ಬೆಂಗಳೂರು: ರಾಜ್ಯದಲ್ಲಿ ಸುಮಾರು 8 ತಿಂಗಳ ಅನಂತರ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳು ಮಂಗಳವಾರದಿಂದ ಆರಂಭವಾಗಿದ್ದು ಶೇ.60 ರಷ್ಟು ಹಾಜರಾತಿ ದಾಖಲಾಗಿವೆ.
ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಅಂತಿಮ ವರ್ಷದ ಕೋರ್ಸ್‌ಗಳ ತರಗತಿ ಆರಂಭವಾಗಿ 15 ದಿನ ಕಳೆದರೂ ಶೇ.15ರಷ್ಟು ಹಾಜರಾತಿ ದಾಖಲಾಗಿಲ್ಲ. ಆದರೆ, ವೈದ್ಯಕೀಯ ಕಾಲೇಜ್ ಆರಂಭವಾದ ದಿನವೇ ಶೇ.60ಕ್ಕೂ ಅಧಿಕ ಪ್ರಮಾಣದಲ್ಲಿ ಹಾಜರಾತಿ ದಾಖಲಾಗಿದೆ.
ಕೇಂದ್ರ ಸರಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ), ಯುಜಿಸಿ ಹಾಗೂ ರಾಜ್ಯ ಸರಕಾರದ ಆದೇಶ ಹಾಗೂ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಅನುಸರಿಸಿ ವೈದ್ಯಕಿಯ ಪದವಿ ಕಾಲೇಜುಗಳನ್ನು ಆರಂಭಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮೊದಲ ದಿನದಿಂದಲೇ ಪ್ರಾಯೋಗಿಕ ತರಗತಿಗೆ ಆದ್ಯತೆ ನೀಡುವುದರಿಂದ ಹಾಜರಾತಿ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಭೇಟಿ ಇರುವುದರಿಂದ ಹಾಜರಾತಿ ಹೆಚ್ಚಿದೆ. ಮುಂದಿನ ವಾರದಲ್ಲಿ ಶೇ.90ರಿಂದ ಶೇ.95ರಷ್ಟು ಹಾಜರಾತಿ ದಾಖಲಾಗಲಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಬೇಕಾದ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಸ್. ಸಚ್ಚಿದಾನಂದ ಮಾಹಿತಿ ನೀಡಿದರು.
ಪ್ರಾಯೋಗಿಕ ತರಗತಿಗೆ ಮೊದಲ ಆದ್ಯತೆ ನೀಡಿ, ಕಡ್ಡಾಯ ಮಾಸ್ಕ್ ಧರಿಸುವುದು, ತರಗತಿ ಕೊಠಡಿಗಳ ಸ್ಯಾನಿಟೈಸೇಶನ್, ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬಂದಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮಾಡಿದ್ದೇವೆ. ಹಂತ ಹಂತವಾಗಿ ವಿದ್ಯಾರ್ಥಿಗಳ ಹಾಜರಾತಿ ಮತ್ತು ತರಬೇತಿ ನಿಯಮಾವಳಿಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲು ಸೂಚನೆ ನೀಡಿದ್ದೇವೆ ಎಂದರು.