Advertisement

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಿಕೆಶಿ 

06:50 AM Jun 12, 2018 | Team Udayavani |

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ಸೋಮವಾರ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿ ಇಲಾಖೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದರು.

Advertisement

ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ಕ್ಯಾಂಪಸ್‌ ಸ್ಥಳಾಂತರ,ವೈದ್ಯಕೀಯ ಸೀಟುಗಳ ಶುಲ್ಕ ಹೆಚ್ಚಳ, ಕೊಪ್ಪಳದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಿತಿಗತಿ ಸೇರಿ ಅನೇಕ ವಿಷಯಗಳ ಕುರಿತು ಮಾಹಿತಿ ಪಡೆದರು.

ಜಯನಗರದ ಟಿ ಬ್ಲಾಕ್‌ನಲ್ಲಿ ಇರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್‌
ಅನ್ನು ರಾಮನಗರ ಜಿಲ್ಲೆಗೆ ಸ್ಥಳಾಂತರಿಸುವ ಪ್ರಸ್ತಾವ 2008 ರಿಂದಲೇ ಜಾರಿಯಲ್ಲಿದೆ. 2018ರ ಜನವರಿಯಲ್ಲಿ ಸರ್ಕಾರ ಈ ಸಂಬಂಧ ಸೂಕ್ತ ನಿರ್ಧಾರ ತೆಗೆದುಕೊಂಡು ಸ್ಥಳಾಂತರಿಸುವಂತೆ ವಿವಿಯ ಅಧಿಕಾರಿಗಳಿಗೆ ಆದೇಶಿಸಿತ್ತು. ಆದರೆ,ಸ್ಥಳಾಂತರ ಕಾರ್ಯ ನಡೆದಿಲ್ಲ. ವಿವಿಯ ಕ್ಯಾಂಪಸ್‌ ಸ್ಥಳಾಂತರ ಮಾಡಬಾರದು ಎಂದು ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ಮಾಡಿದ್ದರು.

ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು, ವಿಶ್ವವಿದ್ಯಾಲಯದ ಕ್ಯಾಂಪಸ್‌ ಸ್ಥಳಾಂತರಕ್ಕೆ ಸಚಿವರು ಸಕಾರಾ ತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಂಬಂಧ ಕಡತಗಳನ್ನು ಆದಷ್ಟು ಬೇಗ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ವೈದ್ಯಕೀಯ ಸೀಟುಗಳ ಶುಲ್ಕ ಹೆಚ್ಚಳಕ್ಕೆ ಪ್ರತಿ ವರ್ಷ ಖಾಸಗಿ ಕಾಲೇಜುಗಳಿಂದ ಪ್ರಸ್ತಾವನೆ ಬರುತ್ತದೆ. ಈ ಸಂಬಂಧ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಮತ್ತು ಇಲಾಖೆ ಅಧಿಕಾರಿಗಳ ಸಭೆ ಕರೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.

Advertisement

ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಮೂಲ ಸೌಕರ್ಯ ಕೊರತೆಯಿಂದ ಕೊಪ್ಪಳದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 150 ಸೀಟು ಈ ವರ್ಷ ಖೋತವಾಗಿದೆ. ಈ ಬಗ್ಗೆಯು ಸಚಿವರು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ವೈದ್ಯಕೀಯ ಶಿಕ್ಷಣದ ಪ್ರಸಕ್ತ ವಿದ್ಯಾಮಾನ, ತುರ್ತು ಆಗಬೇಕಿರುವ ಕೆಲಸ, ಹೊಸ ಮಾರ್ಪಾಡು ಇತ್ಯಾದಿ
ಹಲವು ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next