ಹೊಸದಿಲ್ಲಿ: ಐಐಟಿಗಳಲ್ಲಿ ವೃತ್ತಿಪರ ಶಿಕ್ಷಣದ ಜತೆಗೇ ವೈದ್ಯಕೀಯ ಶಿಕ್ಷಣದ ಕಲಿಕೆ…ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಕರಾಗಲು ತರಬೇತಿ…ಒಂದೇ ಬಾರಿಗೆ ಎರಡು ಕೋರ್ಸ್‌ಗಳಲ್ಲಿ ಕಲಿಕೆ… ಇವು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ವು ಎಲ್ಲ ವಿವಿಗಳಸಹಿತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಿದ ಮಾರ್ಗಸೂಚಿಗಳು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿ ಉನ್ನತ ಶಿಕ್ಷಣದಲ್ಲಿ ಗಮನಾರ್ಹ ಬದಲಾವಣೆಗೆ ನಿರ್ಧ ರಿಸಿರುವ ಯುಜಿಸಿ, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಹುಶಿಸ್ತೀಯ ಶಿಕ್ಷಣ ಸಂಸ್ಥೆಗಳನ್ನಾಗಿಸಲು ಮುಂದಾಗಿದೆ.
ಏಕಕಾಲಕ್ಕೆ 2 ಪದವಿ ಹಾಗೂ ಆನ್‌ಲೈನ್ ಮೂಲಕ ಶಿಕ್ಷಣ ನೀಡುವ ಹೈಬ್ರಿಡ್‌ತನ ಅಳವಡಿಸಿಕೊಳ್ಳಲು ಸೂಚಿಸಿದೆ. ಬೃಹತ್ ಬಹುಶಿಸ್ತೀಯ ವಿ.ವಿ.ಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಕ್ಲಸ್ಟರ್‌ಗಳಾಗಿಸಬಹುದಾಗಿದೆ. ಈ ವ್ಯವಸ್ಥೆಯಲ್ಲಿ ಬಹುಶಿಸ್ತೀಯ ಸಂಶೋಧನ ವಿ.ವಿ.ಗಳು (ಆರ್‌ಯುಗಳು), ಬಹುಶಿಸ್ತೀಯ ಶಿಕ್ಷಕ ವಿ.ವಿ. ಗಳು(ಟಿಯುಗಳು), ಪದವಿ ನೀಡುವ ಬಹು ಶಿಸ್ತೀಯ ಸ್ವಾಯತ್ತಕಾಲೇಜುಗಳು(ವಿ.ವಿ.ಗಳಿಗಿಂತ ಚಿಕ್ಕವು) ಇರಲಿವೆ.
ಒಬ್ಬ ವಿದ್ಯಾರ್ಥಿ ಏಕಕಾಲದಲ್ಲಿ ಎರಡು ಕೋರ್ಸ್ ಗಳನ್ನು ಪಡೆಯಬಹುದಾಗಿದೆ. ವಿಶೇಷವೆಂದರೆ, ಯಾವ ಕೋರ್ಸ್‌ಗೆ ಭೌತಿಕವಾಗಿ ಹಾಜರಾಗಬೇಕು ಎಂಬುದು ಆತನ ಇಚ್ಛೆ. ಎರಡು ಡಿಗ್ರಿಗಳಿಗೂ ಯುಜಿಸಿ ಮಾನ್ಯತೆ ಇರುತ್ತದೆ. ಈಗಾಗಲೇ ಸೇರಿದ ಕೋರ್ಸ್‌ಗಳಿಂದ ಯಾವಾಗ ಬೇಕಾದರೂ ಹೊರ ಹೋಗುವ ಹಾಗೂ ಸೇರಿಕೊಳ್ಳುವ ಅವಕಾಶ ಇದೆ. ಮ್ಯಾನೇಜ್‌ಮೆಂಟ್, ಶಿಕ್ಷಣ, ಕಾನೂನು ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗೆ ಈ ಸೌಲಭ್ಯ ಲಭ್ಯವಾಗಲಿದೆ. ಒಂದೇ ಪದವಿ ನೀಡುತ್ತಿರುವ ಕಾಲೇಜು ಗಳನ್ನು ಬೇರೆ ಮ್ಯಾನೇಜ್‌ಮೆಂಟ್ ಕಾಲೇಜುಗಳ ಜತೆಗೆ ವಿಲೀನ ಸಾಧ್ಯ.
ಇದರೊಂದಿಗೆ ಭಾಷೆ, ಸಾಹಿತ್ಯ, ಸಂಗೀತ, ತತ್ವಶಾಸ್ತ್ರ, ಇಂಡಾಲಜಿ, ಕಲೆ, ನೃತ್ಯ, ಶಿಕ್ಷಣ, ಗಣಿತಶಾಸ್ತ್ರ ಸೇರಿದಂತೆ ವಿವಿಧ ವಿಭಾಗಗಳನ್ನು ವಿ.ವಿ.ಗಳು ತೆರೆಯಬೇಕು. ಐಐಟಿಗಳಲ್ಲೂ 4 ವರ್ಷದ ಡಿಗ್ರಿಗಳನ್ನು, ಇತರ ಕಾಲೇಜುಗಳ ಸಹಯೋಗದಲ್ಲಿ ನೀಡಬಹುದು. ಅಂದರೆ ಸೈಕಾಲಜಿ, ತತ್ವಶಾಸ್ತ್ರ, ಸೋಶಿಯಾಲಜಿ, ನ್ಯೂರೋಸೈನ್ಸ್, ಇತಿಹಾಸ, ವಿಜ್ಞಾನವನ್ನೂ ಕಲಿಸಬಹುದು.