Advertisement

ನಾಳೆಯಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭ

01:15 AM Aug 22, 2018 | Karthik A |

ಗಂಗೊಳ್ಳಿ: ಎರಡು ತಿಂಗಳ ಮೀನುಗಾರಿಕಾ ನಿಷೇಧ ಅವಧಿ ಮುಕ್ತಾಯಗೊಂಡು ಆ. 1ರಿಂದ ಆರಂಭವಾಗಬೇಕಿದ್ದ ಯಾಂತ್ರೀಕೃತ ಮೀನುಗಾರಿಕೆ ಆರಂಭಕ್ಕೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿತ್ತು. ಆದರೆ ಈಗ ಸ್ವಲ್ಪ ಮಟ್ಟಿಗೆ ಕಡಲಬ್ಬರ ಇಳಿದಿದ್ದು, ಗಂಗೊಳ್ಳಿಯಲ್ಲಿ ಆ. 23ರಿಂದ ಮತ್ತೆ ಬೋಟುಗಳು ಕಡಲಿಗೆ ಇಳಿಯಲು ಸಜ್ಜಾಗಿವೆ. ಮಲ್ಪೆ ಬಂದರಿನಲ್ಲಿ ಈಗಾಗಲೇ ಒಮ್ಮೆ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಿದ್ದರೂ, ಬಳಿಕ ಕಡಲಬ್ಬರದಿಂದಾಗಿ ಮೀನುಗಾರಿಕೆಗೆ ತೆರಳಿದ ಬೋಟುಗಳು ವಾಪಸ್‌ ಬಂದಿದ್ದವು. ಆದರೆ ಗಂಗೊಳ್ಳಿಯಲ್ಲಿ ಈವರೆಗೆ ಮೀನುಗಾರಿಕೆ ಆರಂಭವಾಗಿರಲಿಲ್ಲ. ಆ. 23ರಿಂದ ಇಲ್ಲಿ ಬೋಟು ಗಳು ಕಡಲಿಗಿಳಿಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 

Advertisement

ಭರದ ಸಿದ್ಧತೆ
ಗಂಗೊಳ್ಳಿ ಬಂದರು ವಠಾರದ ಸ್ವಚ್ಛತೆ ಸೇರಿದಂತೆ ಇನ್ನಿತರ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿವೆ. ಬೋಟುಗಳ ದುರಸ್ತಿ, ಬೋಟುಗಳಿಗೆ ಬಣ್ಣ ಬಳಿದು ಅಗತ್ಯ ಸಾಮಗ್ರಿಗಳನ್ನು ಸೇರಿಸುವ ಕಾರ್ಯ ರಜಾ ಅವಧಿಯಲ್ಲಿ ನಡೆದಿದ್ದು, ಕೊನೆಯ ಹಂತದ ಬಲೆಗಳ ನೇಯುವಿಕೆ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಬೋಟುಗಳು ಮ್ಯಾಂಗನೀಸ್‌ ವಾರ್ಫ್‌ನಲ್ಲಿ ಲಂಗರು ಹಾಕಿವೆ. 

ಹೊಸ ಆಶಾವಾದ
ಕಳೆದ ಋತುವಿನಲ್ಲಿ ಮತ್ಸ್ಯಕ್ಷಾಮ, ವಾತಾವರಣದ ಬಿಸಿಯಿಂದಾಗಿ ಅವಧಿಗೆ ಮುನ್ನವೇ ಅಂದರೆ ಫೆಬ್ರವರಿಯಲ್ಲಿಯೇ ಮೀನುಗಾರಿಕೆ ಅಂತ್ಯವಾಗಿತ್ತು. ಕಳೆದ ಸಾಲಿನಲ್ಲಿ 33,115 ಮೆಟ್ರಿಕ್‌ ಟನ್‌ ಮೀನು ಸಂಗ್ರಹವಾಗಿದ್ದು, 37,458.5 ಲಕ್ಷ ರೂ. ಆದಾಯ ಬಂದಿತ್ತು. ಆದರೆ ಈ ಬಾರಿ ಹೊಸ ಆಶಾವಾದದೊಂದಿಗೆ ಮೀನುಗಾರರು ಕಡಲಿಗಿಳಿಯಲು ಸಿದ್ಧವಾಗಿದ್ದಾರೆ.

ಎಲ್ಲ ಸಿದ್ಧತೆ ಪೂರ್ಣ
ಕಳೆದೆರಡು ದಿನಗಳಿಂದ ಸ್ವಲ್ಪ ಮಟ್ಟಿಗೆ ಕಡಲಬ್ಬರ ಕಡಿಮೆಯಿದ್ದು, ಈ ಋತುವಿನ ಮೀನುಗಾರಿಕೆ ಆರಂಭಿಸಲು ಅನುಕೂಲಕರ ಪರಿಸ್ಥಿತಿಯಿದೆ. ಗಂಗೊಳ್ಳಿಯಲ್ಲಿ ಆ. 23ರಿಂದ ಮೀನುಗಾರಿಕೆ ಆರಂಭವಾಗುತ್ತಿದ್ದು, ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

20 ದಿನ ತಡ
ಹವಾಮಾನ ವೈಪರೀತ್ಯದಿಂದಾಗಿ 20 ದಿನ ತಡವಾಗಿ ಗಂಗೊಳ್ಳಿಯಲ್ಲಿ ಮೀನುಗಾರಿಕೆ ಆರಂಭವಾಗುತ್ತಿದೆ. ಸಾಮಾನ್ಯವಾಗಿ ಜು. 31 ಕ್ಕೆ 60 ದಿನಗಳ ಮೀನುಗಾರಿಕಾ ರಜಾ ಅವಧಿ ಮುಕ್ತಾಯಗೊಳ್ಳುತ್ತದೆ. ಆ ಬಳಿಕ ಅಂದರೆ ಆ.1 ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಳ್ಳುತ್ತದೆ. ಆದರೆ ಈ ಬಾರಿ ಮಳೆಯಬ್ಬರ ಹೆಚ್ಚಾಗಿದ್ದು, ಇದರಿಂದ ಸಮುದ್ರದಲ್ಲೂ ಮೀನುಗಾರಿಕೆಗೆ ಅನುಕೂಲಕರ ವಾತಾವರಣವಿರಲಿಲ್ಲ.

Advertisement

ಹಲವು ಸಮಸ್ಯೆಗಳು
ಹೊಸ ಮೀನುಗಾರಿಕೆ ಋತು ಆರಂಭವಾಗುತ್ತಿದ್ದರೂ, ಗಂಗೊಳ್ಳಿ ಮೀನುಗಾರಿಕಾ ಬಂದರಿನ ಹಳೆಯ ಜೆಟ್ಟಿ, ಗಂಗೊಳ್ಳಿ-ಕೋಡಿ ನಡುವಿನ ಅಳಿವೆ, ಮ್ಯಾಂಗನೀಸ್‌ ವಾರ್ಫ್‌, ಬ್ರೇಕ್‌ ವಾಟರ್‌ ಇಕ್ಕೆಲಗಳಲ್ಲಿ ಹೂಳು ಆವ‌ರಿಸಿರುವುದರಿಂದ ಮೀನುಗಾರಿಕೆಗೆ ಅಡ್ಡಿಯಾಗಲಿದೆ. ಟ್ರಾಲರ್‌, ಪರ್ಸೀನ್‌, ಪಾತಿ ಸೇರಿದಂತೆ ಒಟ್ಟು 3,700ಕ್ಕೂ ಹೆಚ್ಚು ಬೋಟುಗಳಿವೆ. ಆದರೆ ಬಂದರಿನಲ್ಲಿ ನಿಲ್ಲಲು ಜಾಗದ ಕೊರತೆಯಿದೆ. ಬಂದರಿನ ಪ್ರಾಂಗಣದ ಮೇಲ್ಛಾವಣಿ ದುರಸ್ತಿಯೂ ಆಗಿಲ್ಲ.

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next