ರಾಮನಗರ: ಡಾ.ಟಿ.ಎಚ್.ಆಂಜನಪ್ಪ ಮತ್ತು ತಮ್ಮ ನೇತೃತ್ವದ ತಂಡ ಒಕ್ಕಲಿಗರ ಸಂಘಕ್ಕೆ ಆಯ್ಕೆಯಾದರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೆಂಗಲ್ ಹನುಮಂತಯ್ಯನವರ ಹೆಸರಿನಲ್ಲೊಂದು ಮೆಡಿಕಲ್ ಕಾಲೇಜು ಸ್ಥಾಪಿಸುವು ದಾಗಿ ಕೃಷಿ ವಿವಿ ನಿವೃತ್ತ ಉಪಕುಲಪತಿ ಪ್ರೊ.ನಾರಾ ಯಣಗೌಡ ತಿಳಿಸಿದರು. ನಗರ ಹೊರವಲಯದ ಜಾನಪದ ಲೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಕ್ಕಲಿಗರ ಸಂಘವನ್ನು ಒಂದು ಶ್ರೇಷ್ಠ ಸಂಸ್ಥೆಯನ್ನಾಗಿ ಮಾಡಬೇಕಾಗಿದೆ.
ಇದರೊಟ್ಟಿಗೆ ಸಂಘದ ಚಟುವಟಿಕೆಗಳನ್ನು ಬೆಂಗಳೂರು ನಗರದಾಚೆಗೆ ವಿಸ್ತರಿಸಬೇಕಾಗಿದೆ.ಒಕ್ಕಲಿಗರ ಸಂಘ ಈಗಾಗಲೇ ಹಲವಾರು ವಿದ್ಯಾ ಸಂಸ್ಥೆ ನಡೆಸುತ್ತಿದೆ. ಭವಿಷ್ಯದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೂ ಪೂರಕ ವಾತಾವರಣ ಕಲ್ಪಿಸುವುದಾಗಿ ತಿಳಿಸಿದರು.
ಸಂಘ ಮುಳುಗುತ್ತಿದೆ: ಒಕ್ಕಲಿಗರ ಸಂಘ ಐತಿಹಾಸಿಕ ಸಂಘ. ಆದರೆ ಕಳೆದ 20 ವರ್ಷಗಳಲ್ಲಿ ಆದ ಬೆಳವಣಿ ಗೆ ನೋವು ತರಿಸಿದೆ. ಹಡುಗು ಮುಳುಗಿದಂತೆ ಸಂಘ ಮುಳುಗುತ್ತಿದೆ. ತಮ್ಮ ಮತ್ತು ಡಾ.ಆಂಜನಪ್ಪ ನೇತೃತ್ವದ ತಂಡದಲ್ಲಿ ವಿದ್ಯಾವಂತರು, ಸಾಧನೆ ತೋರಿದವರು, ಖ್ಯಾತಿವೆತ್ತರು ಸ್ಪರ್ಧಿಸಿದ್ದಾರೆ ಎಂದರು.
ಧರ್ಮ ಮುಖ್ಯ: ತಮ್ಮ ತಂಡ ಆಯ್ಕೆಯಾದರೆ ಸಂಘದ ಅನೇಕ ನ್ಯೂನತೆ ಸರಿಪಡಿಸಲಾಗುವುದು, ಈ ವಿಚಾರದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಘ ದಲ್ಲಿ ಜಾರಿಗೆ ತರುವುದಾಗಿಯೂ ತಿಳಿಸಿದರು.
ಆಡಳಿತಕ್ಕೆ ಆಯ್ಕೆಯಾದರೆ ಸಂಘದ ನ್ಯೂನತೆಗಳಿಗೆ ಕಾರಣರಾದ ಹಿಂದಿನ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಾರಾಯಣಗೌಡರು, ತಮಗೆ ಸಂಘದ ಅಭಿವೃದ್ಧಿ ಮುಖ್ಯ, ಕಾನೂನು ಕ್ರಮ ಆರಂಭಿಸದರೆ ಅಭಿವೃದ್ಧಿಯತ್ತ ಗಮನ ಹರಿಸಲು ಸಾಧ್ಯವಾಗುವು ದಿಲ್ಲ, ಕಾನೂನಿಗಿಂತ ಧರ್ಮ ಮುಖ್ಯ ಎಂದು ಪ್ರತಿಕ್ರಿಯಿಸಿದರು.
ಸಭ್ಯಸ್ಥರಿಗೆ ಮತ ಕೊಡಿ: ಡಾ.ಪುಟ್ಟೇಗೌಡ ಮಾತನಾಡಿ, ಸಭ್ಯಸ್ಥರಿಗೆ ಮತ ಕೊಡಿ. ಇ-ಟೆಂಡರ್ ವ್ಯವಸ್ಥೆ ಜಾರಿ ಮಾಡುವುದಾಗಿ ತಿಳಿಸಿದರು. ಅಲ್ಲದೇ, ಒಕ್ಕಲಿಗ ಸಮುದಾಯದ ಪ್ರಮುಖರನ್ನು ಒಳಗೊಂಡ ವಾಚ್ ಡಾಗ್ ಸಮಿತಿ ರಚಿಸುವುದಾಗಿ ತಿಳಿಸಿದರು.
ನುಂಗಣ್ಣರೊಂದಿಗೆ ರಾಜಿ ಇಲ್ಲ: ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಮಾತನಾಡಿ, ತಾವು ಸಂಘಕ್ಕೆ ಆಯ್ಕೆಯಾದರೆ ನುಂಗಣ್ಣರೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು. ಪೊರೆ ಕಳಚಿದ ಹಾವುಗಳು ಮತ್ತೂಮ್ಮೆ ಸಂಘದ ಒಳಗೆ ಬರಲು ಯತ್ನಿಸು ತ್ತಿವೆ ಎಂದು ಹಳೆ ನಿರ್ದೇಶಕರ ವಿರುದ್ಧ ಕುಟುಕಿದರು. ಚುನಾವಣೆಯಲ್ಲಿ ಸ್ಪರ್ಧಿಸಿರುವ ತಮ್ಮಣ್ಣ ಎ.ಪಿ. (ಅಬ್ಬೂರು), ಡಾ.ಭಾವನ ಆರ್.ಮಾತನಾಡಿದರು.