿಸಬಹುದು.
ಮೈಗ್ರೇನ್ ಎನ್ನುವುದು ಜಗತ್ತಿನ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಅದಲ್ಲದೆ ಇದು ವಿಶ್ವದ ಅತ್ಯಂತ ಸಾಮಾನ್ಯ ನರವೈಜ್ಞಾನಿಕ ಅಸ್ವಸ್ಥತೆಯಾಗಿದೆ. ಮೈಗ್ರೇನ್ ಪೀಡಿತರಲ್ಲಿ ಕೆಲವರಿಗೆ ತಲೆಯ ಒಂದು ಬದಿಯಲ್ಲಿ ತೀವ್ರವಾದ ನೋವು ಕಂಡು ಬಂದರೆ ಇನ್ನು ಕೆಲವರಿಗೆ ಎರಡೂ ಬದಿಯಲ್ಲಿ ತಲೆನೋವು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ಬೇರೆ ರೀತಿಯ ಲಕ್ಷಣ ಅಂದರೆ ದೃಷ್ಟಿ ಅಡಚಣೆಯಾಗುವುದು, ವಾಕರಿಕೆ, ಮುಖ ಮರಗಟ್ಟುವುದು ಅಥವಾ ಜುಮ್ಮೆನಿಸುವುದು, ಸ್ಪರ್ಶದ ಅರಿವಾಗದಿರುವುದು, ವಾಸನೆ ತಿಳಿಯದಿರುವುದು ಮತ್ತಿತರ ಲಕ್ಷಣಗಳೂ ಕಂಡುಬರಬಹುದು. ಸುಮಾರು ಶೇ.25ರಷ್ಟು ಮೈಗ್ರೇನ್ ಪೀಡಿತರು ಸೆಳವು ಎಂಬ ದೃಷ್ಟಿ ಅಡಚಣೆಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಇದು ಒಂದು ಗಂಟೆಗಿಂತ ಕಡಿಮೆ ಇರುತ್ತದೆ.
ಮೈಗ್ರೇನ್ ಬಗ್ಗೆ ತಿಳಿದುಕೊಳ್ಳಿ
-ಮೈಗ್ರೇನ್ ರಿಸರ್ಚ್ ಫೌಂಡೇಶನ್ ಪ್ರಕಾರ, ವಿಶ್ವದ 100 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
-ಮೈಗ್ರೇನ್ 18ರಿಂದ 44 ವರ್ಷ ವಯಸ್ಸಿನವರಲ್ಲಿ ಹೆಚ್ಚು ನೋವಿನಿಂದ ಕೂಡಿದ ತಲೆನೋವಾಗಿರುತ್ತದೆ.
-ಇದು ಶೇ.90ರಷ್ಟು ಜನರಲ್ಲಿ ಆನುವಂಶಿಕವಾಗಿ ಬರುತ್ತದೆ.
-ಪ್ರತೀದಿನ ಸುಮಾರು 40 ಲಕ್ಷ ಜನರು ಮೈಗ್ರೇನ್ ಸಮಸ್ಯೆ ಬಗ್ಗೆ ವೈದ್ಯರ ಬಳಿ ಬರುತ್ತಾರೆ.
-ಮೈಗ್ರೇನ್ ರೋಗಿಗಳಲ್ಲಿ ಶೇ.85ರಷ್ಟು ಮಹಿಳೆಯರೇ ಆಗಿದ್ದಾರೆ.
-ಪ್ರತೀ ನಾಲ್ವರು ಮಹಿಳೆಯರಲ್ಲಿ ಒಬ್ಬರು ಮೈಗ್ರೇನ್ ಅನುಭವಿಸುತ್ತಾರೆ.
-ಪ್ರೌಢಾವಸ್ಥೆಯಲ್ಲಿ ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಮಹಿಳೆಯರು ಮೈಗ್ರೇನ್‌ನಿಂದ ಬಳಲುತ್ತಾರೆ.
-ಅರ್ಧಕ್ಕಿಂತ ಹೆಚ್ಚು ರೋಗಿಗಳು 12 ವರ್ಷಕ್ಕಿಂತ ಮೊದಲು ಮೈಗ್ರೇನ್ ಅನ್ನು ಅನುಭವಿಸುತ್ತಾರೆ.
-ಯುಎಸ್‌ಐಯಲ್ಲಿ 4ರಲ್ಲಿ 1ಮನೆಯಲ್ಲಿ ಮೈಗ್ರೇನ್ ಹೊಂದಿರುವವರು ಸಿಗುತ್ತಾರೆ.
-4ಮಿಲಿಯನ್‌ಗಿಂತ ಹೆಚ್ಚು ಮಂದಿ ದೀರ್ಘಕಾಲದ ಮೈಗ್ರೇನ್ ಅನ್ನು ದಿನನಿತ್ಯ ಅನುಭವಿಸುತ್ತಾರೆ.
-ದೀರ್ಘಕಾಲದ ಮೈಗ್ರೇನ್ ಇರುವವರಿಗೆ ಖನ್ನತೆ, ಆತಂಕ ಮತ್ತು ನಿದ್ರಾಭಂಗ ಸಾಮಾನ್ಯವಾಗಿದೆ.
-ಶೇ. 90 ಜನರಿಗೆ ಮೈಗ್ರೇನ್ ಇರುವ ಸಂದರ್ಭ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
Related Articles
ಸಂಶೋಧನೆಗಳ ಪ್ರಕಾರ ದೇಶದಲ್ಲಿ ಶೇ.20ರಷ್ಟು ಜನರು ತಲೆನೋವಿನ ಶಮನಕ್ಕಾಗಿ ಒಪಿಯಾಡ್ ಎಂಬ ಔಷಧ ಬಳಸುತ್ತಾರೆ. ಆದರೆ ವಿಜ್ಞಾನಿಗಳ ಪ್ರಕಾರ ಔಷಧಗಳಿಲ್ಲದೆಯೇ ಮೈಗ್ರೇನ್‌ಗೆ ಚಿಕಿತ್ಸೆ ನೀಡಬಹುದು. ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ ಧ್ಯಾನ ಮತ್ತು ಯೋಗದಿಂದ ಮೈಗ್ರೇನ್ ಅನ್ನು ಹತೋಟಿಗೆ ತರಬಹುದಾಗಿದೆ.
ಸಂಶೋಧನೆ ಹೇಳುವುದೇನು?
ಸಂಶೋಧನೆಯ ವೇಳೆ ಮೈಗ್ರೇನ್ ರೋಗಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಮೊದಲ ಗುಂಪಿಗೆ ಚಿಕಿತ್ಸೆಯ ಭಾಗವಾಗಿ ಧ್ಯಾನವನ್ನು ಅಭ್ಯಾಸ ಮಾಡಿಸಲಾಯಿತು. ಧ್ಯಾನದ ವೇಳೆ ಉಸಿರಾಟದ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಾಯಿತು. ಇನ್ನೊಂದು ಗುಂಪಿಗೆ ತಲೆನೋವಿನ ಶಮನಕ್ಕಾಗಿ ಔಷಧಗಳನ್ನು ನೀಡಲಾಯಿತು. ತರಗತಿಯ ಸಂದರ್ಭದಲ್ಲಿ ಅವರ ಪ್ರಶ್ನೆ ಮತ್ತು ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು ಒತ್ತು ನೀಡಲಾಯಿತು. 8 ವಾರಗಳ ಅನಂತರ ಧ್ಯಾನ ಅಭ್ಯಾಸ ಮಾಡಿದ ಮೈಗ್ರೇನ್ ರೋಗಿಗಳ ಗುಂಪಿನ ಮಂದಿಯಲ್ಲಿ ಮೈಗ್ರೇನ್ ನಿಯಂತ್ರಣಕ್ಕೆ ಬಂದಿರುವುದು ಪತ್ತೆಯಾಯಿತು. ನಿಯಮಿತವಾಗಿ ಧ್ಯಾನ ಮತ್ತು ಯೋಗ ಮಾಡುತ್ತಾ ಬಂದಲ್ಲಿ ಮೈಗ್ರೇನ್ ಮಾತ್ರವಲ್ಲ ಖನ್ನತೆಯ ಆತಂಕವೂ ದೂರವಾಗುತ್ತದೆ ಎಂಬುದು ಈ ಸಂಶೋಧನೆಯ ವೇಳೆ ಸಾಬೀತಾಗಿದೆ.
ಮಕ್ಕಳ ಮೇಲೆ ಪರಿಣಾಮ
-ಸುಮಾರು ಶೇ. 10ರಷ್ಟು ಶಾಲಾ ವಯಸ್ಸಿನ ಮಕ್ಕಳಲ್ಲಿ ಮೈಗ್ರೇನ್ ಕಂಡುಬರುತ್ತದೆ.
-18 ತಿಂಗಳ ಮಗುವಿನಲ್ಲಿಯೂ ಮೈಗ್ರೇನ್ ಕಾಣಿಸಿಕೊಂಡಿರುವುದನ್ನು ವೈದ್ಯಕೀಯ ವರದಿಗಳು ದೃಢೀಕರಿಸಿವೆ.
-ಶಿಶುಗಳ ಉದರ ಶೂಲೆಯು ಬಾಲ್ಯದ ಮೈಗ್ರೇನ್‌ಗೆ ಸಂಬಂಧಿಸಿದೆ ಮತ್ತು ಇದು ಮೈಗ್ರೇನ್‌ನ ಆರಂಭಿಕ ರೂಪ.
-ಮೈಗ್ರೇನ್‌ನಿಂದ ಬಳಲುವ ಮಕ್ಕಳು ಮೈಗ್ರೇನ್ ಇಲ್ಲದ ಮಕ್ಕಳಿಗಿಂತ ಹೆಚ್ಚು ಶಾಲೆಗೆ ಗೈರು ಹಾಜರಾಗುತ್ತಾರೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.
-ಬಾಲ್ಯದಲ್ಲಿ ಹುಡುಗಿಯರಿಗಿಂತ ಹೆಚ್ಚಾಗಿ ಹುಡುಗರು ಮೈಗ್ರೇನ್‌ನಿಂದ ಬಳಲುತ್ತಾರೆ.
-ಹೆತ್ತವರು ಮೈಗ್ರೇನ್ ಹೊಂದಿದ್ದಲ್ಲಿ ಮಗುವಿಗೆ ಮೈಗ್ರೇನ್ ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕ. ತಂದೆ-ತಾಯಂದಿರಲ್ಲಿ ಒಬ್ಬರನ್ನು ಮೈಗ್ರೇನ್ ಕಾಡುತ್ತಿದ್ದರೆ ಶೇ.50ರಷ್ಟು ಮತ್ತು ಇಬ್ಬರಿಗೂ ಮೈಗ್ರೇನ್ ಇದ್ದಲ್ಲಿ ಮಕ್ಕಳಿಗೆ ಶೇ.75ರಷ್ಟು ಆನುವಂಶಿಕವಾಗಿ ಮೈಗ್ರೇನ್ ಬಾಧಿಸುವ ಸಾಧ್ಯತೆ ಇರುತ್ತದೆ.
ಮೈಗ್ರೇನ್ ಆನುವಂಶಿಕ ಕಾಯಿಲೆ.
ಸಾಮಾನ್ಯ ಕಾಯಿಲೆಯಾದರೂ ಪೀಡಿತರನ್ನು ಇನ್ನಿಲ್ಲದಂತೆ ಕಾಡುತ್ತದೆ.
ದೈನಂದಿನ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ.
ಮೈಗ್ರೇನ್‌ನಿಂದಾಗಿ ಖನ್ನತೆಯಂಥ ಮಾನಸಿಕ ಕಾಯಿಲೆ ಬಾಧಿಸುವ ಸಾಧ್ಯತೆ ಅಧಿಕ.
ಧ್ಯಾನ, ಯೋಗಾಭ್ಯಾಸದಿಂದ ನಿಯಂತ್ರಣ ಸಾಧ್ಯ.
-ಪ್ರೀತಿ ಭಟ್ ಗುಣವಂತೆ