Advertisement

‘ಭಾಷೆ ನಾಶವಾದಂತೆ ಸಂಸ್ಕೃತಿಯೂ ನಾಶವಾಗುವ ಅಪಾಯ’

01:05 AM Jul 27, 2018 | Team Udayavani |

ದರ್ಬೆ: ಭಾಷೆಗಳು ನಾಶವಾಗುತ್ತಾ ಹೋದಂತೆ ಅದರೊಂದಿಗಿನ ಸಂಸ್ಕೃತಿ ನಾಶವಾಗುತ್ತದೆ ಎಂಬ ಅರಿವು ನಮ್ಮಲ್ಲಿರಬೇಕು. ಈ ಕಾರಣದಿಂದ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನಮ್ಮಿಂದ ಆಗುವ ಸಹಾಯ ಮಾಡಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಪುತ್ತೂರು ಮಹಿಳಾ ಸ.ಪ್ರ.ದ. ಕಾಲೇಜು ಆಶ್ರಯದಲ್ಲಿ ಪರ್ಲಡ್ಕದ ಡಾ| ಕೆ. ಶಿವರಾಮ ಕಾರಂತ ಬಾಲವನದಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕು ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಲಾದ ಮೂರು ದಿನಗಳ ಮಾಧ್ಯಮ ಬರವಣಿಗೆ ಕಾರ್ಯಾಗಾರ (ಕಜ್ಜ ಕೊಟ್ಯ)ವನ್ನು ಅವರು ಉದ್ಘಾಟಿಸಿದರು.

Advertisement

ತುಳು ಭಾಷೆ ಸಾಂಸ್ಕೃತಿಕ ಅನನ್ಯತೆಯ ಸಾಕ್ಷಿ. ಈ ಭಾಷೆಯ ಸೊಗಡು ಉಳಿದಷ್ಟು ನಮ್ಮ ಸಂಸ್ಕೃತಿಯೂ ಉಳಿಯುತ್ತದೆ. ಈ ಕಾರಣದಿಂದ ನಮ್ಮನ್ನು ನಾವೇ ನೆನಪಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿ ಉತ್ತಮ ಕೆಲಸ ಮಾಡುತ್ತಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕಲೆ ಮೂಡಿಸುವ ಶಿಬಿರ ಶ್ಲಾಘನೀಯ ಎಂದರು.

ಜಾಲತಾಣಗಳನ್ನು ಸದುಪಯೋಗಿಸಿ
ಇಂದು ನಾವೆಲ್ಲಾ ಸೋಷಿಯಲ್‌ ಮೀಡಿಯಾ ಜಗತ್ತಿನಲ್ಲಿದ್ದೇವೆ. ಇದರಿಂದ ಸಾಕಷ್ಟು ಪ್ರಯೋಜನವಿದ್ದರೂ ಅಷ್ಟೇ ದುಷ್ಪರಿಣಾಮಗಳೂ ಇವೆ. ಈ ಒಳಿತು ಕೆಡುಕುಗಳನ್ನು ಅರ್ಥ ಮಾಡಿಕೊಂಡು ಯುವಜನತೆ ಸಾಮಾಜಿಕ ಜಾಲ ತಾಣಗಳನ್ನು ಧನಾತ್ಮಕವಾಗಿ ಬಳಸಬೇಕು. ಈ ಮೂಲಕ ಬರವಣಿಗೆಯ ಕಲೆಯನ್ನು ಕೂಡ ಸುಧಾರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಮಹಿಳಾ ಸ. ಪ್ರ. ದ. ಕಾಲೇಜಿನ ಪ್ರಾಂಶುಪಾಲ ಝೇವಿಯರ್‌ ಡಿ’ಸೋಜಾ ಮಾತನಾಡಿ, ಯುವ ಸಮುದಾಯ ಬರೆಯಲು ತೋಚಿದಾಗಲೆಲ್ಲ ಬರೆದು ಬಿಡಬೇಕು. ಅದನ್ನು ಮುಂದೂಡಲು ಹೋಗಬಾರದು. ಬರೆದುದೆಲ್ಲ ಮುದ್ರಣವಾಗಲೇಬೇಕೆಂಬ ಅನಿವಾರ್ಯವಿಲ್ಲ. ಬರೆಯುವ ಹವ್ಯಾಸ ಮಾತ್ರ ಬಿಡಬಾರದು ಎಂದು ಸಲಹೆ ನೀಡಿದರು. ಸಂಯೋಜಕ, ಉಪನ್ಯಾಸಕ ಡಾ| ನರೇಂದ್ರ ರೈ ದೇರ್ಲ ಸ್ವಾಗತಿಸಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಹಾಸ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಜೋಸ್ಲಿನ್‌ ಪಿಂಟೋ ವಂದಿಸಿದರು. ಲಕ್ಷ್ಮೀಕಾಂತ್‌ ಕಾರ್ಯಕ್ರಮ ನಿರ್ವಹಿಸಿದರು. ಮೂರು ದಿನಗಳ ಮಾಧ್ಯಮ ಬರವಣಿಗೆ ಕಾರ್ಯಾಗಾರದಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದಾರೆ.

ಪತ್ರಿಕೆಗಳ ಮೇಲೆ ವಿಶ್ವಾಸ ಇದೆ
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪ್ರಾಧ್ಯಾಪಕ, ಹಿರಿಯ ಪತ್ರಕರ್ತ ಪ್ರೊ| ವಿ.ಬಿ. ಅರ್ತಿಕಜೆ ಮಾತನಾಡಿ, ಮಾಧ್ಯಮ ವರದಿಗಾರರು ಕಾರ್ಯ ನುರಿತ ಪತ್ರಕರ್ತರಾಗಬೇಕು. ಆತನ ಕಿವಿ ಮತ್ತು ಕಣ್ಣು ಸೂಕ್ಷ್ಮವಾಗಿದ್ದಾಗ ಮಾತ್ರ ಬೆಳವಣಿಗೆ ಸಾಧ್ಯ. ವರ್ಷದಿಂದ ವರ್ಷಕ್ಕೆ ಪತ್ರಿಕೆ ಓದುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರಸರಣವೂ ಹೆಚ್ಚುತ್ತಿದೆ. ಇದಕ್ಕೆ ಕಾರಣ ಪತ್ರಿಕೆಗಳ ಮೇಲೆ ಜನ ಇಟ್ಟಿರುವ ವಿಶ್ವಾಸ ಮತ್ತು ಪತ್ರಿಕೆಗಳು ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಒಗ್ಗಿಸಿಕೊಂಡು ಹೋಗುತ್ತಿರುವುದೇ ಆಗಿದೆ. ಜನರಿಗೆ ಪ್ರಿಯವಾದುದನ್ನೇ ಕೊಡುವ ಭರದಲ್ಲಿ ಜನರಿಗೆ ಹಿತವಾದುದನ್ನು ಕೂಡ ನೀಡುವ ಕೆಲಸ ಪತ್ರಿಕೆಗಳು ಮಾಡಬೇಕು ಎಂದು ಕಿವಿಮಾತು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next