Advertisement
ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು “ಸಿ” ಜೀವಸತ್ವ ನೆಲ್ಲಿಕಾಯಿ ಹೊಂದಿರುತ್ತದೆ. ನೆಲ್ಲಿಕಾಯಿಯು ಹುಳಿಯ ಜೊತೆಗೆ, ಸ್ವಲ್ಪ ಕಹಿಯ ರುಚಿಯನ್ನು ಹೊಂದಿರುತ್ತದೆ. ಆದರೆ ಒಮ್ಮೆ ನೆಲ್ಲಿಕಾಯಿ ತಿಂದು ನೀರು ಕುಡಿದರೆ, ಸಿಹಿಯ ಅನುಭವವಾಗುತ್ತದೆ.
Related Articles
Advertisement
ನೆಲ್ಲಿಕಾಯಿಯನ್ನು ಕಚ್ಚಿ ತಿನ್ನುವುದರಿಂದ ಗ್ಯಾಸ್, ಜೊತೆಗೆ ಹೊಟ್ಟೆಯಲ್ಲಿನ ಹುಳ ಬಾಧೆ ಪರಿಹಾರವಾಗುತ್ತೆ. ಈಗಿನ ಮಾಲಿನ್ಯ ಪರಿಸರದಲ್ಲಿ ಹಲವರು ಅಸ್ತಮಾಕ್ಕೆ ಬಲಿಯಾಗುತ್ತಾರೆ. ಅಸ್ತಮಾದಿಂದ ಬಳಲುತ್ತಿರುವವರು ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿದರೆ ಅಸ್ತಮಾ ಕಡಿಮೆಯಾಗುತ್ತೆ. ಮಾತ್ರವಲ್ಲದೇ ಮಲಬದ್ಧತೆಯೂ ನಿವಾರಣೆಯಾಗಿ, ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಇದು ವಾತ, ಪಿತ್ತ, ಕಫ ಮೂರು ದೋಷಗಳನ್ನು ನಿವಾರಿಸಿ ದೇಹವನ್ನು ರೋಗಮುಕ್ತವನ್ನಾಗಿ ಮಾಡುತ್ತದೆ.
ಮಧುಮೇಹ ನಿಯಂತ್ರಣ:
ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು, ಸಣ್ಣ ತುಂಡುಗಳನ್ನು ಮಾಡಿ ನೀರಿಗೆ ಹಾಕಿ ಕುದಿಸಬೇಕು. ನಂತರ ಅದಕ್ಕೆ ಜೀರಿಗೆ ಪುಡಿ, ಮೆಂತ್ಯೆ ಪುಡಿ, ಸ್ವಲ್ಪ ಅರಿಶಿನ ಹಾಕಿ ಚೆನ್ನಾಗಿ ಕುದಿಸಿ ಮಾಡಿದ ಕಷಾಯವನ್ನು ಪ್ರತಿನಿತ್ಯ ಕುಡಿಯುವುದರಿಂದ ಇದು ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಿ, ಮಧುಮೇಹ ಹತೋಟಿಗೆ ಬರುತ್ತದೆ.
ರಕ್ತ ಶುದ್ಧೀಕರಿಸಲು ಸಹಕಾರಿ:
ನೆಲ್ಲಿಕಾಯಿಯು ರಕ್ತ ಶುದ್ಧೀಕರಿಸುತ್ತದೆ. ಬೆಟ್ಟದ ನೆಲ್ಲಿಕಾಯಿಯನ್ನು ಜ್ಯೂಸ್ ಮಾಡಿ ಅದಕ್ಕೆ ಜೇನು ತುಪ್ಪ ಸೇರಿಸಿಕೊಂಡು ಪ್ರತಿದಿನ ಕುಡಿಯುವುದರಿಂದ ದೇಹದಲ್ಲಿ ರಕ್ತ ಶುದ್ಧಿಯಾಗುತ್ತದೆ.
ದೇಹ ತಂಪಾಗಿಸಲು:
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನೆಲ್ಲಿಕಾಯಿಯ ಉಪಯೋಗಿಸಲಾಗುತ್ತದೆ. ಕೊತ್ತಂಬರಿ ಬೀಜ ಹಾಗೂ ಜೀರಿಗೆಯನ್ನು ರಾತ್ರಿ ನೆನೆಸಿಟ್ಟು, ನಂತರ ಬೆಳಿಗ್ಗೆ ಅದನ್ನು ಸೋಸಿಕೊಂಡು ಆ ನೀರಿಗೆ ನೆಲ್ಲಿಕಾಯಿಯ ಜ್ಯೂಸ್ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ.
ಹೊಟ್ಟೆನೋವು ನಿವಾರಣೆ:
ಹೊಟ್ಟೆನೋವು ನಿವಾರಣೆಗೆ ನೆಲ್ಲಿಕಾಯಿ ಸಹಕಾರಿ. ಹಸಿ ಬೆಟ್ಟದ ನೆಲ್ಲಿಕಾಯಿಯ ರಸ ತೆಗೆದು ಅದಕ್ಕೆ ಬೆಲ್ಲ ಸೇರಿಸಿ ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
ದೇಹದ ತೂಕ ನಿಯಂತ್ರಿಸಲು:
ನೆಲ್ಲಿಕಾಯಿ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಅತಿ ಕಡಿಮೆ ಕ್ಯಾಲೋರಿ ಹೊಂದಿದೆ. ಆದ್ದರಿಂದ ಪ್ರತಿದಿನ ನೆಲ್ಲಿಕಾಯಿ ರಸ ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ ಉತ್ಪಾದನೆ ನಿಯಂತ್ರಿಸಿ ದೇಹದ ತೂಕ ಕಡಿಮೆ ಮಾಡಲು ಸಹಕರಿಸುತ್ತದೆ.
ಕೂದಲಿನ ಆರೋಗ್ಯಕ್ಕೆ:
ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆಲ್ಲಿಕಾಯಿ ಸಹಕಾರಿ. ನೆಲ್ಲಿಕಾಯಿ ಬಳಸಿ ಎಣ್ಣೆ ತಯಾರಿಸಬಹುದು. ಮಾರುಕಟ್ಟೆಗಳಲ್ಲಿ ನೆಲ್ಲಿಕಾಯಿ ಎಣ್ಣೆ, ನೆಲ್ಲಿಕಾಯಿ ಶ್ಯಾಂಪೂ ಲಭ್ಯ.
ಎಣ್ಣೆ ಮಾಡುವ ವಿಧಾನ ಈ ರೀತಿಯಾಗಿದೆ : ಬೆಟ್ಟದ ನೆಲ್ಲಿಕಾಯಿಯನ್ನು ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಆ ಎಣ್ಣೆಯ ಬಣ್ಣ ಹಸಿರು ಬಣ್ಣಕ್ಕೆ ಬದಲಾದ ಮೇಲೆ ತಣ್ಣಗಾಗಲು ಬಿಡಿ. ನಂತರ ಬಾಟಲ್ ಗಳಲ್ಲಿ ಶೇಖರಿಸಿ, ಪ್ರತಿನಿತ್ಯ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ ಮಾತ್ರವಲ್ಲದೇ ಕೂದಲು ಕಾಂತಿಯುತವಾಗುತ್ತದೆ.
ಮುಖದ ಆರೋಗ್ಯ:
ಮುಖದ ಆರೋಗ್ಯಕ್ಕೆ ನೆಲ್ಲಿಕಾಯಿ ಉತ್ತಮ ಔಷಧಿ. ಬೆಟ್ಟದ ನೆಲ್ಲಿಕಾಯಿಯನ್ನು ಜಜ್ಜಿ ಪೇಸ್ಟ್ ಮಾಡಿ ಒಂದು ಚಮಚ ಪೇಸ್ಟ್ ಗೆ ಅರ್ಧ ಚಮಚ ಮುಲ್ತಾನಿ ಮಿಟ್ಟಿ ಸೇರಿಸಿಕೊಳ್ಳಬೇಕು. ಇದಕ್ಕೆ ನೀರನ್ನು ಸೇರಿಸುವ ಅಗತ್ಯ ಇರುವುದಿಲ್ಲ, ಏಕೆಂದರೆ ಹಸಿ ನೆಲ್ಲಿಕಾಯಿ ಉಪಯೋಗಿಸುವುದರಿಂದ ಅದರ ರಸದಲ್ಲೇ ಕಲಸಬಹುದು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಇದು ಮುಖದ ಆರೋಗ್ಯ ಕಾಪಾಡುತ್ತದೆ.
ಚರ್ಮದ ಆರೋಗ್ಯಕ್ಕೆ ಬೇಕಾದ ಕೊಲಾಜೆನ್ ನ ರಚನೆಗೆ ಇದು ತುಂಬಾ ಸಹಕಾರಿ. ಇದು ತ್ವಚೆಯನ್ನು ಕಾಂತಿಯುತವಾಗಿಸುತ್ತದೆ ಎನ್ನಲಾಗುತ್ತದೆ.
ಡಾರ್ಕ್ ಸರ್ಕಲ್ಸ್ (ಕಣ್ಣಿನ ಸುತ್ತ ಕಲೆ):
ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ನೆಲ್ಲಿಕಾಯಿ ಸಹಕಾರಿ. ಇತ್ತೀಚಿಗೆ ಹಲವರಲ್ಲಿ ಕಾಣುವ ಸಾಮಾನ್ಯ ಸಮಸ್ಯೆ ಕಣ್ಣಿನ ಸುತ್ತಲೂ ಕಪ್ಪಗಿರುವುದು. ಇದನ್ನು ಹೋಗಲಾಡಿಸಲು ರಾಸಾಯನಿಕ ಕ್ರೀಮ್ ಗಳ ಬಳಕೆ ಮಾಡುವ ಬದಲು ನೆಲ್ಲಿಕಾಯಿ ಪೇಸ್ಟ್ ಮಾಡಿಕೊಂಡು, ಕಣ್ಣಿನ ಸುತ್ತಲೂ ಹಚ್ಚಿಕೊಳ್ಳುವುದರಿಂದ ಕಣ್ಣು ತಂಪಾಗುವುದಲ್ಲದೆ, ನಿಧಾನವಾಗಿ ಕಪ್ಪು ಕಲೆಯು ನಿವಾರಣೆಯಾಗುತ್ತದೆ.
*ಕಾವ್ಯಶ್ರೀ