Advertisement

ನಮ್ಮನ್ನು ದಯವಿಟ್ಟು ದೇಶಕ್ಕೆ ಕರೆಸಿಕೊಳ್ಳಿ; ರಷ್ಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನವಿ

07:03 PM Jun 29, 2020 | Team Udayavani |

ಯಾದಗಿರಿ: ರಾಜ್ಯದ ವಿವಿಧ ಭಾಗಗಳಿಂದ ವೈದ್ಯಕೀಯ ಶಿಕ್ಷಣಕ್ಕಾಗಿ ರಷ್ಯಾ ದೇಶಕ್ಕೆ ತೆರಳಿದ್ದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೀಗ ಅಲ್ಲಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

Advertisement

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಸಿಲುಕಿರುವ ಈ ವಿದ್ಯಾರ್ಥಿಗಳು ಇದೀಗ ಅಲ್ಲಿ ಕೋವಿಡ್ 19 ಸೋಂಕಿನ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ತಮ್ಮನ್ನು ತಾಯ್ನಾಡಿಗೆ ಕರೆಯಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ತಾವಿಲ್ಲಿ ಸಂಕಷ್ಟದಲ್ಲಿರುವ ಕುರಿತಾಗಿ ಅಳಲು ತೋಡಿಕೊಂಡು ವಿಡಿಯೋ ಸಂದೇಶವೊಂದನ್ನೂ ಸಹ ಈ ವಿದ್ಯಾರ್ಥಿಗಳು ಕಳುಹಿಸಿಕೊಟ್ಟಿದ್ದಾರೆ.

‘ವಂದೇ ಭಾರತ್ ಮಿಷನ್’ ಯೋಜನೆಯಡಿ ಕರ್ನಾಟಕದವರಿಗಾಗಿ ಒಂದು ವಿಮಾನ ವ್ಯವಸ್ಥೆ  ಮಾಡಲಾಗಿತ್ತು ಆದರೆ ಹೆಚ್ಚಿನ ಕನ್ನಡಿಗರಿಗೆ ಆ ವಿಮಾನದಲ್ಲಿ ಸೀಟು ಸಿಗಲಿಲ್ಲ ಮತ್ತು ದೆಹಲಿ ಸೇರಿದಂತೆ ಬೇರೆ ರಾಜ್ಯದವರು ಆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳು ಈ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಅಲ್ಲದೆ ಈ ವಿಮಾನ ದೆಹಲಿ, ಚೆನ್ನೈ ಮಾರ್ಗವಾಗಿ ಆಗಮಿಸಿದ್ದು, ನಾವೆಲ್ಲಾ ಕರ್ನಾಟಕದವರಿದ್ದು ಮಾಸ್ಕೋದಿಂದ ನೇರವಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವಂತೆ ಅನುಕೂಲ ಕಲ್ಪಿಸಲು ಒತ್ತಾಯಿಸಿದ್ದಾರೆ.

Advertisement

ಹೆಚ್ಚಿನ ವಿದ್ಯಾರ್ಥಿಗಳು ಬೆಂಗಳೂರು, ಚಿತ್ರದುರ್ಗ, ತುಮಕೂರು, ಮಂಡ್ಯ, ಹುಬ್ಬಳ್ಳಿ, ಗದಗ, ದಾವಣಗೆರೆಯವರಿದ್ದು ಇವರಲ್ಲಿ ಯಾದಗಿರಿ ಹಾಗೂ ರಾಯಚೂರಿನ ತಲಾ ಒಬ್ಬರು ಸೇರಿದ್ದು ರಾಜ್ಯಕ್ಕೆ ಮರಳುವ ತವಕದಲ್ಲಿದ್ದು ತಮ್ಮ ಗೋಳು ಯಾರು ಕೇಳುತ್ತಿಲ್ಲ ಎಂದಿದ್ದಾರೆ.

ಈ ನಡುವೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವೀ ಸೂರ್ಯ ಅವರು ಇಂದು ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದು, ರಾಜ್ಯದ 41 ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೆ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ ಅವರು ಪ್ರಧಾನಮಂತ್ರಿಗಳು ಹಾಗೂ ವಿದೇಶಾಂಗ ಸಚಿವರಿಗೆ ಪತ್ರ ಬರೆದು ಜೂನ್ 30ರ ವಿಮಾನ ಭರ್ತಿಯಾಗಿದ್ದು, ರಾಜ್ಯಕ್ಕೆ ಆಗಮಿಸುವ 200 ರಷ್ಟು ವಿದ್ಯಾರ್ಥಿಗಳು ಮಾಸ್ಕೋದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು ಕರ್ನಾಟಕಕ್ಕೆ ಮರಳಲು ವ್ಯವಸ್ಥೆ ಮಾಡುವುದು ಅಲ್ಲದೆ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಸುರಕ್ಷೆತೆ ಮತ್ತು ಅಗತ್ಯ ಕ್ರಮಕ್ಕೆ ನಿರ್ದೇಶನ ನೀಡಲು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next