ಹಾವೇರಿ: ಜಾನುವಾರುಗಳಿಗೆ ಕಾಲುಬಾಯಿ ಬೇನೆ ರೋಗ ನಿರ್ಮೂಲನೆಗಾಗಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಂಡಿರುವ, ಜಾನುವಾರುಗಳ ಕಾಲುಬಾಯಿ ಬೇನೆ ರೋಗ ನಿವಾರಕ ಲಸಿಕಾ ಕಾರ್ಯಕ್ರಮಕ್ಕೆ ಕರ್ಜಗಿ ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಚಾಲನೆ ನೀಡಿದರು.
ತಾಲೂಕಿನ ಕರ್ಜಗಿಯ ಪಶು ಆಸ್ಪತ್ರೆ ಆವರಣದಲ್ಲಿ ಗೋ ಪೂಜೆ ಮಾಡಿ ಜಾನುವಾರುಗಳಿಗೆ ಲಸಿಕೆ ವಿತರಣೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕಾಲುಬಾಯಿ ಬೇನೆ ರೋಗ ವೈರಾಣುವಿನಿಂದ ಬರುವಂತಹ ಕಾಯಿಲೆಯಾಗಿದೆ. ಇದರಿಂದ ಜಾನುವಾರುಗಳಿಗೆ ಹೆಚ್ಚಿನ ಜ್ವರ ಕಾಣಿಸಿಕೊಂಡು ಕಾಲು ಮತ್ತು ಬಾಯಿಯಲ್ಲಿ ಹುಣ್ಣಾಗಿ ಜೊಲ್ಲು ಸುರಿಸುತ್ತವೆ.
ಜಾನುವಾರುಗಳಲ್ಲಿ ಹಾಲಿನ ಇಳುವರಿ ಕಡಿಮೆಯಾಗಿ ಜಾನುವಾರುಗಳ ಉತ್ಪಾದನೆ ಹಾಗೂ ಉತ್ಪಾದಕತೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ರೈತ ಬಾಂಧವರು ಲಸಿಕೆ ಹಾಕಿಸುವಂತೆ ಮನವಿ ಮಾಡಿಕೊಂಡರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಮಾತನಾಡಿ, ಲಸಿಕಾ ಕಾರ್ಯಕ್ರಮದ ದೈನಂದಿನ ಪ್ರಗತಿ ವರದಿಗಳನ್ನು ಆನ್‌ಲೈನ್‌ನಲ್ಲಿ ತಾಲೂಕುವಾರು ದಾಖಲಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾದಡಿ ಜಿಲ್ಲೆಯ ಎಲ್ಲ ಜಾನುವಾರುಗಳಿಗೆ 12 ಸಂಖ್ಯೆ ವಿಶಿಷ್ಟ ರೀತಿಯ ಕಿವಿಯೋಲೆಗಳನ್ನು ಹಾಕುವ ಕಾರ್ಯಕ್ರಮವನ್ನು ಸಹ ಅನುಷ್ಟಾನಗೊಳಿಸಲಾಗಿತ್ತಿದೆ. ಈ ಕಿವಿಯೋಲೆ ಹಾಕಿದ ಜಾನುವಾರುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಸ ತಂತ್ರಾಂಶವಾದ ಇನಾಫ್ ಅಳವಡಿಸಲು ಜಿಲ್ಲೆಗೆ ಒಟ್ಟು 2,46,000 ಕಿವಿಯೋಲೆಗಳು ಸರಬರಾಜಾಗಿವೆ. ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಹಾಕುವುದರ ಜೊತೆಗೆ ಬಾಕಿ ಇರುವ ಕಿವಿಯೋಲೆಗಳನ್ನು ಜಾನುವಾರುಗಳಿಗೆ ಅಳವಡಿಸಲು ಪಶುವೈದ್ಯಕೀಯ ಅಧಿ ಕಾರಿ ಹಾಗೂ ಸಿಬ್ಬಂದಿ ಶ್ರಮಿಸಬೇಕು ಎಂದರು.
ರೈತ ಬಾಂಧವರು ಆಸಕ್ತಿಯಿಂದ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಗೂ ಕಿವಿಯೋಲೆ ಹಾಕಿಸಲು ಮುಂದಾಗಬೇಕೆಂದು ಮನವಿ ಮಾಡಿದರು. ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ರಾಜು ಕೂಲೇರ ಮಾತನಾಡಿ, ಜಿಲ್ಲಾದ್ಯಂತ ಅ.2ರಿಂದ ನವೆಂಬರ್ 15ರವರೆಗೆ 45 ದಿನಗಳ ಕಾಲ ಮೊದಲನೇ ಸುತ್ತಿನ ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಅಭಿಯಾನ ಪಶುವೈದ್ಯಕೀಯ ಇಲಾಖೆ ನೇತೃತ್ವದಲ್ಲಿ ನಡೆಯಲಿದೆ ಎಂದರು.