ನವದೆಹಲಿ: ಕೋರ್ಟ್ ಕಲಾಪದಲ್ಲಿ ನಡೆಯುವ ಮೌಖಿಕ ವಿಶ್ಲೇಷಣೆಗಳನ್ನು ವರದಿ ಮಾಡಲು ಮಾಧ್ಯಮಗಳಿಗೆ ಅವಕಾಶ ನೀಡಬಾರದು ಎಂಬ ಚುನಾವಣಾ ಆಯೋಗದ ವಿನಂತಿಯನ್ನು ಸುಪ್ರೀಂಕೋರ್ಟ್ ಸೋಮವಾರ(ಮೇ 03) ತಳ್ಳಿಹಾಕಿದ್ದು, ಉನ್ನತ ಕೋರ್ಟ್ ಗಳಲ್ಲಿ ನಡೆಯುವ ಚರ್ಚೆಗಳನ್ನು ಮಾಧ್ಯಮಗಳು ವರದಿ ಮಾಡದಿರುವಂತೆ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ:ಗಂಗಾವತಿ ತಹಸೀಲ್ದಾರ್ ಕಚೇರಿ ಸಿಬ್ಬಂದಿಗೆ ಕೋವಿಡ್ ದೃಢ: ಸಂಪೂರ್ಣ ಕಚೇರಿ ಸೀಲ್ ಡೌನ್
ಕೋವಿಡ್ 19 ವಿಷಯಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ವ್ಯಕ್ತಪಡಿಸಿದ್ದ ಕೊಲೆ ಆರೋಪವನ್ನು ಪ್ರಶ್ನಿಸಿ ಚುನಾವಣಾ ಆಯೋಗ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಜಸ್ಟೀಸ್ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶ ನೀಡಿದೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆ ಹರಡುತ್ತಿದ್ದ ಸಂದರ್ಭದಲ್ಲಿ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಸಭೆ, ಸಮಾರಂಭ ನಡೆಸಲು ಅನುಮತಿ ನೀಡಿರುವುದಕ್ಕೆ ಮದ್ರಾಸ್ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಎರಡನೇ ಅಲೆ ಹೆಚ್ಚಾಗಲು ಆಯೋಗವೇ ಹೊಣೆಯಾಗಿದೆ. ಇದಕ್ಕಾಗಿ ಚುನಾವಣಾಧಿಕಾರಿಗಳ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬಹುದಾಗಿದೆ ಎಂದು ಮೌಖಿಕವಾಗಿ ಅಸಮಾಧಾನವ್ಯಕ್ತಪಡಿಸಿತ್ತು.
ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಆಯೋಗದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಕೋರ್ಟ್ ನಲ್ಲಿನ ಮೌಖಿಕ ಅಭಿಪ್ರಾಯದ ವೇಳೆ ಮಾಧ್ಯಮಗಳಿಗೆ ವರದಿ ಮಾಡಲು ಅವಕಾಶ ನೀಡಬಾರದು ಎಂದು ವಾದಿಸಿದ್ದರು.