Advertisement

ವೈದ್ಯಕೀಯ ಸೌಲಭ್ಯ ಸದುಪಯೋಗವಾಗಲಿ

06:20 AM Mar 06, 2019 | |

ಬೆಂಗಳೂರು: ಆರೋಗ್ಯ ಇಲಾಖೆಯ ಸೌಲಭ್ಯಗಳಿಂದ ಯಾವೊಬ್ಬ ನಾಗರಿಕನೂ ವಂಚಿತನಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದೊಂದಿಗೆ ಪ್ರತಿಷ್ಠೆಗೆ ನಿಲ್ಲದೇ ಆರೋಗ್ಯ ಕರ್ನಾಟಕವನ್ನು ಆಯುಷ್ಮಾನ್‌ ಭಾರತ್‌ ಯೋಜನೆಯೊಂದಿದೆ ಸಮ್ಮಿಲನ ಮಾಡಲಾಗಿದ್ದು, ಸಾರ್ವಜನಿಕರು ಈ ಜನಪರ ಯೋಜನೆಯ ಅಗತ್ಯ ಮಾಹಿತಿ ಪಡೆದು ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಶಿವಾನಂದ್‌ ಎಸ್‌ ಪಾಟೀಲ್‌ ತಿಳಿಸಿದರು.

Advertisement

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಇಂದಿರಾನಗರದ ಸರ್‌.ಸಿ.ವಿ.ರಾಮನ್‌ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ “ಬೃಹತ್‌ ಉಚಿತ ಆರೋಗ್ಯ ಮೇಳ’ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಜಾರಿಗೆ ತಂದಾಗ ಕರ್ನಾಟಕದಲ್ಲಿ 62 ಲಕ್ಷ ಕುಟುಂಬಗಳಿಗೆ ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟು ಯೋಜನೆಯು ಸೀಮಿತ ವ್ಯಾಪ್ತಿ ಪಡೆದಿತ್ತು.

ಈ ವೇಳೆ ರಾಜ್ಯ ಸರ್ಕಾರ ರಾಜ್ಯದ ಯಾವೊಬ್ಬ ನಾಗರಿಕರು ಈ ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ಆಯೋಗ್ಯ ಕರ್ನಾಟಕವನ್ನು ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌ನೊಂದಿಗೆ ಸಮ್ಮಿಲನ ಮಾಡಿದ್ದೇವೆ. ಹೀಗಾಗಿ, ಪ್ರಸ್ತುತ ರಾಜ್ಯದ 1.05 ಕೋಟಿ ಕುಟುಂಬಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತಿವೆ. ಬಿಪಿಎಲ್‌ ಕುಟುಂಬಗಳಿಗೆ 5 ಲಕ್ಷದ ರೂ.ವರೆಗೂ ಚಿಕಿತ್ಸಾ ಸೌಲಭ್ಯವಿದ್ದು, ಇದನ್ನು ರಾಜ್ಯದ ಜನ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು. 

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ಬಹುಪಾಲು ಶಿಕ್ಷಣ ಹಾಗೂ ಆರೋಗ್ಯ ಸಮಸ್ಯೆ ವಿಚಾರಗಳಿಗೆ ಸಾಕಷ್ಟು ಜನ ಜನಪ್ರತಿನಿಧಿಗಳ ಸಹಾಯ ಕೋರಿ ಬರುತ್ತಾರೆ. ಆದರೆ, ಸರ್ಕಾರದ ಯೋಜನೆಗಳ ಮೂಲಕವೇ 5 ಲಕ್ಷ ರೂ.ವರೆಗೂ ಉಚಿತ ಆರೋಗ್ಯ ಸೇವಾ ಸೌಲಭ್ಯಗಳು ಲಭ್ಯವಿದ್ದು, ಅವುಗಳ ಮಾಹಿತಿ ಕೊರತೆ ಇದೆ. ಹೀಗಾಗಿ, ಇಂತಹ ಮೇಳಗಳನ್ನು ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. 

ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಮೇಳದಲ್ಲಿ ಮಾಹಿತಿ ಜೊತೆಗೆ ಚಿಕಿತ್ಸೆ ಪಡೆದರು. ಸಿ.ವಿ.ರಾಮನ್‌ನಗರ ಶಾಸಕ ಸ್‌.ರಘು, ಮಲ್ಲೇಶ್ವರ ಶಾಸಕ ಡಾ.ಅಶ್ವತ್ಥ ನಾರಾಯಣ್‌, ಬೆಂಗಳೂರು ನಗರ ಜಿಲ್ಲೆ ಡಿಎಚ್‌ಒ ಡಾ.ಕೆ.ಎಸ್‌.ಪ್ರಕಾಶ್‌ ಉಪಸ್ಥಿತರಿದ್ದರು.

Advertisement

ಶೇ.51 ಅನುದಾನ ಸರ್ಕಾರಿ ಆಸ್ಪತ್ರೆಗೆ: ಸರ್ಕಾರದ ಯೋಜನೆಯಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಈ ಹಿಂದೆ ಹೆಚ್ಚಾಗಿತ್ತು. ಹೀಗಾಗಿ, ಯೋಜನೆಯಡಿ ಪಡೆದ ಚಿಕಿತ್ಸೆಗೆ ಹಣ ನೀಡುವ ಸುವರ್ಣ ಆರೋಗ್ಯ ಕರ್ನಾಟಕ ಟ್ರಸ್ಟ್‌ನಿಂದ ಶೇ.70ರಿಂದ 80ರಷ್ಟು ಅನುದಾನವನ್ನು ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿತ್ತು. ಆದರೆ, ಕಳೆದ 7 ತಿಂಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಮೇಲ್ದರ್ಜೆಯ ಚಿಕಿತ್ಸೆ ಪಡೆಯುತ್ತಿವರ ಸಂಖ್ಯೆ ಹೆಚ್ಚಾಗಿ ಕಳೆದ ಏಳು ತಿಂಗಳಿಂದ ಶೇ.51 ರಷ್ಟು ಅನುದಾನ ನಮ್ಮ ಸರ್ಕಾರಿ ಆಸ್ಪತ್ರೆಗೆ ಬಂದಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಯೋಜನೆ ಹಣ ಹಂಚಿಕೆಗೆ ಕ್ರಮ: ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿನ ಸೇವೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಆರೋಗ್ಯ ಕರ್ನಾಟಕ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಚಿಕಿತ್ಸೆಗಳಿಂದ ಸರ್ಕಾರಿ ಆಸ್ಪತ್ರೆಗೆ ಬರುವ ಹಣದಲ್ಲಿ ಶೇ.50 ರಷ್ಟು ಆಸ್ಪತ್ರೆ ಅಭಿವೃದ್ಧಿಗೆ, ಶೇ.30 ರಷ್ಟು ವೈದ್ಯರು ಸೇರಿ ಸಿಬ್ಬಂದಿಗೆ ಹಂಚಿಕೆ ಮಾಡಿ, ಉಳಿದ ಶೇ.20ರಷ್ಟು ಹಣವನ್ನು ರಾಜ್ಯ ಬಜೆಟ್‌ನಲ್ಲಿ ಬಳಸಿಕೊಳ್ಳುವಂತೆ ನಿಯಮವನ್ನು ಜಾರಿಗೊಳಿಸಲು ಚಿಂತನೆ ನಡೆದಿದ್ದು, ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next