Advertisement

ಹಳ್ಳಿಗಳಿಗೂ ತಲುಪಿದ ವೈದ್ಯಕೀಯ ಸೌಲಭ್ಯ 

11:51 PM Aug 25, 2021 | Team Udayavani |

ಬೆಂಗಳೂರು: ಜಾಗತಿಕ ಮಹಾಮಾರಿ ಬಹುತೇಕ ರೀತಿಗಳಲ್ಲಿ ರಾಜ್ಯಕ್ಕೆ ಶಾಪ ನಿಜ. ಆದರೆ ಮತ್ತೂಂದು ನಿಟ್ಟಿನಲ್ಲಿ ಹೇಳುವುದಾದರೆ ಇದು ತಕ್ಕಮಟ್ಟಿಗೆ ವರವೂ ಆಗಿದೆ. ಹೇಗೆಂದರೆ ಸಾಕಷ್ಟು ಪ್ರಮಾಣದಲ್ಲಿ ವೈದ್ಯಕೀಯ ಸೌಲಭ್ಯಗಳು ಹೆಚ್ಚಳವಾಗಿರುವುದು.

Advertisement

ಐಸಿಯು, ವೆಂಟಿಲೇಟರ್‌ ಸೌಲಭ್ಯಗಳು ದೂರದ ಮಾತು. ಥರ್ಮಲ್‌ ಸ್ಕ್ಯಾನರ್‌ ಅನ್ನು ಕೂಡ ಕಾಣದ ಎಷ್ಟೋ ಸರಕಾರಿ ಆರೋಗ್ಯ ಕೇಂದ್ರಗಳು ರಾಜ್ಯಲ್ಲಿದ್ದವು. ಈ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಗಳಿಗಾಗಿ ಗ್ರಾಮೀಣ ಭಾಗದ ಜನ ದೂರದ ನಗರಗಳಿಗೆ ದೌಡಾಯಿಸುವ ಅನಿವಾರ್ಯತೆ ಇತ್ತು. ಆದರೆ ಈಗ ಚಿತ್ರಣವೇ ಬದಲಾಗಿದೆ. ಐಸಿಯುಗಳು, ವೆಂಟಿಲೇಟರ್‌ಗಳು, ಆಮ್ಲಜನಕ ಸಿಲಿಂಡರ್‌ಗಳು, ಮಕ್ಕಳ ವಿಶೇಷ ಚಿಕಿತ್ಸಾ ವಿಭಾಗಗಳು ಮನೆ ಬಾಗಿಲಿಗೇ ಬಂದಿವೆ!

ಇದು ಉದಯವಾಣಿ ರಾಜ್ಯಾದ್ಯಂತ ವಿವಿಧ ಹಂತಗಳ ಆಸ್ಪತ್ರೆಗಳ ಅವಲೋಕನ ನಡೆಸಿದಾಗ ಕಂಡು ಬಂದ ಧನಾತ್ಮಕ ಅಂಶ!

ಸದ್ಯ ಎರಡನೇ ಅಲೆ ಅಂತ್ಯದಲ್ಲಿದ್ದು, ಮೂರನೇ ಅಲೆಯೂ ಬರುವ ಬಗ್ಗೆ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಯಾವಾಗ ಬರಲಿದೆ ಎಂದು ಖಚಿತವಾಗಿ ಹೇಳದಿದ್ದರೂ ಸೆಪ್ಟಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಬರಬಹುದು ಎಂಬ ಮಾತುಗಳಿವೆ. ಎರಡನೇ ಅಲೆ ಕಲಿಸಿದ ಪಾಠ ಮತ್ತು ಮೂರನೇ ಅಲೆಯನ್ನು ಎದುರಿಸುವ ಸಲುವಾಗಿಯೇ ರಾಜ್ಯದಲ್ಲಿ ವೈದ್ಯಕೀಯ ವ್ಯವಸ್ಥೆಯನ್ನೂ ಉತ್ತಮಗೊಳಿಸಲಾಗಿದೆ.

ಹಿಂದಿನ ಆರೋಗ್ಯ ವ್ಯವಸ್ಥೆಯ ಪ್ರಗತಿಗೆ ಹೋಲಿಸಿದರೆ, ಮುಂದಿನ ಒಂದು ದಶಕದಲ್ಲಿ ಆಗಬೇಕಿದ್ದ ಅಭಿವೃದ್ಧಿಯು ಒಂದೂವರೆ ವರ್ಷದಲ್ಲಿ ಆಗಿದೆ. ಇದು ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲಿಕ್ಕೂ ಅನುಕೂಲವಾಗಿದೆ. ಅಷ್ಟೇ ಅಲ್ಲ, ಭವಿಷ್ಯದ ಆರೋಗ್ಯ ಸುಧಾರಣೆಗೆ ಇದು ದೊಡ್ಡ ಕೊಡುಗೆ ಆಗಲಿದೆ ಎಂದು ತಜ್ಞರು ಹಾಗೂ ವೈದ್ಯರು ವಿಶ್ಲೇಷಿಸುತ್ತಾರೆ.

Advertisement

640 ಕೋಟಿ ರೂ. ವೆಚ್ಚದ ಅಭಿವೃದ್ಧಿ:

ಕಳೆದ ಒಂದೂವರೆ ವರ್ಷದಲ್ಲಿ ಆಸ್ಪತ್ರೆ ಮೂಲಸೌಕರ್ಯಕ್ಕಾಗಿಯೇ ಒಟ್ಟಾರೆ 640 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಪೈಕಿ 73.5 ಕೋ. ರೂ. ವೆಚ್ಚದಲ್ಲಿ 19 ಜಿಲ್ಲಾಸ್ಪತ್ರೆ, ಜನರಲ್‌ ಆಸ್ಪತ್ರೆಗಳು, 566.7 ಕೋಟಿ ರೂ. ವೆಚ್ಚದಲ್ಲಿ 146 ತಾ| ಆಸ್ಪತ್ರೆಗಳ ಮೂಲ ಸೌಕರ್ಯ ಹೆಚ್ಚಿಸಲಾಗಿದೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಕಾಲೇಜು ವ್ಯಾಪ್ತಿ ಯಲ್ಲಿ ವಿವಿಧ ಹಂತಗಳ ಸರಕಾರಿ ಆಸ್ಪತ್ರೆಗಳಲ್ಲಿ 22 ಸಾವಿರ ಆಕ್ಸಿಜನ್‌ ಹಾಸಿಗೆಗಳು ಸೇರ್ಪಡೆಯಾಗಿದ್ದು, ಅಲ್ಲದೆ ಆಕ್ಸಿಜನ್‌ ಸಂಗ್ರಹಣ ಸಾಮರ್ಥ್ಯವು 408 ಮೆಟ್ರಿಕ್‌ ಟನ್‌ ಹೆಚ್ಚಾಗಿದ್ದು, ವೈದ್ಯಕೀಯ ಕಾಲೇಜಿನಲ್ಲಿ 292 ಮೆಟ್ರಿಕ್‌ ಟನ್‌ನಿಂದ 488ಕ್ಕೆ, ಸರಕಾರಿ ಆಸ್ಪತ್ರೆಗಳಲ್ಲಿ  28 ಮೆಟ್ರಿಕ್‌ ಟನ್‌ನಿಂದ 240 ಟನ್‌ಗೆ ಹೆಚ್ಚಳವಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್‌ ಉತ್ಪಾದನ ಘಟಕಗಳು ಕಾರ್ಯಾರಂಭಿಸಿವೆ.

ಸಮುದಾಯ ಆ. ಕೇಂದ್ರ :

200 ಸಮುದಾಯ ಆಸ್ಪತ್ರೆಗಳು ಆಕ್ಸಿಜನ್‌ ಪೈಪ್‌ಲೈನ್‌ ಅಳವಡಿಸಿದ್ದು, ಪ್ರತಿ ಆಸ್ಪತ್ರೆಯಲ್ಲಿ 30 ಆಕ್ಸಿಜನ್‌ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ  6,050 ಆಕ್ಸಿಜನ್‌ ಹಾಸಿಗೆಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಳವಡಿಸಲಾಗಿದೆ.

ಪ್ರಾ. ಆರೋಗ್ಯ ಕೇಂದ್ರ :

ಜಂಬೋ ಆಕ್ಸಿಜನ್‌ ಸಿಲಿಂಡರ್‌, ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ಗಳು, ಒಳರೋಗಿಗಳ ಆರು ಹಾಸಿಗೆಗಳ ಅಳವಡಿಕೆ. ವೈದ್ಯರ ನೇಮಕ 450 ತಜ್ಞ ವೈದ್ಯರು, 810 ಜನರಲ್‌ ಡ್ಯೂ ಟಿ ವೈದ್ಯರು.

ಜಿಲ್ಲಾಸ್ಪತ್ರೆಗಳಲ್ಲಿ  :

 ಮೊದಲು         / ಪ್ರಸ್ತುತ 

ಐಸಿಯು  ಹಾಸಿಗೆಗಳು 10           50

ಮಕ್ಕಳ ಐಸಿಯು ಹಾಸಿಗೆಗಳು 6              20

ಎಚ್‌ಡಿಯು ಹಾಸಿಗೆಗಳು          10           70

ಆಕ್ಸಿಜನ್‌ ಹಾಸಿಗೆಗಳು 50           500

ಆಕ್ಸಿಜನ್‌ ಘಟಕ ಸಾಮರ್ಥ್ಯ – 13 ಕೆಎಲ್‌ ಹೆಚ್ಚಳ

ತಾಲೂಕು ಆಸ್ಪತ್ರೆ :

ಮೊದಲು/ಪ್ರಸ್ತುತ

ಐಸಿಯು/ಎಚ್‌ಡಿಯು  ಹಾಸಿಗೆಗಳು    6              25

ಮಕ್ಕಳ ಐಸಿಯು;           0              2

ಆಕ್ಸಿಜನ್‌ ಹಾಸಿಗೆಗಳು 50           100

ಆಕ್ಸಿಜನ್‌ ಘಟಕ ಸಾಮರ್ಥ್ಯ – 6 ಕೆಎಲ್‌ ಹೆಚ್ಚಳ

ಕೊರೊನಾ ಹಿನ್ನೆಲೆಯಲ್ಲಿ ಎದುರಾದ ಸವಾಲುಗಳನ್ನು ಅವಕಾಶಗಳನ್ನಾಗಿ ತೆಗೆದುಕೊಂಡು ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸರಕಾರಿ ಆಸ್ಪತ್ರೆಗಳ ಮೂಲ ಸೌಲಭ್ಯಗಳನ್ನು ಗಮನಾರ್ಹ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಜನತೆಗೆ ಇದರ ಲಾಭ ದೊರಕಲಿದೆ.ಡಾ| ಕೆ. ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ಗಂಭೀರ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕು ಎಂಬ ಮನಃಸ್ಥಿತಿ ಬದಲಾಗಿದ್ದು, ಸರಕಾರಿ ಆಸ್ಪತ್ರೆಗಳು ಸಾಕಷ್ಟು ಉನ್ನತೀಕರಣಗೊಂಡಿವೆ. ಟೆಲಿಐಸಿಯು ಅನಂತರ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಮುಂದಿನ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾಸಿಗೆ ಸಂಖ್ಯೆ 10ಕ್ಕೆ ಹೆಚ್ಚಿಸಿ, ಮೂರು ಪಾಳಿಯ ವೈದ್ಯರನ್ನು ನೇಮಿಸಲಾಗುತ್ತಿದೆ. ವೈದ್ಯರ ವಸತಿ ಗೃಹಗಳ ವ್ಯವಸ್ಥೆ ಮಾಡಲಾಗತ್ತಿದೆ.ಡಾ| ತ್ರಿಲೋಕ್‌ಚಂದ್ರ, ಆಯುಕ್ತರು, ಆರೋಗ್ಯ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next