Advertisement

3 ಪಟ್ಟು ಅಧಿಕ ದರಕ್ಕೆ ಕಸ ಗುಡಿಸುವ ಯಂತ್ರ ಖರೀದಿ!

01:10 PM Mar 10, 2023 | Team Udayavani |

ಬೆಂಗಳೂರು: ಶುಭ್ರ ಬೆಂಗಳೂರು ಯೋಜನೆ ಅಡಿಯಲ್ಲಿ ಬಿಬಿಎಂಪಿ ತಲಾ 2 ಕೋಟಿ ರೂ. ಮೊತ್ತದ 30 ಮೆಕ್ಯಾನಿಕಲ್‌ ಸ್ವೀಪಿಂಗ್‌ ವಾಹನ ಖರೀದಿಗೆ ಮುಂದಾಗಿದೆ. ಆದರೆ, ಯಂತ್ರಗಳಿಗೆ ನಿಗದಿ ಮಾಡಿರುವ ಮೊತ್ತದ ಬಗ್ಗೆ ಇದೀಗ ಅಪಸ್ವರ ಎದ್ದಿದೆ.

Advertisement

ನಗರದಲ್ಲಿ 587.58 ಕಿ.ಮೀ. ಉದ್ದದ 156 ಮುಖ್ಯ ರಸ್ತೆಗಳು ಹಾಗೂ 735.50 ಕಿ.ಮೀ. ಉದ್ದದ 316 ಉಪಮುಖ್ಯ ರಸ್ತೆಗಳಿವೆ. ಅವುಗಳಲ್ಲಿ ಶೇಖರಣೆಯಾಗುವ ದೂಳನ್ನು ಗುಡಿಸಿ ಸ್ವತ್ಛಗೊಳಿಸುವ ಸಲುವಾಗಿ ಮೆಕ್ಯಾನಿಕಲ್‌ ಸ್ವೀಪಿಂಗ್‌ ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಕಳೆದ 8 ತಿಂಗಳ ಹಿಂದಷ್ಟೇ 5 ಮೆಕ್ಯಾನಿಕಲ್‌ ಸ್ವೀಪಿಂಗ್‌ ವಾಹನ ಖರೀದಿಸಲಾಗಿತ್ತು. ಇದೀಗ ಮತ್ತೆ 30 ಮೆಕ್ಯಾನಿಕಲ್‌ ಸ್ವೀಪಿಂಗ್‌ ಯಂತ್ರಗಳ ಖರೀದಿಗೆ ಯೋಜನೆ ರೂಪಿಸಲಾಗಿದೆ. ಹೀಗೆ ಖರೀದಿಸಲಾಗುತ್ತಿರುವ ಮೆಕ್ಯಾನಿಕಲ್‌ ಸ್ವೀಪಿಂಗ್‌ ವಾಹನದ ಮೊತ್ತ 8 ತಿಂಗಳಲ್ಲೇ 3 ಪಟ್ಟು ಹೆಚ್ಚಿಸುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

67 ಲಕ್ಷ ರೂ.ನಿಂದ 2 ಕೋಟಿ ರೂ.: ಪ್ರಮುಖ ರಸ್ತೆಗಳಲ್ಲಿ ಕಸ ಗುಡಿಸುವ ಸಲುವಾಗಿ ಕಳೆದ 8 ತಿಂಗಳ ಹಿಂದೆ ಬಿಬಿಎಂಪಿ 5 ಮೆಕ್ಯಾನಿಕಲ್‌ ಸ್ವೀಪಿಂಗ್‌ ಯಂತ್ರಗಳನ್ನು ಖರೀದಿಸಿತ್ತು. ಅದರಲ್ಲಿ ತಲಾ ಒಂದು ವಾಹನಕ್ಕೆ 65 ಲಕ್ಷ ರೂ. ನೀಡಲಾಗಿತ್ತು. ಆದರೀಗ 30 ವಾಹನಗಳನ್ನು ಖರೀದಿಸಲಾಗುತ್ತಿದ್ದು, ಪ್ರತಿ ಸ್ವೀಪಿಂಗ್‌ ವಾಹನಕ್ಕೆ ಬರೋಬ್ಬರಿ 2 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಮಾಸಿಕ ನಿರ್ವಹಣೆಗಾಗಿ ಪ್ರತಿ ವಾಹನಕ್ಕೆ 1.48 ಲಕ್ಷ ರೂ. ನಿಗದಿ ಮಾಡಲಾಗಿದೆ.

40 ಕಿ.ಮೀ. ಕಾರ್ಯಾಚರಣೆ, 84 ಲೀ. ಡೀಸೆಲ್‌: ಫೆ.16ರಂದು ಮೆಕ್ಯಾನಿಕಲ್‌ ಸ್ವೀಪಿಂಗ್‌ ವಾಹನ ಖರೀದಿ ಸಂಬಂಧ ಸಭೆ ನಡೆಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಪ್ರತಿ ವಾಹನ ದಿನದಲ್ಲಿ 8 ಗಂಟೆ ಕಾರ್ಯಾಚರಣೆ ಮಾಡಬೇಕು. ಪ್ರತಿ ಗಂಟೆಗೆ ಮೆಕ್ಯಾನಿಕಲ್‌ ಸ್ವೀಪಿಂಗ್‌ ವಾಹನಕ್ಕೆ 8 ಲೀಟರ್‌ ಡೀಸೆಲ್‌ ಬೇಕಾಗಲಿದ್ದು, ಕಾರ್ಯಾಚರಣೆಗೆ 40 ಲೀಟರ್‌ ಬೇಕಾಗಲಿದೆ. ಅದಾದ ನಂತರ ವಾಹನದಲ್ಲಿ ಶೇಖರಣೆಯಾಗುವ ದೂಳು ಇನ್ನಿತರ ವಸ್ತುಗಳನ್ನು ನಿಗದಿತ ಡಂಪಿಂಗ್‌ ಯಾರ್ಡ್‌ಗೆ ಸಾಗಿಸಬೇಕಿದ್ದು, ಅದಕ್ಕೆ ಹೆಚ್ಚುವರಿಯಾಗಿ 20 ಕಿ. ಮೀ. ಸಂಚರಿಸಬೇಕು. ಒಟ್ಟಾರೆ ಒಂದು ದಿನದಲ್ಲಿ ವಾಹನವು 40 ಕಿ.ಮೀ. ಸಂಚರಿಸಲಿದ್ದು, ಅದಕ್ಕಾಗಿ 84 ಲೀ. ಡೀಸೆಲ್‌ ಬೇಕಾಗಲಿದೆ. ಹೀಗಾಗಿ ಡೀಸೆಲ್‌ ಗಾಗಿ ಒಂದು ವಾಹನಕ್ಕೆ ಮಾಸಿಕ 2,26,800 ರೂ. ನೀಡಬೇಕು ಎಂದೂ ತಿಳಿಸಲಾಗಿದೆ.

ದರ ಪುನರ್‌ ಪರಿಶೀಲನೆಗೆ ಆಗ್ರಹ: ಮೆಕ್ಯಾನಿಕಲ್‌ ಸ್ವೀಪಿಂಗ್‌ ವಾಹನ ಖರೀದಿ ಕುರಿತಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌. ರಮೇಶ್‌ ಪ್ರತಿಕ್ರಿಯಿಸಿದ್ದು, 8 ತಿಂಗಳಲ್ಲಿ ಸ್ವೀಪಿಂಗ್‌ ವಾಹನದ ಬೆಲೆಯನ್ನು ಏಕಾಏಕಿ ಮೂರು ಪಟ್ಟು ಹೆಚ್ಚಿಸಿರುವುದು ಅನುಮಾನಕ್ಕೆ ಕಾರಣವಾಗುತ್ತಿದೆ. ಮೆಕ್ಯಾನಿಕಲ್‌ ಸ್ವೀಪಿಂಗ್‌ ವಾಹನ ಖರೀದಿಗೆ ನಿಗದಿ ಮಾಡಲಾಗಿರುವ ದರದ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮತ್ತೆ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next