ವರದಿ : ಅಮರೇಗೌಡ ಗೋನವಾರ
ಹುಬ್ಬಳ್ಳಿ: ಮದುವೆ ಸೀಜನ್‌ನಲ್ಲಿ ಉತ್ತಮ ವ್ಯಾಪಾರ- ವಹಿವಾಟಿನಿಂದ ಖುಷಿಯಲ್ಲಿರಬೇಕಾಗಿದ್ದ ಬಿದಿರು ಉತ್ಪನ್ನಗಳ ತಯಾರಿಕೆ, ಮಾರಾಟ ವೃತ್ತಿಯಲ್ಲಿರುವ ಮೇದಾರ ಸಮಾಜದವರು, ಕೋವಿಡ್ ಲಾಕ್‌ಡೌನ್ ನಿಂದ ವ್ಯಾಪಾರವಿಲ್ಲದೆ ಪರದಾಡುವಂತಾಗಿದೆ.
ಸರಕಾರ ಘೋಷಿಸಿದ ವಿಶೇಷ ಪ್ಯಾಕೇಜ್ ನಡಿ ತಮಗೆ ಯಾವುದೇ ಪರಿಹಾರ ದೊರೆಯದಿರುವ ಬಗ್ಗೆ ಸಂಕಷ್ಟ ಪಡುತ್ತಿದ್ದಾರೆ. ಲಾಕ್‌ಡೌನ್‌ನಿಂದ ಬಿದಿರು ಉತ್ಪನ್ನಗಳಿಗೆ ಅಗತ್ಯವಾದ ಬಾಂಬೂ ಸಾಗಣೆ ವಾಹನಗಳ ಸಂಚಾರ ಇಲ್ಲವಾಗಿದೆ. ಬಿದಿರು ಉತ್ಪನ್ನಗಳ ವಹಿವಾಟು ಸಹ ಇಲ್ಲವಾಗಿದೆ. ಹಲವು ದಶಕಗಳಿಂದ ಇದೇ ವೃತ್ತಿ ನಂಬಿಕೊಂಡ ಅನೇಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಕೋವಿಡ್ ಮೊದಲ ಅಲೆಯಲ್ಲಿಯೂ ಪರಿಹಾರ ದೊರೆತಿಲ್ಲ ಎಂಬುದು ಇವರ ಅಳಲಾಗಿದೆ.
500 ಕುಟುಂಬ ಅತಂತ್ರ: ಏಪ್ರಿಲ್-ಮೇ ಮದುವೆ ಸೀಜನ್ ಆಗಿದ್ದು, ಜನರು ಬಿದಿರಿನ ಬುಟ್ಟಿ, ಮೊರ ಇನ್ನಿತರ ಉತ್ಪನ್ನ ಖರೀದಿಸುತ್ತಾರೆ. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಮದುವೆಗಳೇ ನಡೆಯುತ್ತಿಲ್ಲ. ಅಲ್ಲಲ್ಲಿ ನಡೆದರೂ ಬಿದಿರಿನ ಉತ್ಪನ್ನಗಳ ಖರೀದಿಗೆ ಜನ ಬಾರದ ಸ್ಥಿತಿ ಇದೆ. ಲಾಕ್‌ಡೌನ್ ಹಿನ್ನೆಲೆಯಲ್ಲೂ ಜನರು ಖರೀದಿಗೆ ಮುಂದಾಗುತ್ತಿಲ್ಲ. ಬಿದಿರು ಉತ್ಪನ್ನಗಳ ಖರೀದಿಗೆ ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತಿದ್ದರು, ಅವರೂ ಬರುತ್ತಿಲ್ಲ. ಕಳೆದ ವರ್ಷ ಕೋವಿಡ್ ಮೊದಲ ಅಲೆಯೂ ಏಪ್ರಿಲ್-ಮೇ ವೇಳೆಯಲ್ಲಿ ವಕ್ಕರಿಸಿದ್ದರಿಂದ ವ್ಯಾಪಾರ ಇಲ್ಲದೆ ಮೇದಾರ ಸಮಾಜದವರು ಸಂಕಷ್ಟ ಪಟ್ಟಿದ್ದರು. ಈ ವರ್ಷವೂ ಅದು ಮುಂದುವರಿದಿದೆ. ಮದುವೆ ಸೀಜನ್, ಸಾಮಾನ್ಯ ಮಾರಾಟ ಅಲ್ಲದೆ, ವಿವಿಧ ಜಾತ್ರೆ-ಮೇಳಗಳಲ್ಲಿಯೂ ತಮ್ಮ ಉತ್ಪನ್ನಗಳೊಂದಿಗೆ ಮಳಿಗೆ ಹಾಕಿ ಒಂದಿಷ್ಟು ಆದಾಯ ಕಂಡುಕೊಳ್ಳುತ್ತಿದ್ದರು. ಕಳೆದ 2 ವರ್ಷಗಳಿಂದ ಅದು ಇಲ್ಲವಾಗಿದೆ.
ಹಳೇ ಹುಬ್ಬಳ್ಳಿ ಸೇರಿದಂತೆ ನಗರದಲ್ಲಿ ಸುಮಾರು 500 ಕುಟುಂಬಗಳು ಬಿದಿರು ಉತ್ಪನ್ನಗಳ ತಯಾರಿಕೆ, ಮಾರಾಟವನ್ನೇ ನಂಬಿಕೊಂಡಿದ್ದಾರೆ. ಈ ಎಲ್ಲ ಕುಟುಂಬಗಳು ಇದೀಗ ವ್ಯಾಪಾರ-ವಹಿವಾಟು ಇಲ್ಲದೆ ಸಂಕಷ್ಟ ಪಡುವಂತಾಗಿದೆ. ತಯಾರಿಸಿದ ಉತ್ಪನ್ನಗಳು ಮಾರಾಟವಾಗದೆ ಉಳಿದಿವೆ. ಅಲಂಕಾರಿಕ, ಹೂ ಕುಂಡಗಳು, ಬೆತ್ತದ ಕುರ್ಚಿ, ಮಂಚ ಸೇರಿದಂತೆ ವಿವಿಧ ಉತ್ಪನ್ನ ತಯಾರಿಸುವವರು ಸೀಜನ್‌ನಲ್ಲಿ ಹಾಗೂ ಸಾಮಾನ್ಯವಾಗಿ ದಿನಕ್ಕೆ 2,000-3000 ಸಾವಿರ ರೂ. ವಹಿವಾಟು ನಡೆಸುತ್ತಿದರು. ಕೊರೊನಾ ಹೊಡೆತದ ನಂತರ ನಿತ್ಯ 200-300 ರೂ. ವಹಿವಾಟಿಗೂ ಪರದಾಡುವಂತಾಗಿದೆ. ಮುಂದೇನು ಎಂಬ ಚಿಂತೆ ಕಾಡುತ್ತಿದೆ.