Advertisement

ರಾಜ್ಯದ ಇನ್ನೂ 8 ಜಿಲ್ಲೆಗಳಲ್ಲಿ  ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕಿದೆ: ಸಿಎಂ ಬೊಮ್ಮಾಯಿ

08:29 PM Oct 07, 2021 | Team Udayavani |

ಚಾಮರಾಜನಗರ: ರಾಜ್ಯದ ಇನ್ನೂ ಎಂಟು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕಿದೆ. ಇನ್ನು ಒಂದೂವರೆ ವರ್ಷಗಳಲ್ಲಿ ಆ ಎಲ್ಲ ಜಿಲ್ಲೆಗಳಿಗೆ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಗುರುವಾರ ನಗರದ ಯಡಬೆಟ್ಟ ಬಳಿಯ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ 450 ಹಾಸಿಗೆಗಳ ನೂತನ ಬೋಧನಾ ಆಸ್ಪತ್ರೆ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರಕಬೇಕು. ವೈದ್ಯ ಮತ್ತು ರೋಗಿ ಅನುಪಾತ, ರೋಗಿ ಮತ್ತು ಹಾಸಿಗೆ ಅನುಪಾತ ಬಹಳ ಕಡಿಮೆ ಇದೆ. ಇದನ್ನು ಸರಿದೂಗಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕೆಂಬುದು ಸರ್ಕಾರದ ಬದ್ಧತೆಯಾಗಿದೆ. ಇದಕ್ಕನುಗುಣವಾಗಿ ಇನ್ನುಳಿದ 8 ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದರು.

ರಾಷ್ಟ್ರಪತಿಗಳು ಚಾಮರಾಜನಗರ ವೈದ್ಯಕೀಯ ಆಸ್ಪತ್ರೆ ಉದ್ಘಾಟನೆಗೆ ಬಂದಿರುವುದು ನಮ್ಮ ಪುಣ್ಯಭಾಗ್ಯ. ಅವರ ಅಮೃತಹಸ್ತದಿಂದ ಉದ್ಘಾಟನೆ ಮಾಡಿರುವ ಈ  450 ಹಾಸಿಗೆಗಳ ಆಸ್ಪತ್ರೆ ಬಡವರ ಸೇವೆ ಮಾಡುವ ಕೇಂದ್ರವಾಗಲಿ ಎಂದು ನಾನು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ನಮ್ಮ ಸರ್ಕಾರ ಪ್ರಾದೇಶಿಕ ಅಸಮಾನತೆ ತೊಡೆದು ಹಾಕಲು ಯತ್ನಿಸುತ್ತದೆ. ಎಲ್ಲ ಜಿಲ್ಲೆಗಳು ಸಹ ಮುಂದೆ ಬರಬೇಕು.  ಚಾಮರಾಜನಗರ ಜಿಲ್ಲೆ ಪ್ರಾಕೃತಿಕ ಸಾಂಸ್ಕೃತಿಕ ಸಮೃದ್ಧತೆಯಿಂದ ಕೂಡಿರುವ ಜಿಲ್ಲೆಯಾದರೂ, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದೆ ಇದೆ. ಈ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಆರೋಗ್ಯ ಬಹಳ ಮುಖ್ಯ. ಆದರೆ ಅದನ್ನು ನಿರ್ಲಕ್ಷಿಸುತ್ತಿರುತ್ತೇವೆ. ಆರೋಗ್ಯ ಕಾಪಾಡಿಕೊಂಡವರು ಬದುಕಿನಲ್ಲಿ ಬದುಕಿನಲ್ಲಿ ಸಾಧನೆ ಮಾಡುತ್ತಾರೆ. ಆರೋಗ್ಯ ಕಾಪಾಡಿಕೊಳ್ಳದವರು ಸಾಧನೆ ಮಾಡಲಾಗುವುದಿಲ್ಲ. ಈ ಹೊಸ ಆಸ್ಪತ್ರೆ ಉತ್ತಮವಾದ ಆರೋಗ್ಯ ಸೇವೆಯನ್ನು ಜನರಿಗೆ ನೀಡಲಿ. ಇಲ್ಲಿ ಕಲಿತವರು ಯಶಸ್ವಿ ವೈದ್ಯರಾಗಿ, ನರ್ಸ್‌ಗಳಾಗಿ, ಪ್ಯಾರಾಮೆಡಿಕಲ್ ಸಿಬ್ಬಂದಿಯಾಗಿ ಹೊರಹೊಮ್ಮಲಿ ಎಂದು ಬೊಮ್ಮಾಯಿ ಹಾರೈಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next