Advertisement

ಹಳ್ಳ ಸೇರುತ್ತಿದೆ ಹಳ್ಳಿಗಳ ಕೋವಿಡ್ ವಿಷ

06:51 PM Jun 04, 2021 | Team Udayavani |

ವರದಿ: ಬಸವರಾಜ ಹೊಂಗಲ್‌

Advertisement

ಧಾರವಾಡ: ಕೆರೆಯ ಅಂಗಳದಲ್ಲಿ ರಾರಾಜಿಸುತ್ತಿರುವ ಸಿರಿಂಜ್‌ಗಳು, ಹರಿಯುವ ಹಳ್ಳ ಸೇರುತ್ತಿರುವ ಬಯೋ ಮೆಡಿಕಲ್‌ ತ್ಯಾಜ್ಯ, ಇದರ ಪಕ್ಕದಲ್ಲಿಯೇ ಆಟವಾಡುವ ಮಕ್ಕಳು, ಅಷ್ಟೇಯಲ್ಲ ಇವುಗಳನ್ನೇ ತಿನ್ನುವ ಜಾನುವಾರುಗಳು! ಕೊರೊನಾ ಎರಡನೇ ಅಲೆಯಿಂದ ಗುಮ್ಮಿಸಿಕೊಂಡರೂ ಇನ್ನು ಹಳ್ಳಿಗರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ.

ಮೂಲಭೂತ ವೈದ್ಯಕೀಯ ಸೇವೆ ಇಲ್ಲದ ಹಳ್ಳಿಗರು ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿರುವ ಮಧ್ಯೆಯೇ ಇದೀಗ ಹಳ್ಳಿಗಳಲ್ಲಿ ಬಯೋ ಮೆಡಿಕಲ್‌ ತಾಜ್ಯದ ಹಾವಳಿ ಅಧಿಕವಾಗಿದ್ದು, ಹಳ್ಳಿಗರ ಮತ್ತು ಒಟ್ಟಾರೆ ಜೀವ ಸಂಕುಲಕ್ಕೆ ಆಶ್ರಯವಾಗಿರುವ ಹಳ್ಳಗಳು ಮತ್ತು ಕೆರೆಯ ಕೋಡಿಗಳಲ್ಲಿ ಇದೀಗ ಕೊರೊನಾ ಚಿಕಿತ್ಸೆಗೆ ಬಳಸಿದ ಮೆಡಿಕಲ್‌ ತ್ಯಾಜ್ಯ ರಾರಾಜಿಸುತ್ತಿದೆ. ಇದರ ದುಷ್ಪರಿಣಾಮ ಏನೆಂಬುದು ಇನ್ನಷ್ಟು ದಿನಗಳಾದ ಮೇಲೆ ಗೊತ್ತಾಗಲಿದೆ.

ಎಸೆದ ಹಾನಿ ಏನು?:

ಹಳ್ಳಿಗಳಲ್ಲಿ ಅದರಲ್ಲೂ ಹಳ್ಳ, ಕೆರೆ ಕುಂಟೆಗಳ ಅಂಗಳ ಮತ್ತು ಜಲಮೂಲಗಳ ಸೆಲೆ ಹರಿಯುವಲ್ಲಿ ಇಂತಹ ಬಯೋ ಮೆಡಿಕಲ್‌ ತಾಜ್ಯ ಎಸೆಯಲಾಗುತ್ತಿದೆ. ಸದ್ಯ ಹಳ್ಳಿಗಳಲ್ಲಿ ಅತ್ಯಂತ ಹೆಚ್ಚಾಗಿರುವ ಕೊರೊನಾಕ್ಕೆ ಅತೀ ಹೆಚ್ಚು ಚಿಕಿತ್ಸೆಯನ್ನು ಸ್ಥಳೀಯ ವೈದ್ಯರು ಮಾಡುತ್ತಿದ್ದಾರೆ. ಕೊರೊನಾ ಸೇರಿದಂತೆ ಇತರೆ ವೈರಸ್‌ ಮತ್ತು ಕೆಟ್ಟ ಬ್ಯಾಕ್ಟೀರಿಯಾ ಹೊಂದಿದ ವ್ಯಕ್ತಿಗಳನ್ನು ಚಿಕಿತ್ಸೆ ಮಾಡಿದ ನಂತರ ಬರುವ ಈ ಬಯೋ ಮೆಡಿಕಲ್‌ ತಾಜ್ಯದಲ್ಲಿ ಅದೇ ವೈರಸ್‌ ಮತ್ತು ಬ್ಯಾಕ್ಟೀರಿಯಾಗಳು ತಿಂಗಳುಗಟ್ಟಲೇ ಬದುಕಿರುವ ಸಾಧ್ಯತೆ ಇರುತ್ತದೆ.

Advertisement

ಇನ್ನು ಮಳೆಗಾಲ ಆರಂಭವಾಗುತ್ತಿದ್ದು ಕೆರೆ, ಕುಂಟೆ ಮತ್ತು ಹಳ್ಳಗಳಲ್ಲಿ ಈ ತ್ಯಾಜ್ಯ ಸೇರಿದರೆ ಖಂಡಿತಾ ಅದು ಜಲಮೂಲವನ್ನೇ ಸೇರಿ ಮರಳಿ ಅದೇ ಹಳ್ಳಿ ಅಥವಾ ಅಕ್ಕಪಕ್ಕದ ಹಳ್ಳಿಗಳ ಜನರನ್ನು ತೊಡಗಿಕೊಳ್ಳುವುದು ನಿಶ್ಚಿತ. ಅದಲ್ಲದೇ ಇದೀಗ ಹಳ್ಳಿ ಮಕ್ಕಳು ಕೊರೊನಾ ಹಿನ್ನೆಲೆಯಲ್ಲಿ ಪ್ರತಿದಿನವೂ ಆಟವಾಡಲು ಗ್ರಾಮಗಳ ಸುತ್ತ ಸುತ್ತಾಡುತ್ತಿವೆ. ಇಂತಹ ಮಕ್ಕಳು ಮೊದಲೇ 3ನೇ ಕೊರೊನಾ ಅಲೆಯ ಆತಂಕದಲ್ಲಿದ್ದು, ಈ ಬಯೋ ತಾಜ್ಯವನ್ನು ಕುತೂಹಲಕ್ಕೆ ಮುಟ್ಟಿದರೂ ಅಂತಹ ಮಕ್ಕಳಿಗೆ ಕೊರೊನಾ ಒಂದೇ ಅಲ್ಲ ಇತರೆ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇದೆ.

ಬಯೋ ತಾಜ್ಯ ವಿಲೇವಾರಿ ನೀತಿ: ಆಸ್ಪತ್ರೆಗಳು, ಖಾಸಗಿ ವೈದ್ಯರು ಸೇರಿದಂತೆ ವೈದ್ಯಕೀಯ ವೃತ್ತಿಯಲ್ಲಿ ಹೊರ ಬರುವ ಬಯೋ ತಾಜ್ಯವನ್ನು ಅತ್ಯಂತ ಶಿಸ್ತಿನಿಂದ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸಲು ಸರ್ಕಾರ ಕಠಿಣ ಕಾನೂನು ರೂಪಿಸಿದೆ. ಅದರನ್ವಯ ಬಿಎಂಡಬ್ಲೂ (ಬಯೋ ತಾಜ್ಯ ಕೊಂಡೊಯ್ಯಲು ಬರುವ) ವಾಹನಗಳೇ ವೈದ್ಯರು ಮತ್ತು ಆಸ್ಪತ್ರೆಗಳ ಬಳಿಗೆ ಬಂದು ಅದನ್ನು ವ್ಯವಸ್ಥಿತವಾಗಿ ತೆಗೆದುಕೊಂಡು ಹೋಗಿ ನಿರ್ವಹಣೆ ಮಾಡಲಾಗುತ್ತದೆ. ಇದಕ್ಕೆ ಆಸ್ಪತ್ರೆಗಳು ಮತ್ತು ವೈದ್ಯರು ತಾಜ್ಯಕ್ಕೆ ತಕ್ಕಂತೆ ಅವರಿಗೆ ಹಣ ಕೂಡ ಕೊಡುತ್ತಾರೆ. ಆದರೆ ಹಳ್ಳಿಗಳಲ್ಲಿ ಇದೀಗ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗ್ಯಾರಿಗೂ ಪರವಾನಗಿ ಇರಲ್ಲ. ಅದೂ ಅಲ್ಲದೇ ಕೆಲವಷ್ಟು ಜನರು ಚಿಕಿತ್ಸೆ ಪಡೆದವರ ಮನೆಯಲ್ಲಿಯೇ ತಾಜ್ಯವನ್ನು ಬಿಟ್ಟು ಹೋಗುತ್ತಿದ್ದಾರೆ. ಅವರು ಅದನ್ನು ಗೊಬ್ಬರ ಹುಂಡಿ, ತಿಪ್ಪೆಗಳಿಗೂ ಸುರಿಯುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಅವರೇ ಹಳ್ಳಿಗಳಲ್ಲಿನ ಹೆಚ್ಚು ಜನರಿಗೆ ಚಿಕಿತ್ಸೆ ನೀಡುತ್ತಿದ್ದರೂ ಚಿಕಿತ್ಸೆಗೆ ಬಳಕೆಯಾದ ಬಯೋ ಮೆಡಿಕಲ್‌ ತಾಜ್ಯವನ್ನು ಸರಿಯಾಗಿ ನಿರ್ವಹಿಸಬೇಕಿದೆ.

ಇಲ್ಲವೇ ಇಲ್ಲ ಬಣ್ಣದ ಬುಟ್ಟಿ: ಬಯೋ ತ್ಯಾಜ್ಯ ವಿಲೇವಾರಿ ಮಾಡುವವರು ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯರಿಗೆ ಮೊದಲೇ ವಿಭಿನ್ನ ಬಣ್ಣದ ಪ್ಲಾಸ್ಟಿಕ್‌ ಮತ್ತು ಬುಟ್ಟಿಗಳನ್ನು ಕೊಟ್ಟಿರುತ್ತಾರೆ. ಅದರಲ್ಲಿ ಕಪ್ಪು, ಕೆಂಪು, ನೀಲಿ, ಹಸಿರು, ಹಳದಿ ಬಣ್ಣದ ಬುಟ್ಟಿಗಳಿದ್ದು, ಯಾವ ಯಾವ ಬುಟ್ಟಿಯಲ್ಲಿ ಯಾವ ಬಯೋ ಮೆಡಿಕಲ್‌ ತಾಜ್ಯ ಸುರಿಯಬೇಕೆಂಬ ನಿಯಮ ಮಾಡಲಾಗಿದೆ. ಅತ್ಯಂತ ಹಾನಿಕಾರಕ ವೈರಸ್‌, ಬ್ಯಾಕ್ಟೀರಿಯಾ ಇರುವ ವ್ಯಕ್ತಿಗಳ ಇನೆ#ಕ್ಷನ್‌ಗಳಿಂದ ಬರುವ ತಾಜ್ಯವನ್ನು ಕೆಂಪು ಡಬ್ಬಿಗೆ ಸರಿದರೆ ಸಿರಿಂಜ್‌ಗಳು, ಪ್ಲಾಸ್ಟಿಕ್‌ ವಸ್ತುಗಳನ್ನು ಇನ್ನೊಂದು ನಿಗದಿಪಡಿಸಿದ ಬಣ್ಣದ ಡಬ್ಬಿಗೆ ಸುರಿಯಬೇಕಿದೆ. ಇದನ್ನು ನಿರ್ವಹಿಸುವವರು ಅಚ್ಚುಕಟ್ಟಾಗಿ ಅವುಗಳನ್ನು ತೆಗೆದುಕೊಂಡು ಹೋಗಿ ಆಯಾ ಘಟಕಗಳಲ್ಲಿ ಹಾಕಿ ನಿರ್ಮೂಲನೆ ಮಾಡುತ್ತಾರೆ.

ಕೋವಿಡ್‌ಗೆ ಅಂಜದ ಹಳ್ಳಿಗರು: ದುರಂತ ಎಂದರೆ ಹಳ್ಳಿಗಳನ್ನು ಕೊರೊನಾ ಎರಡನೇ ಅಲೆ ವಿಪರೀತ ಬಾಧಿಸುತ್ತಿದೆ. ಈಗಲೂ ಹಳ್ಳಿಗಳಲ್ಲಿ ಕೊರೊನಾ ಇನ್ನು ಹಳಿಗೆ ಬಂದಿಲ್ಲ. ಆದರೂ ಕೋವಿಡ್‌ ಎಸ್‌ಒಪಿ ಅಂದರೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಳ್ಳಿಗರ ನಿರ್ಲಕ್ಷ್ಯ ಮುಂದುವರಿದಿದೆ. ಸರಿಯಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್‌ಗಳ ಬಳಕೆಗೆ ಯಾರೂ ಒತ್ತು ನೀಡುತ್ತಲೇ ಇಲ್ಲ. ಹೀಗಾಗಿ ಈ ಬಯೋ ಮೆಡಿಕಲ್‌ ತ್ಯಾಜ್ಯದ ಬಗ್ಗೆಯೂ ಅಷ್ಟಾಗಿ ಯಾರೂ ತಲೆಕೆಡಿಸಿಕೊಂಡಿಲ್ಲ. ಬಯೋ ತ್ಯಾಜ್ಯ ಬಿದ್ದಲ್ಲಿಯೇ ಹಳ್ಳಿಗರ ಎಮ್ಮೆ, ಹಸು, ಜಾನುವಾರುಗಳೂ ಹುಲ್ಲು ಮೇಯುತ್ತಿವೆ. ಹಳ್ಳಿಗಳಲ್ಲಿ ತಲೆ ಎತ್ತುತ್ತಿರುವ ಸಿಸಿಸಿ: ಇನ್ನು ಹಳ್ಳಿಗಳಲ್ಲಿಯೇ ಕೋವಿಡ್‌ ನಿಯಂತ್ರಣ ಕೇಂದ್ರಗಳ ಸಂಖ್ಯೆ 50 ದಾಟಿದ್ದು, ಮಠಮಾನ್ಯಗಳು ಸೇರಿದಂತೆ ಸಂಘ-ಸಂಸ್ಥೆಗಳು ಗ್ರಾಪಂಗಳು ಇದಕ್ಕೆ ಒತ್ತು ಕೊಟ್ಟಿದ್ದು, ಸದ್ಯಕ್ಕೆ ಕೋವಿಡ್‌ ನಿರ್ವಹಣೆಗೆ ಇನ್ನು ಮೇಲೆ ಒತ್ತು ಸಿಕ್ಕುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next