ಸಂತೆಮರಹಳ್ಳಿ: ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕ ವಿಲೇವಾರಿ ಮಾಡಿ ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಆರ್‌ಸಿಎಚ್ ಅಧಿಕಾರಿ ಡಾ.ವಿಶ್ವೇಶ್ವರಯ್ಯ ಹೇಳಿದರು.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತ್ಯಾಜ್ಯ ವಿಲೇವಾರಿ ಜಾಗತಿಕ ಸಮಸ್ಯೆಗಳಲ್ಲಿ ಒಂದಾಗಿದೆ. ಇದರ ನಿರ್ವಹಣೆ ಕಷ್ಟವಾಗಿದೆ.
ಇದಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖವಾಗಿದೆ. ಮಾಹಿತಿ ಕೊರತೆಯಿಂದ ಎಲ್ಲೆಂದರಲ್ಲಿ ಕಸ ಬಿಸಾಡುವ ಸಂಸ್ಕೃತಿ ನಮ್ಮದಾಗಿದೆ. ಅದರಲ್ಲೂ ವೈದ್ಯಕೀಯ ತ್ಯಾಜ್ಯ ಅಪಾಯಕಾರಿಯಾಗಿದೆ. ಇದನ್ನು ನಿರ್ದಿಷ್ಟ ವಿಲೇವಾರಿ ಮಾಡದಿದ್ದರೆ ಅಪಾಯ ಎದುರಿಸಬೇಕಿದೆ ಎಂದರು.
ಇದಕ್ಕಾಗಿಯೇ ಕೇಂದ್ರ ಪರಿಸರ ಸಚಿವಾಲಯವು ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಬಗ್ಗೆ ನೂತನ ನಿಯಮಾವಳಿ ರೂಪಿಸಿದೆ. ಎಲ್ಲಾ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ವರ್ಗದವರು ತರಬೇತಿ ಪಡೆಯಬೇಕು ಎಂದರು.
ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಇಲ್ಲದಿದ್ದಲ್ಲಿ ಅನೇಕ ಜನರ ಪ್ರಾಣಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಇದರ ಬಗ್ಗೆ ಸಿಬ್ಬಂದಿ ಸದಾ ಜಾಗೃತರಾಗಿರಬೇಕು. ರೋಗಿಗಳಲ್ಲಿಯೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ದೇವರಾಜು, ಡಾ. ಪ್ರಭಾಕರ್, ಡಾ. ಸುನೀಲ್‌ಚಂದ್ರ, ಡಾ.ಹೇಮಾ, ಡಾ.ಮೀನಾಕ್ಷಿ, ತ್ಯಾಜ್ಯ ನಿರ್ವಹಣೆ ಸಂಪನ್ಮೂಲ ವ್ಯಕ್ತಿ ಶ್ರೀನಾಥ್‌ನಾಯಕ್, ಆರೀಫ್, ಇಂದಿರಮ್ಮ, ಪೂರ್ಣಿಮಾ, ಮಲ್ಲಯ್ಯ ಹಾಜರಿದ್ದರು.