Advertisement
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ತೇರ್ಗಡೆಯಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೂಲಕ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ಆರಂಭವಾಗಿದೆ. ಆದರೆ, ಈ ವರ್ಷ ಎಷ್ಟು ವೈದ್ಯಕೀಯ ಮತ್ತು ದಂತವೈದ್ಯಕೀಯ ಸೀಟು ರಾಜ್ಯದಲ್ಲಿ ಲಭ್ಯವಿದೆ ಹಾಗೂ ಎಷ್ಟು ವಿದ್ಯಾರ್ಥಿಗಳಿಗೆ ಸೀಟು ಸಿಗಬಹುದು ಎಂಬಿತ್ಯಾದಿ ಅಂಶಗಳನ್ನು ಒಳಗೊಂಡಿರುವ ಸೀಟ್ ಮ್ಯಾಟ್ರಿಕ್ ಅನ್ನು ರಾಜ್ಯ ಸರ್ಕಾರ ಇನ್ನು ಕೆಇಎಗೆ ನೀಡಿಲ್ಲ.
Related Articles
Advertisement
ಈ ಮಧ್ಯೆ, ವಿದ್ಯಾರ್ಥಿಗಳಿಗೆ ಇನ್ನೊಂದು ಸಂಕಟ ಎದುರಾಗಿದೆ. ಎರಡನೇ ಸುತ್ತಿನಲ್ಲಿ ಎಂಜಿನಿಯರಿಂಗ್ ಸೀಟು ಹಂಚಿಕೆಯಾಗಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕು. ಇಲ್ಲವಾದರೆ, ಸೀಟು ರದ್ದಾಗಲಿದೆ ಎಂಬ ಸಂದೇಶ ಪ್ರಾಧಿಕಾರ ನೀಡಿದೆ. ಇದರಿಂದ ಪಾಲಕರು ಹಾಗೂ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಹಾಗೆಯೇ ನೀಟ್ ಅಡಿಯಲ್ಲಿ ಸೀಟು ಲಭ್ಯವಾಗುವುದಿಲ್ಲ ಎಂಬ ಸಂದೇಶವನ್ನು ಕೆಲವು ವಿದ್ಯಾರ್ಥಿಗಳಿಗೆ ಕಳುಹಿಸಲಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಪ್ರಸ್ತಕ ಸಾಲಿನಿಂದಲೇ ವೈದ್ಯಕೀಯ ಶಿಕ್ಷಣದ ಪ್ರವೇಶ ಶುಲ್ಕ ಶೇ.10ರಷ್ಟು ಏರಿಸಲು ಸರ್ಕಾರ ನಿರ್ಧರಿಸಿದ್ದು, ಶುಲ್ಕದ ವಿವರವನ್ನು ಇನ್ನು ಪ್ರಾಧಿಕಾರಕ್ಕೆ ನೀಡಿಲ್ಲ. ಕಳೆದ ವರ್ಷ ಸರ್ಕಾರಿ ವೈದ್ಯ ಸೀಟಿಗೆ 70 ಸಾವಿರ ಹಾಗೂ ಖಾಸಗಿ ಪ್ರವೇಶ ಶುಲ್ಕ 5.85 ಲಕ್ಷ ವಿಧಿಸಲಾಗಿತ್ತು. ಶೇ.10ರಷ್ಟು ಹೆಚ್ಚಳದಿಂದ ಈ ವರ್ಷ ಸರ್ಕಾರಿ ಕಾಲೇಜು ಪ್ರವೇಶ ಶುಲ್ಕ 77 ಸಾವಿರ ಹಾಗೂ ಖಾಸಗಿ ಸೀಟಿಗೆ 6.35 ಲಕ್ಷ ಶುಲ್ಕವಾಗಲಿದೆ.
ಸರ್ಕಾರಿ ವೈದ್ಯಕೀಯ ಕಾಲೇಜಿನ ಶುಲ್ಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 16,000 ರೂ. ಶುಲ್ಕ ಇರಲಿದೆ. ಆದರೆ, ಈ ಬಗ್ಗೆ ಅಧಿಕೃತ ಆದೇಶ ಇನ್ನು ಪ್ರಾಧಿಕಾರಕ್ಕೆ ಸಿಕ್ಕಿಲ್ಲ. ಹಾಗೆಯೇ ಈ ಬಾರಿ ರಾಜ್ಯದಲ್ಲಿ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು 100ರಿಂದ 150ಕ್ಕೆ ಹಾಗೂ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ 150ರಿಂದ 200ಕ್ಕೆ ಏರಿಸಲಾಗಿದೆ. ಇದರಿಂದ ಹೆಚ್ಚುವರಿ 350 ಸರ್ಕಾರಿ ಸೀಟುಗಳು ಲಭ್ಯವಾಗಿದೆ.
ಸರ್ಕಾರದಿಂದ ಇನ್ನು ವೈದ್ಯಕೀಯ ಸೀಟ್ ಮ್ಯಾಟ್ರಿಕ್ಸ್ ಹಾಗೂ ಶುಲ್ಕ ವಿವರ ಬಂದಿಲ್ಲ. ಸರ್ಕಾರದಿಂದ ಸೀಟ್ ಮ್ಯಾಟ್ರಿಕ್ಸ್ ನೀಡಿದ ನಂತರವೇ ಸೀಟು ಹಂಚಿಕೆ ಪ್ರಕ್ರಿಯೆ ಮುಂದುವರಿಸಲು ಸಾಧ್ಯ. ವೈದ್ಯಕೀಯ ಸೀಟು ಹಂಚಿಕೆ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ.-ಗಂಗಾಧರಯ್ಯ, ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ