Advertisement

ಸುವರ್ಣಸೌಧ: ಮತ್ತೆ ಸದ್ದು ಮಾಡಿದ ಮಾಧ್ಯಮ‌ ನಿರ್ಬಂಧ

01:04 PM Dec 22, 2021 | Team Udayavani |

ಬೆಳಗಾವಿ (ಸುವರ್ಣಸೌಧ) : ಮತಾಂತರ ನಿಷೇಧ ವಿಧೇಯಕದ ಚರ್ಚೆಯ ದಿನ ಕಲಾಪಕ್ಕೆ ಮಾಧ್ಯಮ ಪ್ರವೇಶ ತಡೆ ಹಾಕಿದ ವಿಚಾರ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

Advertisement

ಸ್ಪೀಕರ್ ಆದೇಶ ಇಲ್ಲದೇ ಇದ್ದರೂ ಮಾರ್ಷಲ್ ಗಳು ಈ ರೀತಿ ನಡೆದುಕೊಂಡರೆ ಅಥವಾ ಮೌಖಿಕ ಆದೇಶದ ಅನುಸಾರ ಮಾಧ್ಯಮಗಳನ್ನು ತಡೆದರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಚಾರ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮಾಧ್ಯಮಗಳಿಗೆ ಎಂದಿನಂತೆ ಅವಕಾಶ ನೀಡಲಾಗಿದೆ.

ಮಾಧ್ಯಮ‌ನಿರ್ಬಂಧದ ಬಗ್ಗೆ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುತ್ತಿರುವವರು ಸಂವಿಧಾನದ ಒಂದು ಕಾಲನ್ನೇ ಮುರಿಯುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುವರ್ಣಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಈಗಾಗಲೇ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ ಸರಕಾರ ನಾಡಿನ ಸಮಸ್ಯೆಗಳನ್ನು ʼವಿಷಯಾಂತರʼ ಮಾಡಲು ʼಮತಾಂತರʼ ಗುಮ್ಮವನ್ನು ತಂದು ನಿಲ್ಲಿಸಿದೆ.

ನಾಡಿನ ಜನರು ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಜಕೀಯದ ಲಾಭದ ದುರಾಸೆಗೆ ರಾಜ್ಯದ ಸಾಮರಸ್ಯಕ್ಕೆ ಬೆಂಕಿ ಇಡುವ ಮತಾಂತರ ನಿಷೇಧ ಮಸೂದೆಯ ನಿಜಬಣ್ಣ ಎಲ್ಲಿ ಬಯಲಾಗುತ್ತದೋ ಎಂದು ಅಂಜಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂಬ ಸಂಶಯ ಇದೆ.

Advertisement

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗವು ಸಂವಿಧಾನದ ಒಂದು ಅಂಗ. ಈಗ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ʼಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನʼ ಮಾಡಲಾಗುತ್ತಿದೆ.ಇದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವವರ ದರ್ಪದ ಹೆಜ್ಜೆಯಷ್ಟೇ. ಅವರ ದುರುದ್ದೇಶ ಸ್ಪಷ್ಟ.

ಈ ಮಧ್ಯೆ ಮಾನ್ಯ ಸ್ಪೀಕರ್ ಅವರು ಮಾಧ್ಯಮ ನಿರ್ಬಂಧದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಹಾಗಾದರೆ, ನಿರ್ಬಂಧ ಹೇರಿದವರು ಯಾರು? ಸ್ಪೀಕರ್ ಅವರಿಗೆ ಗೊತ್ತಿಲ್ಲದೆ ನಿರ್ಬಂಧದ ಸಂದೇಶ ಮಾಧ್ಯಮಗಳಿಗೆ ಕೊಟ್ಟವರು ಯಾರು? ಈ ಬಗ್ಗೆ ಜನರಿಗೆ ಸತ್ಯಾಂಶ ಗೊತ್ತಾಗಬೇಕಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next