Advertisement
“ಅಕ್ಷರಸ್ಥರೆಲ್ಲರೂ ವಿದ್ಯಾವಂತರಲ್ಲ, ವಿದ್ಯಾವಂತ ರೆಲ್ಲರೂ ಸುಶಿಕ್ಷಿತರಲ್ಲ’-ಇದು ಓದಲು ಬರೆಯಲು ತಿಳಿದ ಆದರೆ ನಾಗರಿಕ ಮೌಲ್ಯಗಳನ್ನು, ಸಜ್ಜನಿಕೆ ಯನ್ನು ತಿಳಿಯದ ವ್ಯಕ್ತಿಗಳು ಮತ್ತು ವಿದ್ಯಾವಂತ ರಾಗಿದ್ದೂ ಮೂರ್ಖರಾಗಿರುವವರ ಕುರಿತ ವ್ಯಾಖ್ಯಾನ. ಇದನ್ನೇ ಅಂತರ್ಜಾಲ ಮತ್ತು ತಂತ್ರ ಜ್ಞಾನದ ಬಳಕೆ ಕುರಿತಾಗಿ ಹೇಳುವುದಾದರೆ ವೇಗ ವಾಗಿ ಟೈಪ್ ಮಾಡುವವರು, ಎಲ್ಲ ಸಾಮಾಜಿಕ ಜಾಲತಾಣಗಳಿಗೂ ಸೈ ಎನ್ನುವವರು, ಅದ್ಯಾವುದೇ ಸಾಫ್ಟ್ವೇರ್, ಆ್ಯಪ್ ಆದರೂ ಕ್ಷಣಮಾತ್ರದಲ್ಲಿ ತಮ್ಮ ಕಂಪ್ಯೂಟರ್‌ನಲ್ಲಿ ಅಥವಾ ಮೊಬೈಲ್ ಫೋನ್‌ನಲ್ಲಿ ಅದಕ್ಕೊಂದು ಜಾಗಕೊಟ್ಟು ಅದರ ಜಾಲಾಟ ಬಲ್ಲವರೆಲ್ಲರನ್ನೂ ತಂತ್ರಜ್ಞಾನದ ಶಿಕ್ಷಿತರು ಎಂದು ಕರೆಯಬೇಕಿಲ್ಲ.
ಅಂತರ್ಜಾಲದಲ್ಲಿ ಹರಿಯಬಿಟ್ಟ ಖಾಸಗಿ ಮಾಹಿ ತಿಯ ಗೌಪ್ಯತೆಯ ಪ್ರಶ್ನೆಯ ಜತೆಗೆ ಇನ್ನೊಂದು ವಿಚಾರವನ್ನು ಗಮನಿಸಲೇಬೇಕು, ಸಾಮಾಜಿಕ ಜಾಲತಾಣಗಳನ್ನು ಪತ್ರಿಕೋದ್ಯಮದ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಲ್ಪಡುವ ಮಾಧ್ಯಮಗಳ ಪಟ್ಟಿಗೆ ಸೇರಿಸುವುದು ಎಷ್ಟು ಸರಿ? ಎಂಬ ಬರವಣಿಗೆಯ ತುಣುಕೊಂದನ್ನು ಇತ್ತೀಚೆಗೆ ಓದಿದಾಗ ನನ್ನ ಮನಸ್ಸಿನಲ್ಲಿ ಹೊಳೆದದ್ದು, ಹೆಚ್ಚಿನ ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ತಾವು ಎಲ್ಲಿಂದ ಮತ್ತು ಹೇಗೆ ಮಾಹಿತಿಯನ್ನು ಪಡೆದಿದ್ದೇವೆ ಎಂಬ ಅರಿವೇ ಇರುವುದಿಲ್ಲ. ತಮಗಿಷ್ಟವಾಗದ ಮಾಹಿತಿ, ಚಿತ್ರ ಅಥವಾ ದೃಶ್ಯಾವಳಿಯನ್ನು ನೋಡಿದ ಕೂಡಲೇ “ಇಂದಿನ ಮಾಧ್ಯಮಕ್ಕೆ ಏನಾಗಿದೆ?, ಯಾವುದೇ ಕಡಿವಾಣವೇ ಇಲ್ಲವೇ?’ ಎಂಬ ಕಮೆಂಟ್ ಅಥವಾ ಸಾರ್ವಜನಿಕ ಟೀಕೆಯನ್ನು ಕೂಡಲೇ ಹರಿಯಬಿಡುವವರು ಕೆಲವರಾದರೆ ಇನ್ನು ಕೆಲವರು ತಾವು ನೋಡುವ ಅಥವಾ ಓದುವ ಮಾಹಿತಿಯೆಲ್ಲವೂ ವಿಶ್ವಾಸಾರ್ಹ ಎನಿಸಿಕೊಂಡ ಮಾಧ್ಯಮಗಳೇ ನೀಡುತ್ತಿವೆ ಎಂದು ಸಲೀಸಾಗಿ ನಂಬಿಬಿಡುವುದು. ಆದರೆ ತತ್‌ಕ್ಷಣದ ಟೀಕೆ ಅಥವಾ ನಂಬಿಕೆಗೂ ಮುನ್ನ ಸಾಮಾಜಿಕ ಜಾಲತಾಣಗಳಿಗೂ ತಾವು ಉಲ್ಲೇಖೀಸುತ್ತಿರುವ ಮಾಧ್ಯಮಕ್ಕೂ ವ್ಯತ್ಯಾಸವಿದೆ ಎಂಬುದನ್ನೂ ಅರಿಯಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ್ಯವಲ್ಲದ ಮಾಹಿತಿಯನ್ನು ಯಾರು ಹಂಚಿಕೊಳ್ಳುತ್ತಾರೆ? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ವಾಸ್ತವಾಂಶವಲ್ಲದ ಮಾಹಿತಿಗಳು, ನೈತಿಕ ಚೌಕಟ್ಟು ಇಲ್ಲದ ದೃಶ್ಯಗಳನ್ನು ಹರಿಯಬಿಡುವುದು ಜಾಲತಾಣಗಳ ಬಳಕೆಯ ಕುರಿತು ಕನಿಷ್ಠ ಸೌಜನ್ಯವೂ ಇಲ್ಲದ ಅವಿವೇಕಿಗಳು ಮತ್ತು ಜನಸಾಮಾನ್ಯರನ್ನು ತಮ್ಮ ಯೋಜಿತ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಗುಂಪುಗಳು. ಬಹುಶಃ ಸಾಮಾಜಿಕ ಜಾಲತಾಣಗಳನ್ನು ಮತ್ತು ಅದರಲ್ಲಿ ಬರುವ ವಿಚಾರಗಳನ್ನು ಸರಿಯಾಗಿ ಅರ್ಥಮಾಡಿ ಕೊಂಡರೆ ಜನರು ತಮಗೆ ಬೇಕಾದ ಸುದ್ದಿಯನ್ನು, ಮಾಹಿತಿಯನ್ನು ಎಲ್ಲಿಂದ ಪಡೆದುಕೊಳ್ಳಬೇಕು, ತಮ್ಮ ಮಾಧ್ಯಮ ಅಭ್ಯಾಸ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುತ್ತಾರೆ.
Related Articles
ಅಂತರ್ಜಾಲದಲ್ಲಿ ಪಡೆದುಕೊಳ್ಳುತ್ತಿರುವ ಮಾಹಿ ತಿಯ ವಿಶ್ವಾಸಾರ್ಹತೆ ಏನು? ಅದರಲ್ಲಿ ವಾಸ್ತ ವಾಂಶದೆಯೇ? ನಂಬಲರ್ಹ ಮಾಧ್ಯಮದಿಂದ ಅದನ್ನು ಪಡೆದುಕೊಳ್ಳುತ್ತಿದ್ದೇವೆಯೇ ಅಥವಾ ಕೇವಲ ಜಾಲತಾಣದ ಪೋಸ್ಟ್‌ಗಳನ್ನೇ ನಿಜ ವೆಂದು ತಿಳಿದುಕೊಳ್ಳುತ್ತಿದ್ದೇವೆಯೇ ಎನ್ನುವ ಅರಿವಿ ನೊಂದಿಗೆ, ಪಡೆದುಕೊಂಡ ಮಾಹಿತಿಯನ್ನು ಹೇಗೆ ರವಾನೆ ಮಾಡುತ್ತಿದ್ದೇವೆ ಎನ್ನುವುದನ್ನೂ ಮನಗಾಣಬೇಕಿದೆ. ಯಾವುದೋ ಫೋಟೋ, ವೀಡಿಯೋ ಅಥವಾ ಮಾಹಿತಿಯನ್ನು ಸಿಕ್ಕಿದ ತತ್‌ಕ್ಷಣ ತನ್ನ ಸಂಪರ್ಕದಲ್ಲಿರುವವರಿಗೆಲ್ಲ ಕಳುಹಿಸಿ, ಅದರಲ್ಲಿರುವ ಸತ್ಯಾಸತ್ಯತೆಯನ್ನೂ ಅರಿಯುವ ಪ್ರಯತ್ನ ಮಾಡದಿರುವುದು. ಯಾವುದೋ ಹುರುಳಿಲ್ಲದ ಚಿತ್ರ ಅಥವಾ ದೃಶ್ಯವನ್ನೇ ಗಂಭೀರವಾಗಿ ತೆಗೆದುಕೊಂಡು ಅಥವಾ ಅದು ನನ್ನ ಸಿದ್ಧಾಂತಕ್ಕೆ ಪೂರಕವಾಗಿದೆ ಅಂದುಕೊಂಡು ಅದಕ್ಕೆ ನಾವು ನೀಡುವ ಪ್ರತಿಕ್ರಿಯೆಗಳೂ ಡಿಜಿಟಲ್ ನಾಗರಿಕತೆಗೆ ತದ್ವಿರುದ್ಧವಾದುದು. ವಿದ್ಯಾವಂತರೆನಿಕೊಂಡ ನಾವೆಲ್ಲರೂ ಎಡವುತ್ತಿರುವುದು ಇಲ್ಲೇ. ಯಾವುದೋ ಯೋಜಿತ ಪ್ರಚಾರದ ಅಸ್ತ್ರವಾಗಿ ನಾವೇ ಬಳಕೆಯಾಗುತ್ತಿದ್ದೇವೆ ಎಂಬ ಅರಿವೂ ನಮಗಿರುವುದಿಲ್ಲ. ವಿಶ್ವಾಸಾರ್ಹ ಮಾಧ್ಯಮದಲ್ಲಿ ಪ್ರಸಾರ ಅಥವಾ ಪ್ರಕಟವಾಗಿದೆ ಎಂಬ ಅಡಿಬರಹದೊಂದಿಗೆ ಸಿಗುವ ಸುಳ್ಳು ಮಾಹಿತಿಯ ತುಣುಕನ್ನು ಪರಿಶೀಲಿಸದೆ ಗುಂಪಿನಲ್ಲಿ ಹರಿಯಬಿಟ್ಟು ನಗೆಪಾಟಲಿಗೀಡಾಗುವ ಸಂದರ್ಭಗಳೇ ಹೆಚ್ಚು. ಅದ್ದರಿಂದ ಮಾಹಿತಿಯನ್ನು ರವಾನೆ ಮಾಡುವಾಗಲೂ ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ನಾವು ಹರಿಯಬಿಟ್ಟ ಮಾಹಿತಿ ಸಾರ್ವಜನಿಕವಾಗಿ ಪ್ರಸಾರವಾಗುತ್ತಿದೆ ಎಂಬ ಸಣ್ಣ ಎಚ್ಚರವೂ ನಮಗಿರಬೇಕಾಗುತ್ತದೆ. ನಮ್ಮ ಆನ್‌ಲೈನ್ ಚಟುವಟಿಕೆಗಳ ಮೂಲಕವೇ ನಮ್ಮ ವ್ಯಕ್ತಿತ್ವವನ್ನು ಅಳೆಯುವ ಕಾಲದಲ್ಲಿ ನಾವಿರುವ ಕಾರಣ ನಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳುವ ರೀತಿಯಲ್ಲೇ ಅಂತರ್ಜಾಲದ ಬಳಕೆಯೂ ಇರಬೇಕಾಗುತ್ತದೆ.
Advertisement
ಆದರೆ ದಿನಕ್ಕೊಂದರಂತೆ ಜನ್ಮತಾಳುತ್ತಿರುವ ಸುದ್ದಿತಾಣಗಳು, ರಾಶಿಗಟ್ಟಲೆ ಮಾಹಿತಿಯನ್ನು ಹರಿಯಬಿಡುತ್ತಿರುವ ಸಾಮಾಜಿಕ ಜಾಲತಾಣಗಳ ಮಧ್ಯೆ ಜನಸಾಮಾನ್ಯರು ಯಾವ ಮಾಹಿತಿ ಸರಿ? ಯಾವುದು ತಪ್ಪು? ಎಂಬುದನ್ನು ಅರ್ಥಮಾಡಿಕೊಳ್ಳುವುದು ಸವಾಲೇ ಸರಿ. ಈ ಸವಾಲನ್ನು ಮಾಧ್ಯಮ ಸಾಕ್ಷರರೆನಿಸಿಕೊಂಡಿರುವ ಪತ್ರಕರ್ತರೂ, ಮಾಧ್ಯಮ ಶಿಕ್ಷಣದಲ್ಲಿರುವವರೂ ಎದುರಿಸುತ್ತಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಜನಸಾಮಾನ್ಯರ ಪಾಡೇನು? ಎಂದು ಯೋಚಿಸ ಬೇಕಾದ ಅಗತ್ಯದೆ. ಈ ಹಿನ್ನೆಲೆಯಲ್ಲಿ ಜನರನ್ನು ಓದಲು ಬರೆಯಲು ಶಕ್ತವಾಗಿಸುವ ಸಾಕ್ಷ ರತಾ ಆಂದೋಲನದಷ್ಟೇ ಇಂದು ತುರ್ತಾಗಿ ಬೇಕಾಗಿರುವುದು ಮಾಧ್ಯಮ ಸಾಕ್ಷರತೆ. ವಿಶ್ವಾ ಸಾರ್ಹ ಮಾಧ್ಯಮಗಳಿಂದಲೇ ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಅಥವಾ ವಾಸ್ತವಾಂಶವಿರುವ ಪೋಸ್ಟ್‌ಗಳನ್ನು ಮಾತ್ರ ಇತರರೊಂದಿಗೆ ಹಂಚಿಕೊಳ್ಳಬೇಕು ಎಂಬ ಕನಿಷ್ಠ ಅರಿವನ್ನು ಜನಸಾಮಾನ್ಯರು ಮನಗಾಣಬೇಕಾಗಿದೆ. ಅಂತರ್ಜಾಲದಲ್ಲಿ ಇರುವ ಮಿತಿಮೀರಿದ ಮಾಹಿತಿ, ಮಾಹಿತಿ ಮಾಲಿನ್ಯ ಎಂಬ ಚರ್ಚೆಗಳು ಅಕಾಡೆಮಿಕ್ ವಲಯಕ್ಕಷ್ಟೇ ಸೀಮಿತವಾಗದೆ ಜನಸಾಮಾನ್ಯರಿಗೂ ತಲುಪಬೇಕಾಗಿದೆ. ಪರಿಸರ ಮಾಲಿನ್ಯ ಹೇಗೆ ಜೀವಸಂಕುಲದ ನಾಶಕ್ಕೆ ಕಾರಣವಾಗುತ್ತದೆಯೋ ಹಾಗೆಯೇ ಈಗ ಆಗುತ್ತಿರುವ ಮಾಹಿತಿ ಮಾಲಿನ್ಯವೂ ಮಾನವನ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಹಾನಿಕಾರಕ. ಆದ್ದರಿಂದ ಮಾಧ್ಯಮ ಸಾಕ್ಷರತೆಯ ಅಗತ್ಯವನ್ನು ಅತಿಯಾದ ಮಾಹಿತಿಯ ನಡುವೆಯೂ ಡಿಜಿಟಲ್ ನೈರ್ಮಲ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಅರಿತುಕೊಳ್ಳಬೇಕಾಗಿದೆ.
ಗೀತಾ ವಸಂತ್ ಇಜಿಮಾನ್, ಉಜಿರೆ