Advertisement

Mangoes: ಹಣ್ಣುಗಳ ರಾಜ ಮಾವು ಈ ಬಾರಿ ದುಬಾರಿ

02:54 PM May 04, 2024 | Team Udayavani |

ಚಿಕ್ಕಬಳ್ಳಾಪುರ: ಹಣ್ಣುಗಳ ರಾಜ ಮಾವು ಬೆಲೆ ಈ ಬಾರಿ ಮಾರುಕಟ್ಟೆಯಲ್ಲಿ ಗ್ರಾಹಕರ ಕೈ ಸುಡುವುದು ಗ್ಯಾರಂಟಿ. ತೀವ್ರ ಹವಾಮಾನ ವೈಪರೀತ್ಯದ ಪರಿಣಾಮ ಶೇ.70 ಮಾವಿನ ಫ‌ಸಲಿನ ಇಳುವರಿ ಕುಸಿತ ಕಂಡಿದ್ದು ಇದರ ಪರಿಣಾಮ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಗ್ರಾಹಕರ ಪಾಲಿಗೆ ದುಪ್ಪಟ್ಟು ಆಗಲಿದೆ.

Advertisement

ಏಷ್ಯಾ ಖಂಡದಲ್ಲಿಯೆ ಹೆಚ್ಚು ಮಾವು ಬೆಳೆಯುವ ಹೆಗ್ಗಳಿಕೆ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಇದೆ. ಅದರಲ್ಲೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಹಾಗೂ ಜಿಲ್ಲೆಯ ಚಿಂತಾಮಣಿ ತಾಲೂಕು ಹೆಚ್ಚು ಮಾವು ಬೆಳೆ ಪ್ರದೇಶ ಹೊಂದಿದ್ದು ಚಿಂತಾಮಣಿ ತಾಲೂಕು ಒಂದರಲ್ಲಿ ಸುಮಾರು 8 ಸಾವಿರ ಹೆಕ್ಟೇರ್‌ ಮಾವು ಬೆಳೆಯಲಾಗುತ್ತಿದೆ.

ಶೇ.30 ಮಾವು ಗ್ಯಾರಂಟಿ: ತೋಟಗಾರಿಕೆ ಇಲಾಖೆ ತಜ್ಞರ ಪ್ರಕಾರ ಈ ಬಾರಿ ಮಾರುಕಟ್ಟೆಗೆ ಕೇವಲ ಶೇ.30 ಮಾವಿನ ಫ‌ಸಲು ಮಾರುಕಟ್ಟೆಗೆ ಪ್ರವೇಶಿಲಿದೆ. ಜಿಲ್ಲೆಯಲ್ಲಿ 10,500 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಇದ್ದು ಪ್ರತಿ ಹೇಕ್ಟರ್‌ಗೆ ಸರಾಸರಿ 3 ರಿಂದ 4 ಟನ್‌ ಮಾವು ಸಿಗಬಹುದು. ಅದರ ಲೆಕ್ಕಾಚಾರದಂತೆ ಜಿಲ್ಲೆಯಲ್ಲಿ ಈ ಬಾರಿ 35 ರಿಂದ 40 ಸಾವಿರ ಟನ್‌ನಷ್ಟು ಮಾವು ಮಾರುಕಟ್ಟೆಗೆ ಬರಲಿದೆ. ಕಳೆದ ವರ್ಷವೂ ವ್ಯಾಪಕ ಮಳೆಯಿಂದ ಮಾವು ರೈತನ ಕೈ ಹಿಡಿಯಲಿಲ್ಲ. ಬಾರಿ ಉಷ್ಣಾಂಶ ತೀವ್ರತೆ ಹಾಗೂ ಬರದಿಂದಾಗಿ ಶೇ.70 ಮಾವಿನ ಬೆಳೆಯನ್ನು ರೈತರು ಕಳೆದುಕೊಳ್ಳುವಂತಾಗಿದೆ. ತಾಪಮಾಣ ಹೆಚ್ಚಳದಿಂದ ಇತ್ತೀಚಿಗೆ ಕಾಣಿಸಿಕೊಂಡಿರುವ ಬಿಸಿಗಾಳಿ ಅಂತೂ ಮಾವು ಬೆಳೆಗಾರರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದು ಕೊಯ್ಲಿಗೆ ಬಂದಿರುವ ಮಾವು ಬೆಳೆಗಾರರ ಕಣ್ಣು ಮುಂದೆ ನೆಲಕ್ಕೆ ಉದುರುತ್ತಿರುವುದು ಮಾವು ಬೆಳೆಗಾರರು ಪರಿಸ್ಥಿತಿ ನಿಜಕ್ಕೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ವಾಣಿಜ್ಯ ಬೆಳೆಯಾಗಿ ಮಾವು: ಯಾವುದೇ ಶಾಶ್ವತ ನೀರಾವರಿ ಇಲ್ಲದ ಬಯಲುಸೀಮೆ ಜಿಲ್ಲೆಯ ರೈತರು ಮಾವನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ವಾರ್ಷಿಕ ಬೆಳೆ ಆಗಿರುವ ಮಾವು ಅವಿಭಜಿತ ಕೋಲಾರ ಜಿಲ್ಲೆಗ ಸಹಸ್ರಾರು ರೈತ ಕುಟುಂಬಗಳಿಗೆ ಜೀವನಾಧಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾವು ಕೃಷಿ ಕೂಡ ರೈತರಿಗೆ ಆದಾಯಕ್ಕಿಂತ ಹೆಚ್ಚು ಖರ್ಚು ಭರಿಸುವ ಸ್ಥಿತಿಗೆ ತಲುಪಿ ಜತೆಜತೆಗೆ ಮಾವುಗೆ ತರಹೇವಾರಿ ರೋಗಗಳು ಕಾಣಿಸಿಕೊಳ್ಳುವುದರ ಜತೆಗೆ ಹವಾಮಾನ ವೈಪರೀತ್ಯ ಕೂಡ ಮಾವು ಬೆಳೆಗಾರರನ್ನು ತಲ್ಲಣಗೊಳಿಸುವ ಮೂಲಕ ತೀವ್ರ ಚಿಂತೆಗೀಡು ಮಾಡುತ್ತಿದೆ.

ಆಂಧ್ರ ಮಾವು ಜಿಲ್ಲೆಯ ಮಾರುಕಟ್ಟೆಗೆ ಪ್ರವೇಶ :

Advertisement

ಪ್ರಸ್ತುತ ಆಂಧ್ರದ ಮಾವು ಜಿಲ್ಲೆಯ ಮಾರುಕಟ್ಟೆ ಪ್ರವೇಶಿಸಿದೆ. ಆಂಧ್ರದಲ್ಲಿ ತೋತಾಪುರಿ, ಬೇನಿಷಾ, ನಿಲಂ, ಮಲ್ಲಿಕಾ ಮಾವುಗೆ ಹೆಚ್ಚು ಹೆಸರುವಾಸಿಯಾಗಿದೆ. ಆಂಧ್ರದ ಮಾವುಗೆ ಅಲ್ಲಿನ ವಾತಾವರಣ ಹೊಂದಿಕೆಯಾಗಿದೆ. ಜಿಲ್ಲೆಯ ಮಾವು ಮಾರುಕಟ್ಟೆಗೆ ಪ್ರವೇಶಿಸುವ ಮುನ್ನವೇ ಆಂಧ್ರದ ಮಾವು ಜಿಲ್ಲೆಯ ಜನರ ಕೈ ಸೇರುತ್ತಿದೆ. ಜಿಲ್ಲೆಯ ಮಾವುಗೆ ಈ ಬಾರಿ ಮಳೆ ಕೊರತೆ ಜತೆಗೆ ತೀವ್ರ ಬಿಸಿಲಿನ ಪರಿಣಾಮ ಕೊಯ್ಲಿಗೆ ಬಂದಿರುವ ಮಾವು ಉದುರುವ ಮೂಲಕ ಸಾಕಷ್ಟು ಪ್ರಮಾಣದ ಮಾವು ರೈತನ ಕೈಗೆ ಸಿಗದೇ ಮಣ್ಣು ಪಾಲಾಗುತ್ತಿದೆ. ಇದರಿಂದ ರೈತರಿಗೆ ತೀವ್ರ ಆರ್ಥಿಕ ನಷ್ಟಕ್ಕೆ ಗುರಿಯಾಗುವಂತೆ ಮಾಡಿದೆ. ಇದರಿಂದ ಆಂಧ್ರದ ಮಾವುಗೆ ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಕೆ.ಜಿ. ಮಾವು 80 ರಿಂದ 100 ರು, ವರೆಗೂ ಮಾರಾಟವಾಗುತ್ತಿದೆ. ಜಿಲ್ಲೆಯ ಮಾವು ಮಾರುಕಟ್ಟೆಗೆ ಬರುವವರೆಗೂ ಆಂಧ್ರದ ಮಾವುಗೆ ಬೆಲೆ ಇರಲಿದೆ.

ಜಿಲ್ಲೆಯಲ್ಲಿ ಈ ಬಾರಿ ಹವಾಮಾನ ವೈಪರೀತ್ಯದಿಂದ ಮಾವಿನ ಇಳುವರಿ ಸಾಕಷ್ಟು ಕುಸಿದಿದೆ. ಹೆಕ್ಟೇರ್‌ಗೆ ಸರಾಸರಿ 3-4 ಟನ್‌ ಮಾವು ನಿರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 10,500 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಇದ್ದು ತೋತಾಪುರಿ ಪ್ರಮುಖ ಬೆಳೆಯಾಗಿದೆ. ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶಿಸುವುದು ಸಾಮಾನ್ಯವಾಗಿ ಮೇ.15 ರ ನಂತರ. ತಾಪಮಾನ ಹೆಚ್ಚಳದಿಂದ ಬಿಸಿಗಾಳಿಗೆ ಮಾವು ಉದುರುತ್ತಿದೆ.-ಗಾಯತ್ರಿ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು 

ಆರಂಭದಲ್ಲಿ ನಮ್ಮ ಮಾವಿನ ತೋಟ ತುಂಬ ಚೆನ್ನಾಗಿತ್ತು. ಹೂ ಬಿಟ್ಟಿದ್ದನ್ನು ಗಮನಿಸಿ ಈ ಬಾರಿ ಹೆಚ್ಚು ಇಳುವರಿ ನಿರೀಕ್ಷೆ ಮಾಡಿದ್ದವು. ಆದರೆ, ಸಕಾಲದಲ್ಲಿ ಮಳೆ ಆಗದೇ ಇದ್ದಿದ್ದು ಈಗ ಬಿಸಿಗಾಳಿ ಆವರಿಸಿರುವುದರಿಂದ ಬಹಳಷ್ಟು ಮಾವು ಕೊಯ್ಲಿಗೆ ಬರುವ ಮೊದಲು ಉದುರುತ್ತಿವೆ. ಇದರಿಂದ ನಮಗೆ ಲಕ್ಷಾಂತರ ರೂ. ನಷ್ಟ ಆಗಿದೆ.-ನರಸಿಂಹರೆಡ್ಡಿ, ಚಿಂತಾಮಣಿಯ ಬಾರ‌್ಲಹಳ್ಳಿ ಮಾವು ಬೆಳೆಗಾರ  

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next