Advertisement

ಮೆಡಿಕಲ್‌ ಸೀಟು ವಂಚನೆ ಜಾಲ ಬಯಲು

06:00 AM Sep 30, 2018 | |

ಬೆಂಗಳೂರು: ಅಮೆರಿಕಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮೆಡಿಕಲ್‌ ಸೀಟು ಕೊಡಿಸುವುದಾಗಿ ನೂರಾರು ಮಂದಿ ವಿಧ್ಯಾರ್ಥಿಗಳಿಂದ 25 ಕೋಟಿ ರೂಗಳಿಗೂ ಅಧಿಕ ಹಣ ಪಡೆದುಕೊಂಡು ವಂಚಿಸಿದ್ದ ” ನಾರ್ಥ್ ಅಮೆರಿಕನ್‌ ಎಜುಕೇಶನ್‌ ಸೆಂಟರ್‌’ ಕನ್ಸ್‌ಲ್ಟೆನ್ಸಿ ಏಜೆನ್ಸಿಯ ಬಂಡವಾಳ ಬಯಲಾಗಿದೆ.

Advertisement

ಏಜೆನ್ಸಿಯಿಂದ ಮೋಸಹೋದ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಆಗ್ನೇಯ ವಿಭಾಗದ ಪೊಲೀಸರು, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿಯನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ದಿಲೀಪ್‌, ಏಡುಕೊಂಡಲು, ಬೆಂಗಳೂರಿನ  ಸುಮನ್‌ ಅಲಿಯಾಸ್‌ ಶಹಿಸ್ತಾ ಸುಮನ್‌, ಆಯಿಷಾ ಭಾನು, ರಂಗ, ಭಾಷಾ, ಬಂಧಿತರು. ಕನ್ಸ್‌ಲ್ಟೆನ್ಸಿಯ ವ್ಯವಸ್ಥಾಪಕ ನಿರ್ದೇಶಕ  ಗೋಪಿ ವೆಂಕಟರಾವ್‌ ಹಾಗೂ ಆತನ ಪತ್ನಿ ನಿಖೀಲಾ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆಯಿದ್ದು, ಆತನ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವರ್ಷವೂ ಹಲವು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ವಂಚನೆ ಎಸಗಲು ಸಿದ್ಧತೆ ನಡೆಸಿದ ಬೆನ್ನಲ್ಲೇ ಆರೋಪಿಗಳ ಬಂಧನವಾಗಿದೆ. ಸಂಸ್ಥೆಯಲ್ಲಿ ಜಪ್ತಿ ಮಾಡಿಕೊಂಡಿರುವ ದಾಖಲೆಗಳ ಅನ್ವಯ ಇದುವರೆಗೂ ಚೆನೈ, ಹೈದ್ರಾಬಾದ್‌, ರಾಜ್ಯದ ವಿವಿಧ ಜಿಲ್ಲೆಗಳ ಜಡ್ಜ್ ಪುತ್ರ ಸೇರಿ 200ಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ವಂಚಿಸಿದ್ದು, 25 ಕೋಟಿ. ರೂ ಅಧಿಕ ಹಣ ಸಂಗ್ರಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಂಚನೆ ಎಸಗಿದ ದುಡ್ಡಲ್ಲೇ 6 ಎಕರೆ ಜಮೀನು ಖರೀದಿ!
ಪ್ರಕರಣ ಪ್ರಮುಖ ಆರೋಪಿ ಎಂಬಿಎ ಪದವೀಧರ ವೆಂಕಟ್‌ 2011ರಲ್ಲಿ  ನಾರ್ಥ್ ಅಮೆರಿಕನ್‌ ಎಜುಕೇಶನ್‌ ಸೆಂಟರ್‌ ಕನ್ಸಲ್ಟೆನ್ಸಿಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದು, ಚೆನೈ ಹೈದ್ರಾಬಾದ್‌ನಲ್ಲೂ ಕಚೇರಿ ತೆಗೆದಿದ್ದು ನೂರಾರು ಹಣ ಸಂಗ್ರಹಿಸಿದ್ದಾನೆ. ಈತನ ವಂಚನೆ ಬಗ್ಗೆ 2013ರಲ್ಲಿ ತಮಿಳುನಾಡಿನಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಆದರೆ, ಈತನ ಬಂಧನವಾಗಿರಲಿಲ್ಲ.

Advertisement

ರಾಜ್ಯದ ವಿದ್ಯಾರ್ಥಿಗಳಿಗೆ ವಂಚನೆ ಎಸಗಿದ ದುಡ್ಡನ್ನು ಬಳಸಿಯೇ ಆನೇಕಲ್‌ನ ಸಮೀಪ 6 ಎಕರೆ ಜಮೀನು ಖರೀದಿಸಿದ್ದಾನೆ. ಆತನ ಹೆಸರಿಗೆ ಜಮೀನು ನೋಂದಣಿಯಾಗಿದೆ. ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಜತೆಗೆ, ಕೋರಮಂಗಲದಲ್ಲಿ 2ಕೋಟಿ ರೂ. ಮೌಲ್ಯದ ಫ್ಲ್ಯಾಟ್‌ ಖರೀದಿ ಮಾಡಿದ್ದು ಕೆಲತಿಂಗಳ ಹಿಂದೆ ಮಾರಾಟ ಮಾಡಿದ್ದಾನೆ.ವಂಚನೆಗಾಗಿ ಮೂರು ಬ್ಯಾಂಕ್‌ಗಳಲ್ಲಿ ಪ್ರತ್ಯೇಕವಾಗಿ ಮೂರು ಅಕೌಂಟ್‌  ತೆರೆದಿದ್ದಾನೆ. ಅವುಗಳನ್ನು ಪರಿಶೀಲಿಸಲಾಗಿದ್ದು ಹಣವಿಲ್ಲ. ಬ್ಯಾಂಕ್‌ ಆಫ್ ಗಯಾನದಲ್ಲಿ ಒಂದು ಅಕೌಂಟ್‌ ಹೊಂದಿರುವ ಮಾಹಿತಿ ಕಲೆಹಾಕಲಾಗುತ್ತಿದ್ದು ಅದರ ವಹಿವಾಟು ಸ್ಥಗಿತಗೊಳಿಸಲು ಕ್ರಮ ವಹಿಸಲಾಗಿದೆ.

ವಂಚನೆ ಹೇಗೆ?
2011ರಿಂದ “ನಾರ್ಥ್ ಅಮೆರಿಕನ್‌ ಎಜುಕೇಶನ್‌ ಸೆಂಟರ್‌’, ಡಾಕ್ಟರ್‌ ವರ್ಡ್‌ ಹಾಗೂ ಯೂಕಾನ್‌ ಎಜುಕೇಷನ್‌ ಹೆಸರುಗಳಲ್ಲಿ ಎಚ್‌ಎಸ್‌ಆರ್‌ ಲೇಔಟ್‌, ಜಯನಗರ, ಆಡುಗೋಡಿಯಲ್ಲಿ ಕನ್ಸಲ್ಟೆನ್ಸಿ ಹೆಸರಿನಲ್ಲಿ ಜಾಹೀರಾತು ನೀಡುತ್ತಿದ್ದರು. 

ಜತೆಗೆ, ಪ್ರತಿವರ್ಷ ಎಂಬಿಬಿಎಸ್‌ ಸೀಟ್‌ಗಳಿಗೆ ಸಿಇಟಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ತೆರಳಯವ ಟ್ಯೂಶನ್‌ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದರು. ಬಳಿಕ ಅವರಿಗೆ ಕರೆ ಮಾಡಿ, ವಾಷಿಂಗ್ಟನ್‌ ಯೂನಿವರ್ಸಿಟಿ ಆಫ್ ಬಾಬೋìಡಾಸ್‌, ಗಯಾನ, ಅಲೇಕ್ಸಾಂಡರ್‌ ಯೂನಿವರ್ಸಿಟಿ ಆಫ್ ಅಮೆರಿಕ, ತಿಯಾನ್‌ ಜಿನ್‌ ಮೆಡಿಕಲ್‌ ಕಾಲೇಜಗಳಲ್ಲಿ ಸೀಟು ಕೊಡಿಸಿ ಉಳಿದುಕೊಳ್ಳಲು ವ್ಯವಸ್ಥೆ, ಟ್ಯೂಶನ್‌ ಫಿಸ್‌ ಸೇರಿ 30ರಿಂದ 40 ಲಕ್ಷ ರೂ. ಮಾತ್ರ ಎಂದು ನಂಬಿಸಿ ಹಣ ಕಟ್ಟಿಸಿಕೊಳ್ಳುತ್ತಿದ್ದರು.

ವಿದೇಶಕ್ಕೆ ಹೋದ ವಿದ್ಯಾರ್ಥಿಗಳಿಗೆ ಶಾಕ್‌!
ಹಣ ಕಟ್ಟಿಸಿಕೊಂಡ ಬಳಿಕ ಅಮೆರಿಕಾಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದ ಏಜೆನ್ಸಿಯ ಸಿಬ್ಬಂದಿ ಹೋಟೆಲ್‌ವೊಂದರಲ್ಲಿ ವಿದ್ಯಾರ್ಥಿಗಳಿಗೆ ರೂಂ ಬುಕ್‌ ಮಾಡಿಕೊಟ್ಟು ಹಲವು ಕುಂಟು ನೆಪಗಳನ್ನು ಹೇಳಿ ಎರಡು ಮೂರು ತಿಂಗಳು ಕಾಲೇಜಿಗೆ ಅಡ್ಮಿಶನ್‌ ಮಾಡಿಸುತ್ತಿರಲಿಲ್ಲ. ಅಷ್ಟರಲ್ಲಿ ತಾವು ಮೋಸ ಹೋಗಿರುವುದು ಖಚಿತಪಡಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಪೋಷಕರಿಗೆ ಕರೆ ಮಾಡಿ ವಾಪಾಸ್‌ ಬಂದು ಬಿಡುತ್ತಿದ್ದರು.

ವಿಶೇಷ ಎಂದರೆ ವಾಪಾಸ್‌ ಬರುವ  ಕೆಲವು ವಿದ್ಯಾರ್ಥಿಗಳಿಗೆ ಹಣ ವಾಪಾಸ್‌ ಕೊಟ್ಟು ಅವರನ್ನು ತಮ್ಮ ತಂಡದ ಜತೆಗೆ ಸೇರಿಸಿಕೊಳ್ಳುತ್ತಿದ್ದರು. ಅವರಿಂದಲೇ  ಮೆಡಿಕಲ್‌ ಸೀಟು ಬಯಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುವಂತೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸ್‌ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ನೈರೋಬಿ ದ್ವೀಪರಾಷ್ಟ್ರದಲ್ಲಿ ವಾಸ!
ಆರೋಪಿ ವೆಂಕಟ್‌ ಕಳೆದ ಎರಡು ವರ್ಷಗಳ ಹಿಂದೆಯೇ ನೈರೋಬಿಯಾ ದ್ವೀಪ ರಾಷ್ಟ್ರಕ್ಕೆ ಪತ್ನಿ ಹಾಗೂ ಕುಟುಂಬದ ಜತೆ ತೆರಳಿ ವಾಸಿಸುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ ಗೊತ್ತಾಗಿದೆ. ಕನ್ಸಲ್ಟೆನ್ಸಿಯ ಸಿಬ್ಬಂದಿಯಿಂದಲೇ  ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ಹಣ ಕಟ್ಟಿಸಿಕೊಂಡು ತನ್ನ ಅಕೌಂಟ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆತ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಪಾಸ್‌ಪೋರ್ಟ್‌ ಅಧಿಕಾರಿಗಳಿಂದ ಮಾಹಿತಿ ಕೋರಿದ್ದೇವೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next