Advertisement

ಮಾರ್ಕೆಟಲ್ಲಿ ಮೌನ ವ್ಯಾಪಾರ

11:43 AM Mar 28, 2017 | Team Udayavani |

ಲಕ್ನೋ/ಹೊಸದಿಲ್ಲಿ: ಒಂಟಿಯಾಗಿ ನಿಂತ ಗಡಿಯಾರದ ಮನೆ. ಬಿಕೋ ಎನ್ನುವ ರಸ್ತೆಗಳು. ಮಾಂಸದ ಸ್ಪರ್ಶವಿಲ್ಲದೆ ಮೂಲೆ ಸೇರಿದ ಕತ್ತಿ. ಶೆಟರ್‌ ಎಳೆದ ಅಂಗಡಿ. ಮನೆಗಳ ಬಾಗಿಲಿಗೆ ಹಸಿರು ಪರದೆ ಮತ್ತು ಪರದೆ ಹಿಂದಿನಿಂದ ಕೇಳಿಬರುವ ಅಗೋಚರ ದನಿಗಳು… ಉತ್ತರ ಪ್ರದೇಶದಲ್ಲಿ ಮಾಂಸ ಮಾರಾಟದ ಮೇಲೆ ನಿಷೇಧ ಹೇರಿರುವ ಬಿಜೆಪಿ ಸರಕಾರದ ಕ್ರಮ ಖಂಡಿಸಿ ಮಾಂಸ ಮಾರಾಟಗಾರರ ಒಕ್ಕೂಟ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದ ಮೊದಲದಿನ ಉತ್ತರ ಪ್ರದೇಶದ ಹಲವೆಡೆ ಕಂಡುಬಂದ ದೃಶ್ಯವಿದು.

Advertisement

ಮೀರಟ್‌ನ ಪ್ರಸಿದ್ಧ ಘಂಟಾಘರ್‌ ಮಾಂಸ ಮಾರುಕಟ್ಟೆಯಲ್ಲಿ ಭಾನುವಾರ ಕಂಡುಬಂದ ವಾತಾವರಣ ಇಷ್ಟು. ವಾರಂತ್ಯ ಬಂದರೆ ಹಿಂದೂ, ಮುಸ್ಲಿಂ ಗ್ರಾಹಕರಿಂದ ತಂಬಿರುತ್ತಿದ್ದ ಹಾಗೂ ಕೋಳಿ, ಕುರಿ ಮಾಂಸದ ಭಾರಿ ವಹಿವಾಟಿಗೆ ನೆಲೆಯಾಗಿದ್ದ ಈ ಮಾರುಕಟ್ಟೆ ಈ ಭಾನುವಾರ ಅಪ್ಪಟ ಮರುಭೂಮಿಯ ಕಳೆ ಹೊದ್ದು ನಿಂತಿತ್ತು. ಜನ ಸಂಚಾರವೇ ಇಲ್ಲದ ರಸ್ತೆಗಳು, ಮುಚ್ಚಿದ ಅಂಗಡಿಗಳು ಹಾಗೂ ಎಲ್ಲೋ ಒಂದು ಬದಿಯಲ್ಲಿ ಆಟವಾಡುತ್ತಿದ್ದ ಮಕ್ಕಳಷ್ಟೇ ಇದ್ದ ಮಾರುಕಟ್ಟೆ ಪ್ರದೇಶ ನಿಷೇಧಾಜ್ಞೆಯನ್ನು ನೆನಪಿಸುತ್ತಿತ್ತು. ಕಸಾಯಿ ಖಾನೆಗಳನ್ನು ಮುಚ್ಚಿಸುವ ಉತ್ತರ ಪ್ರದೇಶ ಸರಕಾರದ ನಿಲುವಿಗೆ ಇಡೀ ಮಾಂಸ ಮಾರಾಟಗಾರರ ಸಮುದಾಯ ನಲುಗಿ ಹೋಗಿದೆ. ಘಂಟಾಘರ್‌ನ 25 ಮಳಿಗೆಗಳು ಹಾಗೂ ಮೂರು ಶತಮಾನಗಳಷ್ಟು ಹಳೆಯದಾಗಿರುವ ಗುಡ್ರಿ ಬಜಾರ್‌ನಲ್ಲಿ ಮಾಂಸ ಮಾರಾಟ ಸಂಪೂರ್ಣ ಸ್ತಬ್ಧವಾಗಿದ್ದು, ಉತ್ತರ ಪ್ರದೇಶದ ನಾಗರಿಕರು ಸಸ್ಯಾಹಾರ ಅಥವಾ ಮೀನಿನ ಆಹಾರ ಸೇವಿಸುವ ಅನಿವಾರ್ಯತೆ ಎದುರಾಗಿದೆ.

ಸರಕಾರದ ಈ ಕ್ರಮಕ್ಕೆ ಮಾಂಸ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅನುಮತಿ ರಹಿತವಾಗಿ ಕಾರ್ಯಾಚರಿಸುವ ಕಸಾಯಿಖಾನೆಗಳ ಪತ್ತೆಗೆ ಈ ಕ್ರಮ ಕೈಗೊಂಡಿದ್ದಾಗಿ ಸಮಜಾಯಿಶಿ ನೀಡಿದೆ. ಆದರೆ ಸರಕಾರದ ಈ ನಿಲುವನ್ನು ಖಂಡಿಸುವ 78ರ ಹರೆಯದ ಮೊಹಮ್ಮದ ಆಸಿಫ್, “ಈ ಸರಕಾರಕ್ಕಿಂತ ಬ್ರಿಟಿಷರೇ ಎಷ್ಟೋ ಉತ್ತಮ. ಅವರೆಂದೂ ನಮ್ಮ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿರಲಿಲ್ಲ. ನಮ್ಮ ಮನೆಯಲ್ಲಿ 10 ಸದಸ್ಯರಿದ್ದೇವೆ. ಇವರು ಮಾಂಸ ಮಾರಾಟವನ್ನೇ ನಿಲ್ಲಿಸಿ ಎಂದರೆ ನಮ್ಮ ಜೀವನ ನಡೆಯುವುದಾದರೂ ಹೇಗೆ?. ಇದು ಇಲ್ಲಿನ ನೂರಾರು ಕುಟುಂಬಗಳ ದುಸ್ಥಿತಿ,” ಎನ್ನುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ವಿಷಮವಾಗಿದ್ದು, ‘ದನ ಮೇಯಿಸಲು ಹೊರಟರೆ, ಪೊಲೀಸರು ಅಡ್ಡಹಾಕಿ ಲಂಚ ಕೇಳುತ್ತಾರೆ’ ಎಂದು ರೈತರು ಹೇಳುತ್ತಾರೆ. ಜೊತೆಗೆ ದನ ಸಾಗಾಟ, ವ್ಯಾಪಾರಿಗಳಿಗೂ ಕುತ್ತು ಬಂದಿದೆ. 

ಒಂದು ವಾರದಲ್ಲಿ 50 ಆದೇಶ
ಯೋಗಿ ಆದಿತ್ಯನಾಥ್‌ ನೇತೃತ್ವದ ಸರಕಾರ ಅಧಿಕಾರ ವಹಿಸಿ ಒಂದು ವಾರ ಕಳೆದಿದೆ. ಈ ಅವಧಿಯಲ್ಲಿ ಬರೋಬ್ಬರಿ 50 ಆದೇಶಗಳನ್ನು ನೀಡಿದೆ. ಇದೇ ವೇಳೆ ಆಲಸಿ ಸರಕಾರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಅವರು ದಿನಕ್ಕೆ 18 – 20 ಗಂಟೆ ಕೆಲಸ ಮಾಡುವವರು ಮಾತ್ರ ನಮ್ಮ ಜತೆ ಇದ್ದರೆ ಸಾಕು ಎಂದು ಹೇಳಿದ್ದಾರೆ. 

ಸ್ಟಾರ್‌ ಪ್ರಚಾರಕ?
ಶೀಘ್ರದಲ್ಲಿಯೇ ನಡೆಯಲಿರುವ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಸ್ಟಾರ್‌ ಪ್ರಚಾರಕರಾಗುವ ಸಾಧ್ಯತೆ ಇದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜತೆಗೆ ನಡೆದ ಮುಖಂಡರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಗುಜರಾತ್‌ ಬಿಜೆಪಿ ಅಧ್ಯಕ್ಷ ಜಿತು ವಘಾನಿ ತಿಳಿಸಿದ್ದಾರೆ.

Advertisement

ಅಕ್ರಮ ಕಸಾಯಿಖಾನೆಗಳಿಗೆ ಮಾತ್ರ ನಿಷೇಧ
ಈ ಕುರಿತು ಪ್ರತಿಕ್ರಿಯಿಸಿರುವ ಉ.ಪ್ರ ಆರೋಗ್ಯ ಸಚಿವ ಸಿದ್ಧಾರ್ಥನಾಥ್‌ ಸಿಂಗ್‌, ‘ಅಕ್ರಮ ಮಾಂಸ ವ್ಯಾಪಾರಿಗಳ ವಿರುದ್ಧದ ಕ್ರಮ ಇದಾಗಿದ್ದು, ಅನುಮತಿ ಹೊಂದಿರುವ ವ್ಯಾಪಾರಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೋಳಿ ಮಾಂಸ ಹಾಗೂ ಮೀನು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಾವುದೇ ಆದೇಶ ಹೊರಡಿಸಿಲ್ಲ. ಹಾಗೇ ಈ ವಿಷಯವಾಗಿ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ,’ ಎಂದು ಹೇಳಿದ್ದಾರೆ. ‘ಅನುಮತಿ ಪತ್ರದಲ್ಲಿನ ನಿಯಮಗಳ ಅನ್ವಯ ಕಸಾಯಿಖಾನೆಗಳಲ್ಲಿ ಸೀಸಿಟಿವಿ ಅಳವಡಿಕೆ ಕಡ್ಡಾಯ. ಈ ನಿಯಮ ಉಲ್ಲಂಘಿಸಿದ ಕಸಾಯಿ ಖಾನೆಗಳ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು ಎಂದಿದ್ದಾರೆ.

ಈ ಸರಕಾರಕ್ಕಿಂತ ಬ್ರಿಟಿಷರೇ ಎಷ್ಟೋ ಉತ್ತಮ. ಅವರೆಂದೂ ನಮ್ಮ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿರಲಿಲ್ಲ. ಬದಲಿಗೆ ಐತಿಹಾಸಿಕ ಗುಡ್ರಿ ಬಜಾರ್‌ ಬ್ರಿಟಿಷರ ಅಚ್ಚುಮೆಚ್ಚಿನ ಮಾರುಕಟ್ಟೆಯಾಗಿತ್ತು.
– ಮೊಹಮ್ಮದ ಆಸಿಫ್, ಮಾಂಸ ಮಾರಾಟಗಾರ

ಅಕ್ರಮ ಕಸಾಯಿಖಾನೆ ಮುಚ್ಚುವ ಉ.ಪ್ರ. ಸರಕಾರದ ನಿರ್ಧಾರಕ್ಕೆ ‘ಕೋಮು‌’ದ ಬಣ್ಣ ಸರಿಯಲ್ಲ. ವರದಿಯೊಂದರ ಪ್ರಕಾರ, ರಾಜ್ಯದಲ್ಲಿರುವ 126 ಕಸಾಯಿ ಖಾನೆಗಳ ಪೈಕಿ, ಅನುಮತಿ ಇರುವುದು ಒಂದಕ್ಕೆ ಮಾತ್ರ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ನಿರ್ಧರಿಸಲಾಗಿದೆ. 
– ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next